2019ರ ಲೋಕಸಭಾ ಚುನಾವಣೆಯಲ್ಲಿ ಮರು ಆಯ್ಕೆ ಆದ ಕರ್ನಾಟಕದ ಬಿಜೆಪಿ ಸಂಸದರ ಆಸ್ತಿ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಿದೆ ಎಂದು ಪ್ರಜಾಭುತ್ವ ಸುಧಾರಣೆಗಾಗಿ ಇರುವ ಸಂಘ (ADR) ತನ್ನ ವರದಿಯಲ್ಲಿ ಹೇಳಿದೆ.
ಎಡಿಆರ್ ವರದಿ ಪ್ರಕಾರ 2019ರಲ್ಲಿ ಮರು ಆಯ್ಕೆ ಆದ ಸಂಸದರಲ್ಲಿ 71 ಮಂದಿಯ ಆಸ್ತಿ ಗಣನೀಯವಾಗಿ ಏರಿಕೆ ಆಗಿದೆ.
ಒಟ್ಟು ಸಂಸದರ ಪೈಕಿ ಬಿಜೆಪಿಯ 43 ಸಂಸದರ ಆಸ್ತಿ 2019ರ ಚುನಾವಣೆ ವೇಳೆಗೆ ಸರಾಸರಿ 15 ಕೋಟಿ ರೂಪಾಯಿಯಷ್ಟು ಅಂದರೆ ಶೇಕಡಾ 372ರಷ್ಟು ಹೆಚ್ಚಳ ಆಗಿದೆ. 10 ಮಂದಿ ಕಾಂಗ್ರೆಸ್ ಸಂಸದರ ಸರಾಸರಿ 16 ಕೋಟಿಯಷ್ಟು ಅಂದರೆ ಶೇಕಡಾ 189ರಷ್ಟು ಹೆಚ್ಚಳ ಆಗಿದೆ.
ಆಸ್ತಿ ಏರಿಕೆ ಕಂಡಿರುವ ಕರ್ನಾಟಕದ ಬಿಜೆಪಿ ಸಂಸದರು:
1. ರಮೇಶ್ ಚಂದ್ರ ಜಿಗಜಿಣಗಿ – ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದ. 2009ರ ಲೋಕಸಭಾ ಚುನಾವಣೆ ವೇಳೆ ಜಿಗಜಿಣಗಿ ಬಳಿ ಇದ್ದ ಒಟ್ಟು ಆಸ್ತಿ ಮೌಲ್ಯ – 1 ಕೋಟಿ ರೂ. 2014ರ ಲೋಕಸಭಾ ಚುನಾವಣೆ ವೇಳೆಗೆ ಸಂಸದರ ಆಸ್ತಿ – 18 ಕೋಟಿ ರೂಪಾಯಿಗೆ ಏರಿಕೆ. 2019ರ ಲೋಕಸಭಾ ಚುನಾವಣೆ ವೇಳೆಗೆ ಸಂಸದ ಜಿಗಜಿಣಗಿ ಆಸ್ತಿ ಮೌಲ್ಯ 50 ಕೋಟಿ ರೂಪಾಯಿ. ಅಂದರೆ ಸಂಸದ ಜಿಗಜಿಣಗಿ ಅವರ ಆಸ್ತಿ ಬರೋಬ್ಬರೀ ಶೇಕಡಾ 4,189ರಷ್ಟು ಹೆಚ್ಚಳವಾಗಿದೆ. ಮರು ಆಯ್ಕೆ ಆದ ಸಂಸದರ ಪೈಕಿ ಆಸ್ತಿ ಅತ್ಯಧಿಕ ಆಗಿರುವ ಸಂಸದ ಇವರೇ.
2. ಬಿ ವೈ ರಾಘವೇಂದ್ರ – ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ – ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ. 2009ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ವೇಳೆ ಇವರ ಬಳಿ ಇದ್ದ ಆಸ್ತಿ ಮೌಲ್ಯ – 6 ಕೋಟಿ ರೂ. 2014ರ ಲೋಕಸಭಾ ಚುನಾವಣೆಯಲ್ಲಿ ಇವರ ಸಂಪತ್ತು ಬರೋಬ್ಬರೀ 58 ಕೋಟಿ ರೂಪಾಯಿಗೆ ಏರಿಕೆ ಆಯಿತು. 2019ರ ಲೋಕಸಭಾ ಚುನಾವಣೆ ವೇಳೆಗೆ ಇವರ ಸಂಪತ್ತು 67 ಕೋಟಿ ರೂಪಾಯಿಗೆ ಹೆಚ್ಚಳ ಆಯಿತು. ಅಂದರೆ ರಾಘವೇಂದ್ರ ಅವರ ಸಂಪತ್ತು ಶೇಕಡಾ 917ರಷ್ಟು ಹೆಚ್ಚಳ ಕಂಡಿದೆ.
3. ಪಿ ಸಿ ಮೋಹನ್ – ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ. 2009ರಲ್ಲಿ ಸಂಸದ ಪಿ ಸಿ ಮೋಹನ್ ಅವರ ಬಳಿ ಇದ್ದ ಒಟ್ಟು ಅಸ್ತಿ – 5 ಕೋಟಿ ರೂಪಾಯಿ. 2014ರ ಲೋಕಸಭಾ ಚುನಾವಣೆ ವೇಳೆ ಇವರ ಸಂಪತ್ತು 47 ಕೋಟಿ ರೂಪಾಯಿಗೆ ಹೆಚ್ಚಳ ಆಯಿತು. 2019ರ ಲೋಕಸಭಾ ಚುನಾವಣೆ ವೇಳೆಗೆ ಸಂಸದ ಪಿ ಸಿ ಮೋಹನ್ ಸಂಪತ್ತು 75 ಕೋಟಿ ರೂಪಾಯಿಗೆ ಹೆಚ್ಚಳ ಆಯಿತು. ಅಂದರೆ ಬಿಜೆಪಿ ಸಂಸದ ಪಿ ಸಿ ಮೋಹನ್ ಅವರ ಸಂಪತ್ತು ಬರೋಬ್ಬರೀ ಶೇಕಡಾ 1,306ರಷ್ಟು ಹೆಚ್ಚಳ ಕಂಡಿದೆ.
4. ಶಿವಕುಮಾರ್ ಉದಾಸಿ – ಹಾವೇರಿ ಲೋಕಸಭಾ ಕ್ಷೇತ್ರದ ಸಂಸದರು. 2009ರಲ್ಲಿ ಸಂಸದ ಶಿವಕುಮಾರ್ ಉದಾಸಿ ಅವರ ಬಳಿ ಇದ್ದ ಆಸ್ತಿ – 32 ಕೋಟಿ ರೂ. 2014ರ ಲೋಕಸಭಾ ಚುನಾವಣೆ ವೇಳೆ ಇವರ ಬಳಿ ಇದ್ದ ಸಂಪತ್ತು – 57 ಕೋಟಿ ರೂಪಾಯಿ. 2019ರ ಲೋಕಸಭಾ ಚುನಾವಣೆ ವೇಳೆಗೆ ಸಂಸದ ಶಿವಕುಮಾರ್ ಉದಾಸಿ ಬಳಿ ಇದ್ದ ಸಂಪತ್ತು ಬರೋಬ್ಬರಿ 71 ಕೋಟಿ ರೂಪಾಯಿ. ಅಂದರೆ ಶಿವಕುಮಾರ್ ಉದಾಸಿ ಅವರ ಸಂಪತ್ತು ಶೇಕಡಾ 117ರಷ್ಟು ಹೆಚ್ಚಳ ಕಂಡಿದೆ.
5. ಡಿ ವಿ ಸದಾನಂದಗೌಡ – ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ. 2009ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ವೇಳೆ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಅವರ ಬಳಿ ಇದ್ದ ಆಸ್ತಿ ಮೌಲ್ಯ ಕೇವಲ – 1 ಕೋಟಿ ರೂಪಾಯಿ. ಆದರೆ 2019ರ ಲೋಕಸಭಾ ಚುನಾವಣೆ ವೇಳೆ ಡಿವಿಎಸ್ ಅವರ ಬಳಿ ಇರುವ ಸಂಪತ್ತು ಬರೋಬ್ಬರೀ 20 ಕೋಟಿ ರೂಪಾಯಿಗೆ ಹೆಚ್ಚಳ ಆಯಿತು. 2014ರ ಲೋಕಸಭಾ ಚುನಾವಣೆ ವೇಳೆಗೆ ಇವರು 9 ಕೋಟಿ ರೂಪಾಯಿ ಮೌಲ್ಯದ ಸಂಪತ್ತು ಹೊಂದಿದ್ದರು. ಅಂದರೆ ಸಂಸದ ಡಿವಿಎಸ್ ಅವರ ಆಸ್ತಿ ಬರೋಬ್ಬರೀ ಶೇಕಡಾ 1,356ರಷ್ಟು ಹೆಚ್ಚಳವಾಗಿದೆ.
6. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರು. 2009ರ ಲೋಕಸಭಾ ಚುನಾವಣೆ ವೇಳೆ ಸಚಿವ ಜೋಶಿ ಬಳಿ ಇದ್ದ ಸಂಪತ್ತು ಕೇವಲ 1 ಕೋಟಿ ರೂಪಾಯಿ. ಆದರೆ ಜೋಶಿ ಅವರ ಸಂಪತ್ತು 2019ರ ವೇಳೆಗೆ 11 ಕೋಟಿ ರೂಪಾಯಿಗೆ ಹೆಚ್ಚಳ ಆಯಿತು. 2014ರಲ್ಲಿ 4 ಕೋಟಿ ರೂಪಾಯಿಗೆ ಏರಿಕೆ ಆಗಿತ್ತು. ಅಂದರೆ ಜೋಶಿ ಅವರ ಸಂಪತ್ತಿನಲ್ಲಿ ಶೇಕಡಾ 673ರಷ್ಟು ಹೆಚ್ಚಳ ಆಗಿದೆ.
7. ಅನಂತ್ಕುಮಾರ್ ಹೆಗಡೆ – ಮಾಜಿ ಕೇಂದ್ರ ಸಚಿವರು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರು. 2014ರ ಲೋಕಸಭಾ ಚುನಾವಣೆ ವೇಳೆ ಇವರ ಬಳಿ ಇದ್ದ ಸಂಪತ್ತು ಕೇವಲ 64 ಲಕ್ಷ ರೂಪಾಯಿ. ಆದರೆ 2019ರ ಚುನಾವಣೆಗೆ ಇವರ ಆಸ್ತಿ ಬರೋಬ್ಬರೀ 8 ಕೋಟಿ ರೂಪಾಯಿಗೆ ಏರಿಕೆ ಆಗಿದೆ. 2014ರಲ್ಲಿ 3 ಕೋಟಿ ರೂಪಾಯಿಗೆ ಏರಿಕೆ ಆಗಿತ್ತು. ಅಂದರೆ ಸಂಸದ ಅನಂತ್ಕುಮಾರ್ ಹೆಗಡೆ ಅವರ ಸಂಪತ್ತು ಶೇಕಡಾ 1,219ರಷ್ಟು ಹೆಚ್ಚಳವಾಗಿದೆ.
8. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ – ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರು. ನಳೀನ್ ಕುಮಾರ್ ಕಟೀಲ್ ಅವರ ಆಸ್ತಿ 2009ರಲ್ಲಿ 53 ಲಕ್ಷ ರೂಪಾಯಿ ಇತ್ತು.2014ರ ಚುನಾವಣೆ ವೇಳೆಗೆ 93 ಲಕ್ಷ ರೂಪಾಯಿಗೆ ಮತ್ತು 2019ರ ಲೋಕಸಭಾ ಚುನಾವಣೆ ವೇಳೆಗೆ 1 ಕೋಟಿ ರೂಪಾಯಿಗೆ ಹೆಚ್ಚಳ ಆಯಿತು. ಇವರ ಆಸ್ತಿಯಲ್ಲಿ ಶೇಕಡಾ 172ರಷ್ಟು ಹೆಚ್ಚಳ ಆಗಿದೆ.