ಜಯಪ್ರಕಾಶ್​ ಹೆಗ್ಡೆ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಚರ್ಚೆ – ಕಾರ್ಕಳದಿಂದ ಕಾಂಗ್ರೆಸ್​ ಟಿಕೆಟ್​ ಭರವಸೆ

ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಯಾರು..? ಮೂಲಗಳ ಪ್ರಕಾರ ಸಚಿವ ಸುನಿಲ್​ ಕುಮಾರ್​ ವಿರುದ್ಧ ಮಾಜಿ ಸಚಿವ ಜಯಪ್ರಕಾಶ್​ ಹೆಗ್ಡೆ ಅವರನ್ನು ಕಣಕ್ಕಿಳಿಸುವ ಬಗ್ಗೆ ಯೋಚನೆ ಮಾಡುತ್ತಿದೆ.

ಮೂಲಗಳ ಪ್ರಕಾರ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಅವರೇ ಜಯಪ್ರಕಾಶ್​ ಹೆಗ್ಡೆ ಅವರನ್ನು ಮತ್ತೆ ಕಾಂಗ್ರೆಸ್​ ಬರುವಂತೆ ಆಹ್ವಾನ ನೀಡಿದ್ದಾರೆ.

ಜಯಪ್ರಕಾಶ್​ ಹೆಗ್ಡೆ ಅವರಿಗೆ ಕಾರ್ಕಳದಿಂದ ಕಾಂಗ್ರೆಸ್​ನಿಂದ ಟಿಕೆಟ್​ ನೀಡುವ ಭರವಸೆಯನ್ನೂ ಕೊಟ್ಟಿದ್ದಾರೆ ಎನ್ನಲಾಗಿದೆ.

ಹೆಗ್ಡೆ ಅವರು ಸದ್ಯ ಕರ್ನಾಟಕ ರಾಜ್ಯ ಹಿಂದುಳಿದ ಆಯೋಗಗಳ ಅಧ್ಯಕ್ಷರು. ಆ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಕೊಟ್ಟು ಚುನಾವಣೆಗೆ ಸ್ಪರ್ಧೆ ಮಾಡಲು ಉತ್ಸುಕರಾಗಿದ್ದಾರೆ.

ಸದ್ಯಕ್ಕೆ ಕಾರ್ಕಳದಲ್ಲಿ ಕಾಂಗ್ರೆಸ್​​ಗೆ ಪ್ರಬಲ ಅಭ್ಯರ್ಥಿಗಳಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಕಳ ಕಾಂಗ್ರೆಸ್​ ನಾಯಕರು ಕೆಲ ತಿಂಗಳಿಂದ ಹೆಗ್ಡೆ ಅವರನ್ನು ಕಾಂಗ್ರೆಸ್​​ಗೆ ಕರೆತರುವ ಪ್ರಯತ್ನವನ್ನು ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಮುಂದೆ ಅಂಥದ್ದೊಂದು ಪ್ರಸ್ತಾಪವನ್ನೂ ಇಟ್ಟಿದ್ದರು.

ಈಗ ಸ್ವತಃ ಕೆಪಿಸಿಸಿ ಅಧ್ಯಕ್ಷರೇ ಹೆಗ್ಡೆ ಅವರ ಜೊತೆಗೆ ಮಾತಾಡಿರುವ ಕಾರಣ ಕಾರ್ಕಳ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.

ಹೆಗ್ಡೆ ಅವರು ಬಂಟ ಸಮುದಾಯದವರು. ಜನಪ್ರಿಯ ನಾಯಕ, ಶುದ್ಧ ಹಸ್ತ ಮತ್ತು ಪ್ರಾಮಾಣಿಕ.

2013ರಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆದಿದ್ದ ಉಪ ಚುನಾವಣೆಯಲ್ಲಿ ಆಗ ಬಿಜೆಪಿ ಅಭ್ಯರ್ಥಿ ಆಗಿದ್ದ ಸುನಿಲ್​ ಕುಮಾರ್​ ಅವರನ್ನು ಸೋಲಿಸಿದ್ದರು.

ಈಗ ಮತ್ತೆ ಕಾರ್ಕಳದಲ್ಲಿ ಅದೇ ಸುನಿಲ್​ ಕುಮಾರ್​ ವಿರುದ್ಧ ಕಾಂಗ್ರೆಸ್​​ನಿಂದ ಹೆಗ್ಡೆ ಅವರು ನಿಂತರೆ ಕ್ಷೇತ್ರದಲ್ಲಿ ಚುನಾವಣಾ ಲೆಕ್ಕಾಚಾರ ಬದಲಾಗಬಹುದು ಎನ್ನುವುದು ಕ್ಷೇತ್ರದ ಜನರ ಮಾತು.

LEAVE A REPLY

Please enter your comment!
Please enter your name here