ಡ್ಯಾಂನಲ್ಲಿ ಬಿದ್ದ ಮೊಬೈಲ್.. 21 ಲಕ್ಷ ಲೀಟರ್ ನೀರು ಖಾಲಿ ಮಾಡಿಸಿದ ಅಧಿಕಾರಿ

ಛತ್ತೀಸ್​ಘಡದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ಅಂಧಾ ದರ್ಬಾರ್ ನಡೆಸಿದ್ದಾರೆ. ತಮ್ಮ ಮೊಬೈಲ್ ನೀರಲ್ಲಿ ಬಿತ್ತು ಎಂಬ ಕಾರಣಕ್ಕೆ ಖೆರ್ಖಟ್ಟಾ ಜಲಾಶಯದಲ್ಲಿದ್ದ 21 ಲಕ್ಷ ಲೀಟರ್ ನೀರನ್ನು ಖಾಲಿ ಮಾಡಿಸಿದ್ದಾರೆ. ಎರಡು ದೊಡ್ಡ ಮೋಟಾರ್ ಪಂಪ್​ಗಳನ್ನು ಬಳಸಿ ನಿರಂತರವಾಗಿ ಮೂರು ದಿನಗಳ ಕಾಲ ನಿರಂತರವಾಗಿ ನೀರನ್ನು ಹೊರಹಾಕಿಸಿದ್ದಾರೆ.

ಕಂಕೇರ್ ಜಿಲ್ಲೆಯ ಆಹಾರ ಇಲಾಖೆ ಅಧಿಕಾರಿ ರಾಜೇಶ್ ವಿಶ್ವಾಸ್ ಇತ್ತೀಚಿಗೆ ತಮ್ಮ ಗೆಳೆಯರ ಜೊತೆಗೂಡಿ ಇಲ್ಲಿನ ಖೆರ್ಖಟ್ಟಾ ಜಲಾಶಯಕ್ಕೆ ಪ್ರವಾಸ ಹೋಗಿದ್ದರು. ಈ ಸಂದರ್ಭದಲ್ಲಿ  ಸೆಲ್ಫಿ ತೆಗೆದುಕೊಳ್ಳುವ ಆಕಸ್ಮಿಕವಾಗಿ ಮೊಬೈಲ್ ಜಲಾಶಯಕ್ಕೆ ಬಿದ್ದಿದೆ.

ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ಮೊಬೈಲ್ ಅದಾಗಿದ್ದ ಕಾರಣ.. ಜೊತೆಗೆ ಇಲಾಖೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಮೊಬೈಲ್​ನಲ್ಲಿ ಅಡಕವಾಗಿದ್ದ ಕಾರಣ ರಾಜೇಶ್ ವಿಶ್ವಾಸ್ ಸ್ಥಳೀಯ ಈಜುಗಾರರನ್ನು ಬಳಸಿಕೊಂಡು ಹುಡುಕಾಟ ನಡೆಸಿದ್ದರು. ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ.

 ಕೊನೆಗೆ ಈ ವಿಷಯವನ್ನು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ ರಾಜೇಶ್ ವಿಶ್ವಾಸ್​, ಎರಡು ಮೋಟಾರ್​ಗಳನ್ನು ಬಳಸಿಕೊಂಡು ನೀರನ್ನು ಖಾಲಿ ಮಾಡಿಸತೊಡಗಿದರು. ಸೋಮವಾರ ಸಂಜೆಯಿಂದ ಗುರುವಾರದವರೆಗೂ ನಿರಂತರವಾಗಿ 21 ಲಕ್ಷ ಲೀಟರ್ ನೀರನ್ನು ಜಲಾಶಯದಿಂದ ಖಾಲಿ ಮಾಡಿಸಿದರು.

ಕೊನೆಗೆ ನೀರಲ್ಲಿ ಬಿದ್ದಿದ್ದ ಮೊಬೈಲ್ ಏನೋ ಸಿಕ್ಕಿತು. ಆದರೆ, ಕೆಲಸಕ್ಕೆ ಮಾತ್ರ ಬರುತ್ತಿರಲಿಲ್ಲ. ಇತ್ತ ರಾಜೇಶ್​ ವಿಶ್ವಾಸ್​ ಮಾಡಿದ ಕೆಲಸ ತೀವ್ರ ಟೀಕೆಗೆ ಗುರಿಯಾಯಿತು. ಸಾರ್ವಜನಿಕವಾಗಿ ಭಾರೀ ಆಕ್ರೋಶ ವ್ಯಕ್ತವಾಯಿತು.

ಈ ಬೆನ್ನಲ್ಲೆ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿಗಳು, ಅಧಿಕಾರ ದುರ್ಬಳಕೆ ಆರೋಪದ ಮೇಲೆ ರಾಜೇಶ್ ವಿಶ್ವಾಸ್​ರನ್ನು ಸೇವೆಯಿಂದ ಅಮಾನತು ಮಾಡಿದೆ. ಉನ್ನತಮಟ್ಟದ ತನಿಖೆ ಮಾಡಿಸುವುದಾಗಿ ಮಂತ್ರಿ ಅಮರ್​ಜಿತ್ ಭಗತ್​  ಪ್ರಕಟಿಸಿದ್ದಾರೆ.

ಜಲಸಂಪನ್ಮೂಲ ಇಲಾಖೆ ಈಗ ಎಚ್ಚೆತ್ತಂತೆ ವರ್ತಿಸಿದೆ. ಸ್ವಲ್ಪ ನೀರು ಖಾಲಿ ಮಾಡಬಹುದು ಎಂತಿ ತಿಳಿಸಿದ್ದೆವು. ಅವರು ಇಷ್ಟು ನೀರು ಖಾಲಿ ಮಾಡಿಸುತ್ತಾರೆ ಎನ್ನುವುದು ಗೊತ್ತಿರಲಿಲ್ಲ ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ.