BIG BREAKING: ಕೆಎಸ್​​ಆರ್​​ಟಿಸಿ ಟಿಕೆಟ್​ ದರ ಭಾರೀ ಹೆಚ್ಚಳ – ಖಾಸಗಿ ಬಸ್​ಗಳಂತೆ KSRTCಯಿಂದಲೂ ಸುಲಿಗೆ

ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಎಸ್​ಆರ್​ಟಿಸಿ) ಬಸ್​ ಪ್ರಯಾಣ ದರವನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಿದೆ.

ರಜಾ ದಿನಗಳು ಮತ್ತು ವಾರಾಂತ್ಯದಲ್ಲಿ ನಗರಗಳ ನಡುವೆ ಸಂಚರಿಸುವ ಕೆಎಸ್​ಆರ್​​ಟಿಸಿ ನಾನ್​ ಎಸಿ ಸ್ಲೀಪರ್​ ಮತ್ತು ರಾಜಹಂಸ ಬಸ್​ಗಳಲ್ಲಿ ಪ್ರಯಾಣ ದರ ಭಾರೀ ಏರಿಕೆ ಕಂಡಿದೆ. 

ಉದಾಹರಣೆ 1:

ಬೆಂಗಳೂರಿಂದ ಕಾರ್ಕಳಕ್ಕೆ ಸಂಚರಿಸುವ ನಾನ್​ ಎಸಿ ಸ್ಲೀಪರ್​ ಬಸ್​ ಪ್ರಯಾಣ ದರ 835 ರೂಪಾಯಿಗೆ ಹೆಚ್ಚಳವಾಗಿದೆ. ಕಳೆದ ವರ್ಷ ಏಪ್ರಿಲ್​ನಲ್ಲಿ ಈ ದರ 778 ರೂಪಾಯಿ ಇತ್ತು. ಅಂದರೆ 57 ರೂಪಾಯಿ ಏರಿಕೆಯಾಗಿದೆ.

ಉದಾಹರಣೆ 2:

ಇದೇ ಮಾರ್ಗದಲ್ಲಿ ವಾರಾಂತ್ಯ ಅಂದರೆ ಶುಕ್ರವಾರ ಮತ್ತು ಶನಿವಾರ ಪ್ರಯಾಣಿಸುವರು ಮತ್ತು ರಜಾ ದಿನಗಳಲ್ಲಿ ಪ್ರಯಾಣಿಸುವವರು 900 ರೂಪಾಯಿಗಿಂತಲೂ ಹೆಚ್ಚು ಹಣ ಪಾವತಿಸಬೇಕು.

ಏಪ್ರಿಲ್​ 14ರಂದು ಅಂಬೇಡ್ಕರ್ ಜಯಂತಿ, ಸರ್ಕಾರಿ ರಜಾ ದಿನ. ಈ ಹಿನ್ನೆಲೆಯಲ್ಲಿ ಹಿಂದಿನ ದಿನ ಪ್ರಯಾಣಿಸುವವರ ಸಂಖ್ಯೆ ಹೆಚ್ಚಳ.

ಈ ಹಿನ್ನೆಲೆಯಲ್ಲಿ ಏಪ್ರಿಲ್​ 13ರ ಗುರುವಾರ ಕೆಎಸ್​ಆರ್​ಟಿಸಿ ನಾನ್​ ಎಸಿ ಸ್ಲೀಪರ್​ ಪ್ರಯಾಣ ದರವನ್ನು ಬರೋಬ್ಬರೀ 992 ರೂಪಾಯಿಗೆ ಹೆಚ್ಚಿಸಿದೆ. ಅಂದರೆ ವಾರದ ಇತರೆ ದಿನಗಳಿಗೆ ಹೋಲಿಸಿದರೆ 157 ರೂ. ಹೆಚ್ಚಳ.

ಉದಾಹರಣೆ 3:

ಏಪ್ರಿಲ್​ 21 ಶುಕ್ರವಾರ. ಈ ದಿನ ನಾನ್​ ಎಸಿ ಸ್ಲೀಪರ್​ ಟಿಕೆಟ್​ ದರ 992 ರೂಪಾಯಿ. 

ಒಂದೇ ವರ್ಷದಲ್ಲಿ ಭಾರೀ ಹೆಚ್ಚಳ:

ಕಳೆದ ವರ್ಷ ಏಪ್ರಿಲ್​ ವೇಳೆಗೆ ಕೆಎಸ್​ಆರ್​​​ಟಿಸಿ ನಾನ್​ ಎಸಿ ಸ್ಲೀಪರ್​ ದರ ವಾರದ ದಿನಗಳಲ್ಲಿ (ರಜಾ ದಿನಗಳ ಹಿಂದಿನ ದಿನ ಹೊರತುಪಡಿಸಿ) 648ರಿಂದ 778 ರೂಪಾಯಿಗೆ ಅಂದರೆ 130 ರೂಪಾಯಿ ಹೆಚ್ಚಳ ಆಗಿತ್ತು.

ಶುಕ್ರವಾರದ ಪ್ರಯಾಣಕ್ಕೆ 852 ರೂಪಾಯಿ ಕೊಡ್ಬೇಕಿತ್ತು. ಈಗ ಈ ದರ 992 ರೂಪಾಯಿಗೆ ಏರಿಕೆ ಆಗಿದೆ.

ಅಂದರೆ ವಾರದ ದಿನಗಳಲ್ಲಿ ನಾನ್​ ಎಸಿ ಸ್ಲೀಪರ್​ಗೆ 187 ರೂಪಾಯಿ, ರಜೆ ಮತ್ತು ವಾರಾಂತ್ಯಕ್ಕೆ ಟಿಕೆಟ್​ ದರ 344 ರೂಪಾಯಿ ಹೆಚ್ಚಳ ಆಗಿದೆ.

ರಾಜಹಂಸ ಟಿಕೆಟ್​ ದರವೂ ಹೆಚ್ಚಳ:

ಇತ್ತ ರಾಜಹಂಸ ಟಿಕೆಟ್​ ದರವೂ ಭಾರೀ ಹೆಚ್ಚಳವಾಗಿದೆ. ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ರಾಜಹಂಸ ಟಿಕೆಟ್​ ದರ ಬೆಂಗಳೂರು-ಕಾರ್ಕಳ ಮಾರ್ಗದಲ್ಲಿ 857 ರೂಪಾಯಿ ಆಗಿದೆ. ವಾರದ ದಿನಗಳಲ್ಲಿ 751 ರೂಪಾಯಿ ಆಗಿದೆ.

ಕಳೆದ ವರ್ಷ ಈ ದರ ಕ್ರಮವಾಗಿ 715 ರೂಪಾಯಿ ಮತ್ತು 778 ರೂಪಾಯಿಗೆ ಹೆಚ್ಚಳವಾಗಿತ್ತು.

ಅದಕ್ಕೂ ಮೊದಲು ರಾಜಹಂಸ ಟಿಕೆಟ್​ ದರ ಈ ಮಾರ್ಗದಲ್ಲಿ 653 ರೂಪಾಯಿ ಇತ್ತು.

ಖಾಸಗಿ ಬಸ್‌ಗಳು ದುಬಾರಿ ಎಂಬ ಕಾರಣಕ್ಕೆ ದೂರ ಊರಿನ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ನಾನ್ ಎಸಿ ಸ್ಲೀಪರ್ ಕಡೆ ಮುಖ ಮಾಡಿದ್ದರು. ಅಗ್ಗದ ಪ್ರಯಾಣ ಮತ್ತು ಸುರಕ್ಷಿತ ಪ್ರಯಾಣ ಎಂಬ ಕಾರಣಕ್ಕೆ ಕೆಎಸ್‌ಆರ್‌ಟಿಸಿಗೆ ಪ್ರಯಾಣಿಕರು ಹೆಚ್ಚಾದರು.

ಆದರೆ ಈ ಹೆಚ್ಚಳವನ್ನೇ ದಾಳವಾಗಿ ಬಳಸಿಕೊಂಡಿರುವ ಕೆಎಸ್‌ಆರ್‌ಟಿಸಿ ಈಗ ಖಾಸಗಿ ಬಸ್‌ಗಳಂತೆ ದರ ಏರಿಸಿ ಪ್ರಯಾಣಿಕರಿಗೆ ಆಘಾತ ನೀಡಿದೆ.

 

ನಿಮ್ಮ ಅನುಭವವನ್ನೂ ಬರೆದು ತಿಳಿಸಿ ಈ ಸುದ್ದಿಗೆ ಕಮೆಂಟ್ ಮಾಡುವ ಮೂಲಕ.