ರಿಯಲಿಸ್ಟಿಕ್ ಸಿನಿಮಾಗಳ ಪ್ರತಿಭಾವಂತ ಮತ್ತು ನಮ್ಮ ಮಣ್ಣಿನ ನಿರ್ದೇಶಕ ಮಂಸೋರೆ ಅವರು ಬೇಸರದಲ್ಲಿದ್ದಾರೆ. ನೆಟ್ ಫ್ಲಿಕ್ಸ್, ಪ್ರೈಮ್ ವಿಡಿಯೋದವರಿಗೆ ಕನ್ನಡ ಸಿನಿಮಾ ಬೇಡವಂತೆ.. ಏನು ಮಾಡೋದು ಎಂದು ಪ್ರಶ್ನಿಸಿದ್ದಾರೆ.
ಓಟಿಟಿಯಲ್ಲಿ ನಮ್ಮ ಸಿನಿಮಾ 19.20.21 ರಿಲೀಸ್ ಯಾವಾಗ ಎಂದು ಕೇಳುತ್ತಿರುವ ಸ್ನೇಹಿತರ ಗಮನಕ್ಕೆ.. ಪ್ರೈಮ್ ವೀಡಿಯೋ ಇನ್ ಸಂಸ್ಥೆಯವರಿಗೆ ನಮ್ಮ ರಿಯಾಲಿಸ್ಟಿಕ್ ಕನ್ನಡ ಕಂಟೆಂಟ್ ಸಿನಿಮಾಗಳು ಬೇಡವಂತೆ. ನೆಟ್ಫ್ಲಿಕ್ಸ್ ಇಂಡಿಯಾ, ನೆಟ್ ಫ್ಲಿಕ್ಸ್ ಸಂಸ್ಥೆಯವರು ಕನ್ನಡ ಸಿನಿಮಾಗಳನ್ನೇ ತೆಗೆದುಕೊಳ್ಳುವುದಿಲ್ಲವಂತೆ. ನಮ್ಮ ಈ ಸಿನಿಮಾವನ್ನು ಒಮ್ಮೆಯೂ ನೋಡದೇ ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ.
ಹೀಗೆಂದು ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅವರು ಟ್ವೀಟ್ ಮಾಡಿ ಬೇಸರ, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕೆಲವೇ ಗಂಟೆಗಳಲ್ಲಿ 80 ಸಾವಿರ ವೀವ್ಸ್ ಬಂದಿದೆ. ನೂರಾರು ಮಂದಿ ರೀ ಟ್ವೀಟ್ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ನಮ್ಮ ದುಡ್ಡು ನಮ್ಮ ಹಕ್ಕು.. ನಾವು ಚಂದಾದಾರರಾಗಿ ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋದವರಿಗೆ ನಮಗೆ ಈ ಸಿನಿಮಾ ಬೇಕೆಂದು ಬೇಡಿಕೆ ಇಡೋಣ.. ಅವರು ನಮ್ಮ ದುಡ್ಡಿಂದ ಅಲ್ಲವೇ ವ್ಯವಹಾರ ಮಾಡುತ್ತಿರವುದು ಎಂದು ತೇಜಸ್ವಿ ಕನ್ನಡಿಗ ಎನ್ನುವವರು ಟ್ವೀಟ್ ಮಾಡಿದ್ದಾರೆ. ಇದನ್ನು ಆಯಾ ಓಟಿಟಿ ಸಂಸ್ಥೆಗಳಿಗೆ ಟ್ಯಾಗ್ ಮಾಡಿದ್ದಾರೆ. ಕನ್ನಡ ಚಿತ್ರೋದ್ಯಮದ ಮಂದಿಯ ಮೌನವನ್ನು, ಕನ್ನಡ ಟಿವಿ ವಾಹಿನಿಗಳ ನಿರ್ಲಕ್ಷ್ಯವನ್ನು, ರಾಜಕಾರಣಿಗಳ ಧೋರಣೆಯನ್ನು ಪ್ರಶ್ನೆ ಮಾಡಿದ್ದಾರೆ.
ಆನೇಕಾಂತ್ ಬಾಹುಬಲಿ ಎನ್ನುವವರು ಟ್ವೀಟ್ ಮಾಡಿ, ನಮ್ಮ ಈ ಮನಸ್ಥಿತಿ ಬದಲಾಗಬೇಕಿದೆ. ಮೊದಲು ಚಿತ್ರಮಂದಿರದಲ್ಲಿ ಕನ್ನಡ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸಬೇಕು. ಓಟಿಟಿ ಅವರ ದೌಲತ್ತಿಗೆ ಪ್ರತ್ಯುತ್ತರವಾಗಿ ಕನ್ನಡ ಚಿತ್ರಗಳಿಗೆ ನಮ್ಮ ಸಂಪೂರ್ಣ ಸಮರ್ಥನೆ. ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳನ್ನು ನೋಡಿ ತೋರಿಸೋಣ ಎಂದು ಸವಾಲು ಹಾಕಿದ್ದಾರೆ.
ಇನ್ನೂ, ಕೆಲವರು ಬೇರೆ ಬೇರೆ ಓಟಿಟಿ ಫ್ಲಾಟ್ಫಾರಂಗಳಲ್ಲಿ ಏಕೆ ರಿಲೀಸ್ ಮಾಡಬಾರದು.. ಯೂಟ್ಯೂಬ್ನಲ್ಲಿಯೇ ಏಕೆ ರಿಲೀಸ್ ಮಾಡಬಾದು ಎಂದು ಪ್ರಶ್ನೆ ಮಾಡಿದ್ದಾರೆ. ಕೆಲವು ಪ್ರಶ್ನೆಗಳಿಗೆ ಉತ್ತರಿಸಿರುವ ಮಂಸೋರೆ ಅವರು, ನಿರ್ಮಾಪಕನಿಗೆ ಅಲ್ಪಸ್ವಲ್ಪ ದುಡ್ಡು ಬರಬೇಕು ಅಲ್ವಾ ಮುಂದೆ ಮತ್ತೊಂದು ಸಿನಿಮಾ ಮಾಡೋಕೆ.. ಎಂದಿದ್ದಾರೆ.
ಒಟ್ಟಿನಲ್ಲಿ ಮಂಸೋರೆ ಅವರ ಟ್ವೀಟ್, ಓಟಿಟಿ ಫ್ಲಾಟ್ಫಾರಂಗಳ ಕನ್ನಡ ಸಿನಿಮಾ ವಿರೋಧಿ ಧೋರಣೆಯನ್ನು ಅನಾವವರಣ ಮಾಡಿದೆ. ಕೆಲವರು ಬಾಯ್ಕಾಟ್ ನೆಟ್ಫ್ಲಿಕ್ಸ್, ಪ್ರೈಮ್ವಿಡಿಯೋ ಎನ್ನತೊಡಗಿದ್ದಾರೆ.
ADVERTISEMENT
ADVERTISEMENT