ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಹಾಲಿ ಶಾಸಕ ಎ ಟಿ ರಾಮಸ್ವಾಮಿ ಅವರು ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಎಲ್ಲರೂ ಪ್ರಜ್ವಲ್ ರೇವಣ್ಣ ಅವರು ಸ್ಪರ್ಧೆ ಮಾಡಲಿ ಎಂದು ಹೇಳಿದ್ದರು. ಆದ್ರೆ ನಾನು ಮಾತ್ರ ಪ್ರಜ್ವಲ್ ರೇವಣ್ಣ ಹೆಸರು ಹೇಳಲಿಲ್ಲ. ದೇವೇಗೌಡರಂತಹ ಮುತ್ಸದ್ದಿಯನ್ನು ಜಿಲ್ಲೆಯಿಂದ ಹೊರಗೆ ಕಳುಹಿಸುವುದು ನನ್ನ ಆತ್ಮ ಒಪ್ಪಿರಲಿಲ್ಲ. ಹೀಗಾಗಿ ಆತ್ಮಸಾಕ್ಷಿಯಂತೆ ಪ್ರಜ್ವಲ್ ಹೆಸರು ಹೇಳಲಿಲ್ಲ. ಅದಕ್ಕೆ ಕೆಲವರಿಗೆ ನನ್ನ ಮೇಲೆ ಕೋಪ ಇರಬಹುದು. ದೇವೇಗೌಡರು ಹಾಸನ ಜಿಲ್ಲೆ ಬಿಟ್ಟು ತುಮಕೂರಲ್ಲಿ ಸ್ಪರ್ಧೆ ಮಾಡುವುದು ನನಗೆ ಇಷ್ಟ ಇರಲಿಲ್ಲ.
ಎಂದು ಶಾಸಕ ಎ ಟಿ ರಾಮಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಅರಕಲಗೂಡಿನಿಂದ ತಮಗೆ ಟಿಕೆಟ್ ತಪ್ಪಿದ ಬಗ್ಗೆ ಎ ಟಿ ರಾಮಸ್ವಾಮಿ ಕಿಡಿಕಾರಿದ್ದಾರೆ.
ಇದೊಂದು ಸ್ವೇಚ್ಛಾಚಾರದ ರಾಜಕಾರಣ. ನಾನು ಹೊರಗಡೆಯವರನ್ನು ಯಾಕೆ ದೂಷಣೆ ಮಾಡಲಿ. ಮನೆಯೊಳಗೆ ಇರುವ ಜನರೇ ತಾನೇ ಹಾಳು ಮಾಡೋದು. ಹೊರಗಿನವರು ಹೇಗೆ ಹಾಳು ಮಾಡುತ್ತಾರೆ..? ಅವರ ಮನೆಗೆ ಅವರೇ ಬೆಂಕಿ ಹಾಕಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅದು ಯಾರನ್ನು ಸುಡ್ತದೆ ಎಂದು ಕಾದು ನೋಡಿ
ಎಂದು ಪ್ರತಿಕ್ರಿಯಿಸಿದ್ದಾರೆ.
ಸುಳ್ಳು ಹೇಳಲಿಕ್ಕೆ ತುಂಬಾ ಭಯಪಡ್ತೀನಿ ನಾನು. ಸತ್ಯ ಹೇಳಲಿಕ್ಕೆ ನಾನು ಹಿಂಜರಿಯುವುದಿಲ್ಲ. ನಾನು ನೆಮ್ಮದಿಯಾಗಿ, ಸಂತೋಷವಾಗಿ, ಖುಷಿಯಾಗಿದ್ದೀನಿ. ನಾನು ಸ್ವಾರ್ಥಕ್ಕಾಗಿ ರಾಜಕಾರಣ ಮಾಡಿಲ್ಲ, ಮಾಡಲ್ಲ. ರಾಜಕಾರಣದಲ್ಲಿ ಖಂಡಿತವಾಗಿಯೂ ಮುಂದುವರೆಯುತ್ತೇನೆ. ಎಲ್ಲಿಯವರೆಗೆ ನನ್ನ ಶಕ್ತಿ ಇರುತ್ತದೆ. ಅಲ್ಲಿಯವರೆಗೆ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡ್ತೀನಿ