ಇವತ್ತೇ ಮಾಡ್ಬೇಕಿತ್ತಾ ಪ್ರಮಾಣವಚನ ಸಮಾರಂಭ?- ಬಿಎಲ್ ಸಂತೋಷ್ ಪ್ರಶ್ನೆ

ಸಿಇಟಿ ಪರೀಕ್ಷೆ ನಡೆಯುವ ದಿನವೇ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರ ಪ್ರಮಾಣವಚನ ಆಯೋಜನೆ ಮಾಡಿರುವುದು ಎಷ್ಟು ಸರಿ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು ಪ್ರಶ್ನೆ ಮಾಡಿದ್ದಾರೆ.

ಶನಿವಾರ ಸಿಇಟಿ ಪರೀಕ್ಷೆ ನಡೆಯಲಿದ್ದು, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಪ್ರಮಾಣವಚನ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಪ್ರಮಾಣವಚನ ಕಾರ್ಯಕ್ರಮವನ್ನು ಎರಡು ದಿನಗಳ ಮಟ್ಟಿಗೆ ಮುಂದೂಡಬಹುದಲ್ಲವೇ ಎಂದು ಪ್ರಶ್ನಿಸಿ ಬಿಎಲ್ ಸಂತೋಷ್ ಟ್ವೀಟ್ ಮಾಡಿದ್ದಾರೆ.

ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೀಟ್ ಪರೀಕ್ಷೆ ದಿನ ಪ್ರಧಾನಿ ಮೋದಿ ರೋಡ್ ಶೋ ಮಾಡುವುದನ್ನು ಆಕ್ಷೇಪಿಸಿ ಟ್ವೀಟ್ ಮಾಡಿದ್ದರು. ನೀಟ್ ಪರೀಕ್ಷಾರ್ಥಿಗಳು ಮತ್ತಯ ಬೆಂಗಳೂರು ಜನರ ವಿರೋಧವನ್ನು ಧಿಕ್ಕರಿಸಿ ನರೇಂದ್ರ ಮೋದಿ ನಡೆಸಲಿರುವ ರೋಡ್ ಶೋ ಬೇಜವಾಬ್ದಾರಿತದ ನಡೆಯಾಗಿದೆ. ವಿದ್ಯಾರ್ಥಿಗಳಿಗೆ ಆಗುವ ತೊಂದರೆಗೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದ್ದರು. ಈಗ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ಏನಾಗಿದೆ. ಪ್ರಮಾಣವಚನ ಕಾರ್ಯಕ್ರಮವನ್ನು ಮುಂದೂಡಿದಲ್ಲಿ ಮಕ್ಕಳಿಗೆ ಆಗುವ ತೊಂದರೇ ತಪ್ಪುತ್ತದೆ ಅಲ್ಲವೇ ಎಂದು ಬಿಎಲ್ ಸಂತೋಷ್ ಟ್ವೀಟ್​ ಮಾಡಿದ್ದಾರೆ.

ಬಿಎಲ್ ಸಂತೋಷ್ ಅವರ ಟ್ವೀಟ್​ಗೆ ನೆಟ್ಟಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ತರಹೇವಾರಿ ಪ್ರಶ್ನೆಗಳನ್ನು ಕೇಳಿ ಬಿಎಲ್ ಸಂತೋಷ್ ಅವರನ್ನು ನೆಟ್ಟಿಗರು ಲೇವಡಿ ಮಾಡಿದ್ದಾರೆ.