ಸಿದ್ದರಾಮಯ್ಯ ನಿಮಗೆಷ್ಟು ಗೊತ್ತು? ಟಗರು ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯಗಳು..

ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗೆಗೆ ಸಾಕಷ್ಟು ವಿಚಾರಗಳು ಎಲ್ಲರಿಗೂ ಗೊತ್ತಿರುತ್ತವೆ. ಆದರೂ, ಅವರ ವಿಚಾರದಲ್ಲಿ ನಿಮಗೆ ಗೊತ್ತಿಲ್ಲದ ಸಾಕಷ್ಟು ಕುತೂಹಲಕಾರಿ ವಿಚಾರಗಳಿವೆ.. ಅವುಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಿದೆ ನಿಮ್ಮ ಪ್ರತಿಕ್ಷಣ ನ್ಯೂಸ್ ತಂಡ.

ಏಕೈಕ ಪದವಿಧರ
ಸಿದ್ದರಾಮಯ್ಯ ಅವರ ಕುಟುಂಬದಲ್ಲಿ ಇವರೊಬ್ಬರೇ ಪದವಿಧರ.. ಸಿದ್ದರಾಮಯ್ಯ ಅವರ ಒಬ್ಬ ಅಣ್ಣ, ಇಬ್ಬರು ಅಕ್ಕಂದಿರು, ಇಬ್ಬರು ತಮ್ಮಂದಿರ ಪೈಕಿ ಯಾರೊಬ್ಬರು 10 ನೇ ತರಗತಿ ದಾಟಿದವರಲ್ಲ

ಮೊದಲ ದುಡಿಮೆ
ಸಿದ್ದರಾಮಯ್ಯ ಅವರ ಮೊದಲ ದುಡಿಮೆ ಐದು ರೂಪಾಯಿ. ಸುತ್ತೂರು ಮಠದ ರಾಜೇಂದ್ರ ಸ್ವಾಮೀಜಿಗಳ ಮುಂದೆ ವೀರಕುಣಿತ ಪ್ರದರ್ಶನ ಮಾಡಿದ್ದ ಸಿದ್ದರಾಮಯ್ಯಗೆ ಐದು ರೂಪಾಯಿ ಬಹುಮಾನ ಸಿಕ್ಕಿತ್ತು. ಅದೇ ಇವರ ಮೊದಲ ಗಳಿಕೆ.

ಮೊದಲ ವಾಹನ
ಸಿದ್ದರಾಮಯ್ಯ ಅವರ ಮೊದಲ ವಾಹನ ಲ್ಯಾಂಬ್ರೆಟ್ಟಾ ಸ್ಕೂಟರ್..ಸಿದ್ದರಾಮಯ್ಯ ಶಾಸಕರಾದ ಸಂದರ್ಭದಲ್ಲಿ.. ಮೊದಲ ಬಾರಿಗೆ ಮಂತ್ರಿಗಳಾದ ಸಂದರ್ಭದಲ್ಲಿಯೂ ಮೈಸೂರಿಗೆ ಬಂದಾಗ ಲ್ಯಾಂಬ್ರೆಟ್ಟಾ ಸ್ಕೂಟರ್ ಅನ್ನೇ ಓಡಾಡಲು ಬಳಸುತ್ತಿದ್ದರು.

ಅಪ್ಪ ಬಯಸಿದ್ದು ಡಾಕ್ಟರ್
ಸಿದ್ದರಾಮಯ್ಯ ಡಾಕ್ಟರ್ ಆಗಬೇಕೆಂದು ಅವರ ತಂದೆಯ ಬಯಕೆಯಾಗಿತ್ತು. ಆದರೆ, ಪಿಯುಸಿಯಲ್ಲಿ ನಿರೀಕ್ಷಿತ ಅಂಕ ಗಳಿಸದ ಸಿದ್ದರಾಮಯ್ಯಗೆ ತಂದೆಯ ಆಸೆಯನ್ನು ನೆರವೇರಿಸಲು ಆಗಲಿಲ್ಲ. ಸಿದ್ದರಾಮಯ್ಯ ಪಡೆದಿದ್ದು ಲಾ ಪದವಿ

ಕೆಲವು ದಿನ ಕಾನೂನು ಪಾಠ
ಸಿದ್ದರಾಮಯ್ಯ ಅವರು ತಮ್ಮ ಆರಂಭಿಕ ದಿನಗಳಲ್ಲಿ ಕೆಲವು ಕಾಲ ಉಪನ್ಯಾಸಕರಾಗಿಯೂ ಪಾಠ ಮಾಡಿದ್ದರು. ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದರು. ಆಗ ಅವರ ವೇತನ ತಿಂಗಳಿಗೆ 175 ರೂ.

ಚುನಾವಣೆಗೆ ನಾಲ್ಕು ದಿನ ಮೊದಲು ಕಾಡು ಸೇರಿದ್ದರು
ಅದು 1980.ಲೋಕಸಭೆ ಚುನಾವಣೆಗೆ ಲೋಕದಳದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ದರು. ಆದರೆ, ಕೈಯಲ್ಲಿ ಕಾಸೇ ಇರಲಿಲ್ಲ. ಹೀಗಾಗಿ, ಚುನಾವಣೆಗೆ ನಾಲ್ಕು ದಿನ ಇರುವಾಗ ಸಿದ್ದರಾಮಯ್ಯ ಗೆಳೆಯರೊಡನೆ ನಾಗರಹೊಳೆ ಅರಣ್ಯ ಸೇರಿದ್ದರು.. ಈ ಚುನಾವಣೆಯಲ್ಲಿ ಅವರಿಗೆ ಸೋಲಾಗಿತ್ತು.

ಸಿದ್ದರಾಮಯ್ಯ ಮೆಂಟರ್
ಅಬ್ದುಲ್ ನಜೀರ್ ಸಾಬ್ ಅವರನ್ನು ತಮ್ಮ ಮೆಂಟರ್ ಎಂದು ಸಿದ್ದರಾಮಯ್ಯ ಅವರು ಭಾವಿಸುತ್ತಾರೆ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿ ಮಾಡಿದ ಗರಿಮೆ ಅವರಿಗೆ ಸಲ್ಲುತ್ತದೆ. ನೀರ್ ಸಾಬ್ ಎಂದೇ ಅವರು ಪ್ರಸಿದ್ದರಾಗಿದ್ದರು.

ಪಂಚೆಗೆ ಸಿದ್ದರಾಮಯ್ಯ ಸೀಮಿತ
ಅದು 1992..ಸಿದ್ದರಾಮಯ್ಯಗೆ ಸ್ಕಿನ್ ಇನ್ಫೆಕ್ಷನ್ ಆಗಿತ್ತು. ವೈದ್ಯರು ಖಾದಿ ಬಟ್ಟೆಯನ್ನೇ ತೊಡುವಂತೆ ಸಲಹೆ ನೀಡಿದರು. ಆಗಿನಿಂದಲೂ ನಿರಂತರವಾಗಿ ಬಿಳಿ ಕಾಟನ್ ಪಂಚೆ, ಬಿಳಿ ಜುಬ್ಬಾ, ಬಿಳಿ ಶಲ್ಯ ಅವರ ಆಹಾರ್ಯವಾಯಿತು. ಸಿದ್ದರಾಮಯ್ಯ ಅವರು ಅವೆನ್ಯೂ ರಸ್ತೆಯ ಖಾದಿ ಭಂಡಾರದಿಂದಲೇ ಯಾವಾಗಲೇ ಬಟ್ಟೆ ಖರೀದಿ ಮಾಡುತ್ತಾರೆ

ಕುಸ್ತಿ ಪೈಲ್ವಾನ ಸಿದ್ದರಾಮಯ್ಯ
ಬಾಲ್ಯದಲ್ಲಿ ಅಪ್ಪನಿಗೆ ಗೊತ್ತಿಲ್ಲದೇ ಕುಸ್ತಿ ಕಲಿಯಲು ಹೋಗುತ್ತಿದ್ದರು. 1995ರಲ್ಲಿ ಲೇಜಿಸ್ಲೇಟರ್ಸ್ ಡೇ ಪ್ರಯುಕ್ತ ಆಯೋಜಿಸಿದ್ದ ಕುಸ್ತಿ ಪಂದ್ಯದಲ್ಲಿ ಬಸವರಾಜ ಹೊರಟ್ಟಿ ಅವರನ್ನು ಮಣಿಸಿದ್ದರು.ಲೇಜಿಸ್ಲೇಟರ್ಸ್ ಡೇ ಪಂದ್ಯಾವಳಿಗಳಲ್ಲಿ ಮೂರು ಬಾರಿ ಕುಸ್ತಿ ಪದಕ ಪಡೆದಿದ್ದಾರೆ. ಇತರೆ ಕ್ರೀಡೆಗಳಲ್ಲಿಯೂ ಸಿದ್ದರಾಮಯ್ಯ ಸದಾ ಮುಂದು.

ಟಿವಿ ನೋಡೋಕೆ ಇಂಟ್ರೆಸ್ಟ್
ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದ ಜಂಜಾಟದ ನಡುವೆಯೂ, ವಿರಾಮ ಸಿಕ್ಕಾಗಲೆಲ್ಲ ಟಿವಿ ನೋಡಲು ಬಯಸುತ್ತಾರೆ. ಸಾಮಾನ್ಯವಾಗಿ ರಾತ್ರಿ 10ರಿಂದ 11 ಗಂಟೆ ನಡುವಿನ ಅವಧಿಯಲ್ಲಿ ಅವರು ಹೆಚ್ಚಾಗಿ ಟಿವಿ ನೋಡುತ್ತಾರೆ. ಐಪಿಎಲ್ ಅದರಲ್ಲೂ ಆರ್​ಸಿಬಿ ಮ್ಯಾಚ್​ ಗಳನ್ನು ಕೂಡ ವೀಕ್ಷಿಸುತ್ತಾರೆ.

ಪದಗ್ರಹಣಕ್ಕೆ ಬಂದಿರಲಿಲ್ಲ ಸಿದ್ದರಾಮಯ್ಯ ಪತ್ನಿ ಪಾರ್ವತಿ
1977ರ ಮೇ 5ರಂದು ಸಿದ್ದರಾಮಯ್ಯ-ಪಾರ್ವತಿ ಅವರ ಮದುವೆ ನೆರವೇರಿತು. ಸಿದ್ದರಾಮಯ್ಯ ಅವರ ಜೊತೆಗೆ ಪತ್ನಿ ಪಾರ್ವತಿ ಎಂದಿಗೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ, ಪದಗ್ರಹಣ ಸಮಾರಂಭಕ್ಕೂ ಪಾರ್ವತಿ ಅವರು ಬಂದಿರಲಿಲ್ಲ.

ಸಿದ್ದರಾಮಯ್ಯ ಮನೆಗೆ ಊರಿಂದಲೇ ಕಾಳುಕಡ್ಡಿ
ಸಿದ್ದರಾಮಯ್ಯ ಅವರ ಬೆಂಗಳೂರು ಮನೆಗೆ ಈಗಲೂ ಸಿದ್ದರಾಮನಹುಂಡಿಯಿಂದಲೇ ಅಕ್ಕಿ, ರಾಗಿ ಮತ್ತು ಇತರೆ ದವಸಧಾನ್ಯಗಳು ರವಾನೆ ಆಗುತ್ತದೆ