ಪ್ರತಿಯೊಂದು ಗ್ಯಾರಂಟಿಗೆ ಷರತ್ತುಗಳೇಕೆ..? – ಸಿದ್ದು ಸರ್ಕಾರಕ್ಕೆ ಬಿಜೆಪಿ ಪ್ರಶ್ನೆ

ಚುನಾವಣೆಗೂ ಮುನ್ನ ಕಾಂಗ್ರೆಸ್ ಭರಪೂರ ಗ್ಯಾರಂಟಿಗಳ ನೀಡಿತ್ತು. ಆದರೆ ಈಗ ಪ್ರತಿಯೊಂದಕ್ಕೂ ಷರತ್ತುಗಳು ಅನ್ವಯ ಎನ್ನುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಜನಾಧಿಕಾರ ನೀಡಿದ್ದು ಷರತ್ತುಗಳ ಮೇಲೆ ಸರ್ಕಾರ ನಡೆಸುವುದಕ್ಕಲ್ಲ ಎಂಬುದನ್ನು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅರಿತುಕೊಳ್ಳಬೇಕು ಎಂದು ಬಿಜೆಪಿ ಟ್ವೀಟಿಸಿದೆ.

ನೀಡಲು ಸಾಧ್ಯವಾಗದ ಗ್ಯಾರಂಟಿಗಳನ್ನು ಮುಂದಿಟ್ಟು, ಜನತೆಯನ್ನು ವಂಚಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಈಗ ಸಾಬೀತಾಗಿದೆ. ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಜಾರಿಗೆ ತರುತ್ತೇವೆ ಎಂದಿದ್ದ ಗ್ಯಾರಂಟಿಗಳ ಲಾಭವನ್ನು ಯಾರಿಗೆ & ಹೇಗೆ ಕೊಡುತ್ತೇವೆ ಎಂಬ ಯಾವುದೇ ವಿವರ ನೀಡದೆ ಸಿದ್ದರಾಮಯ್ಯ ಸರ್ಕಾರ ಆದೇಶ ನೀಡುವ ನಾಟಕವಾಡಿದೆ ಎಂದು ಬಿಜೆಪಿ ಕಿಡಿಕಾರಿದೆ.

ಗ್ಯಾರಂಟಿಗಳನ್ನು ದಾರಿಯಲ್ಲಿ ಹೋಗುವವರಿಗೆಲ್ಲಾ ಕೊಡಲಾಗುತ್ತದೆಯೇ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕೇಳುತ್ತಿದ್ದಾರೆ. ಚುನಾವಣೆಗೂ ಮುನ್ನ ಹಾದಿಯಲ್ಲಿ ಹೋಗುವವರಿಗೆಲ್ಲಾ ಗ್ಯಾರಂಟಿ ಕಾರ್ಡ್‌ ನೀಡಿ ಈಗ ಈ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ. ಹಾಗಾದರೆ ದಾರಿಯಲ್ಲಿ ಹೋಗುವವರು ಕನ್ನಡಿಗರಲ್ಲವೇ? ಹೇಳಿ ಎಂದು ಬಿಜೆಪಿ ಸವಾಲ್ ಹಾಕಿದೆ.

ರಾಜ್ಯದ ಇತಿಹಾಸದಲ್ಲೇ ಅತಿಹೆಚ್ಚು ಸಾಲ ಮಾಡಿ ಅದರ ಹೊಣೆಯನ್ನು ಮುಂದಿನ ಸರ್ಕಾರಗಳ ಹೆಗಲಿಗೆ ಹಾಕಿದ ಅಪಕೀರ್ತಿ ಸಿದ್ದರಾಮಯ್ಯಗೆ ಸಲ್ಲುತ್ತದೆ. ಈಗಿನ ಗ್ಯಾರಂಟಿಗಳೂ ಜನರ ಒಂದು ಜೇಬಿನಿಂದ ತೆಗೆದು ಇನ್ನೊಂದು ಜೇಬಿಗೆ ಹಾಕುವ ನಾಟಕ. ಅದರಲ್ಲೂ ಸೋರಿಕೆಯಾಗಿ ಕಾಂಗ್ರೆಸ್ಸಿಗರ ಜೇಬುಗಳು ತುಂಬಿ ತುಳುಕಲಿರುವುದು ಇವರ ಗ್ಯಾರಂಟಿಯ ಅಸಲೀಯತ್ತು ಎಂದು ಬಿಜೆಪಿ ಲೇವಡಿ ಮಾಡಿದೆ.

ಬಿಜೆಪಿಯ ಈ ಸರಣಿ ಟ್ವೀಟ್​ಗಳಿಗೆ ನೆಟ್ಟಿಗರು ಕೂಡ ಸರಣಿ ಟ್ವೀಟ್​ ಮಾಡುವ ಮೂಲಕ ಕ್ಲಾಸ್ ತೆಗೆದುಳ್ಳುತ್ತಿದ್ದಾರೆ.

ಏಕಿಷ್ಟು ಅವಸರ ನಿಮಗೆ..? ನಿಮ್ಮ ಬಾಯಿಗಿಷ್ಟು ಬೆಂಕಿ ಹಾಕಾ..? ನಿಮ್ಮ ತಾಕತ್ ಅನ್ನು ಬರೀ ಟ್ವಿಟ್ಟರ್​ನಲ್ಲಿ ತೋರಿಸಬೇಡಿ.. ಈ ರೀತಿ ನಾಟಕ ಆಡೋದನ್ನು ಬಿಡಿ.. ಹೀಗೆ ಇನ್ನು ಏನೇನೋ ಟ್ವೀಟ್​ ಮಾಡಿ ಬಿಜೆಪಿಗರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.