ಬೆಳಗಾವಿ ಜಿಲ್ಲೆಯ ವಂಟಮೂರಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿದ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಕೈಗೊಂಡಿರುವ ಪರಿಹಾರ ಕ್ರಮ ಮತ್ತು ತನಿಖೆಯಲ್ಲಾಗಿರುವ ಪ್ರಗತಿ ಬಗ್ಗೆ ಕರ್ನಾಟಕ ಹೈಕೋರ್ಟ್ ಸಮಾಧಾನ ವ್ಯಕ್ತಪಡಿಸಿದೆ.
ಸ್ವಯಂ ಪ್ರೇರಿತ ಪ್ರಕರಣ ಸಂಬಂಧ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಪಿ ವರಳೆ ಮತ್ತು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠ ಇವತ್ತು ವಿಚಾರಣೆ ನಡೆಸಿತು.
ಈ ವೇಳೆ ಸಂತ್ರಸ್ತ ಮಹಿಳೆಗೆ ರಾಜ್ಯ ಸರ್ಕಾರದಿಂದ ನೀಡಲಾಗಿರುವ ವೈದ್ಯಕೀಯ ಮತ್ತು ಆರ್ಥಿಕ ನೆರವಿನ ಬಗ್ಗೆ ಸರ್ಕಾರದ ಪರ ಹಾಜರಾಗಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮಾಹಿತಿ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಮಹಿಳೆಗೆ ಘೋಷಣೆ ಆಗಿರುವ ಸಂಪೂರ್ಣ 50 ಸಾವಿರ ರೂ. ಮೊತ್ತವನ್ನು ಯಾವುದೇ ಷರತ್ತುಗಳಿಲ್ಲದೇ ಬಿಡುಗಡೆಗೊಳಿಸಲು ಹೈಕೋರ್ಟ್ ಸೂಚಿಸಿದೆ. ನಿಯಮಗಳ ಪ್ರಕಾರ ಪ್ರಾಧಿಕಾರದಿಂದ ಘೋಷಣೆ ಆಗುವ ಪರಿಹಾರದ ಮೊತ್ತದಲ್ಲಿ ಅರ್ಧದಷ್ಟನ್ನೇ ಬಿಡುಗಡೆಗೊಳಿಸಿ ಉಳಿದ ಮೊತ್ತವನ್ನು ಆಕೆಯ ಹೆಸರಲ್ಲಿ ನಿಗದಿತ ಠೇವಣಿ ರೂಪದಲ್ಲಿ ಇಡಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಆ ನಿಯಮ ಬದಲಾಯಿಸಿ ಪೂರ್ಣ ಮೊತ್ತವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ಸೂಚಿಸಿದೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಟಿಜಿಎಸ್ ಮೂಲಕ ಸಂತ್ರಸ್ತೆ ಮಹಿಳೆಯ ಬ್ಯಾಂಕ್ ಖಾತೆಗೆ ಐದು ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ಜಮೆ ಮಾಡಲಾಗಿದೆ. ಜೊತೆಗೆ ಸಂತ್ರಸ್ತೆ ಪರಿಹಾರ ನಿಧಿಯಡಿಯಲ್ಲಿ 2 ಲಕ್ಷ ರೂಪಾಯಿಯನ್ನು ಜಮೆ ಮಾಡಲಾಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಬೆಳಗಾವಿ ಜಿಲ್ಲೆಯ ಚುಳುಕಿ ಗ್ರಾಮದಲ್ಲಿ 2 ಎಕರೆ 3 ಗುಂಟೆ ಜಮೀನು ಮಂಜೂರು ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿತು.
ಆ ಜಮೀನಿನ ದಾಖಲೆ ಪತ್ರಗಳ ಕ್ರಮಗಳನ್ನು ಪೂರ್ಣಗೊಳಿಸಿ ಜನವರಿ 1ರಂದು ಆ ಭೂಮಿಯನ್ನು ಆಕೆಗೆ ಹಸ್ತಾಂತರಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.