ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (HPCL) ಜೊತೆಗೆ ಮಂಗಳೂರು ರಿಫೈನರಿ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ (MRPL)ನ್ನು ವಿಲೀನ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಯೋಚಿಸುತ್ತಿದೆ ಎಂದು ಪ್ರಮುಖ ಇಂಗ್ಲೀಷ್ ದೈನಿಕ ಎಕಾನಮಿಕ್ ಟೈಮ್ಸ್ ವರದಿ ಮಾಡಿದೆ.
ವಿಲೀನದ ಬಗ್ಗೆ ಕೇಂದ್ರ ಇಂಧನ ಸಚಿವಾಲಯ ಪ್ರಸ್ತಾಪವೊಂದನ್ನು ಸಿದ್ಧಪಡಿಸುತ್ತಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಹೆಚ್ಪಿಸಿಎಲ್ ಮತ್ತು ಎಂಆರ್ಪಿಎಲ್ ಎರಡೂ ಕಂಪನಿಗಳು ತೈಲ ಮತ್ತು ಅನಿಲ ನಿಗಮ (ONGC) ಇದರ ಸಹವರ್ತಿ ಕಂಪನಿಗಳು.
ಎಂಆರ್ಪಿಎಲ್ನಲ್ಲಿ ಒಎನ್ಜಿಸಿ ಶೇಕಡಾ 71.63ರಷ್ಟು ಪಾಲು ಹೊಂದಿದ್ದರೆ, ಹೆಚ್ಪಿಸಿಎಲ್ ಶೇಕಡಾ 16.96ರಷ್ಟು ಶೇರು ಹೊಂದಿದೆ. ಎಂಅರ್ಪಿಎಲ್ನಲ್ಲಿರುವ ಸಾರ್ವಜನಿಕ ಷೇರು ಶೇಕಡಾ 11.42.
ಐದು ವರ್ಷಗಳ ಹಿಂದೆಯಷ್ಟೇ ಹೆಚ್ಪಿಸಿಎಲ್ನ್ನು ಒಎನ್ಜಿಸಿ ಸ್ವಾಧೀನಪಡಿಸಿಕೊಂಡಿತ್ತು.
ಆದರೆ ಹೆಚ್ಪಿಸಿಎಲ್ ಮತ್ತು ಎಂಆರ್ಪಿಎಲ್ ವಿಲೀನಕ್ಕೆ ಮುಂದಿನ ವರ್ಷದವರೆಗೂ ಕಾಯಬೇಕಾಗಬಹುದು. ಕಾರಣ ಕಳೆದ ವರ್ಷವಷ್ಟೇ ಎಂಆರ್ಪಿಎಲ್ನಲ್ಲಿ ಒಎಂಪಿಎಲ್ ವಿಲೀನವಾಗಿತ್ತು. ನಿಯಮಗಳ ಪ್ರಕಾರ ವಿಲೀನ ಮಾಡಿಕೊಂಡ ಕಂಪನಿ ಇನ್ನೊಂದು ಕಂಪನಿ ಜೊತೆಗೆ ವಿಲೀನ ಆಗಲು 2 ವರ್ಷದ ಅಂತರ ಕಡ್ಡಾಯ.
ಹೆಚ್ಪಿಸಿಎಲ್ನಲ್ಲಿ ಎಂಆರ್ಪಿಎಲ್ ವಿಲೀನದಿಂದ ಎಂಆರ್ಪಿಎಲ್ ಕರ್ನಾಟಕದ ಹೊರಗೆ ಮಾರುವ ತೈಲೋತ್ಪನ್ನಗಳ ಮೇಲೆ ಹಾಕಲಾಗುವ ಕೇಂದ್ರ ಮಾರಾಟ ತೆರಿಗೆಯನ್ನು ಉಳಿತಾಯ ಮಾಡಿಕೊಳ್ಳಬಹುದು ಎನ್ನುವುದು ವಿಲೀನದ ಹಿಂದಿನ ಪ್ರಮುಖ ಲೆಕ್ಕಾಚಾರ.
ADVERTISEMENT
ADVERTISEMENT