11 ವರ್ಷಗಳ ಬಳಿಕ ಗಾಲಿ ಜನಾರ್ದನ ರೆಡ್ಡಿ ಮತ್ತೆ ಗಣಿಗಾರಿಕೆಯ ಧೂಳೆಬ್ಬಿಸುವುದಕ್ಕೆ ಸಿದ್ಧರಾಗಿದ್ದಾರೆ. ರೆಡ್ಡಿ ಮಾಲೀಕತ್ವದ ಓಬಳಾಪುರಂ ಮೈನಿಂಗ್ ಕಂಪನಿ ತನ್ನ ಗಣಿ ಪ್ರದೇಶದಲ್ಲಿ ಕಲ್ಲಿದ್ದಲು ಅದಿರಿನ ಗಣಿಗಾರಿಕೆ ಆರಂಭಿಸುವುದಕ್ಕೆ ನಮ್ಮ ಆಕ್ಷೇಪಗಳೇನೂ ಇಲ್ಲ ಎಂದು ಸುಪ್ರೀಂಕೋರ್ಟ್ನಲ್ಲಿ ಆಂಧ್ರಪ್ರದೇಶದ ಜಗನ್ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಹೇಳಿದೆ.
ಕರ್ನಾಟಕ ಮತ್ತು ಆಂಧ್ರದ ನಡುವೆ ಇದ್ದ ಗಡಿ ವಿವಾದ ಬಗೆಹರಿದಿರುವ ಹಿನ್ನೆಲೆಯಲ್ಲಿ ಆಂಧ್ರಕ್ಕೆ ಒಳಪಟ್ಟ ಪ್ರದೇಶದಲ್ಲಿ ಗಣಿಗಾರಿಕೆಗೆ ನಿರ್ಬಂಧ ಮುಂದುವರಿಸುವ ಅಗತ್ಯವಿಲ್ಲ ಎಂದು ಆಂಧ್ರಪ್ರದೇಶ ಸರ್ಕಾರ ನ್ಯಾಯಾಲಯಕ್ಕೆ ತನ್ನ ಅಭಿಪ್ರಾಯ ತಿಳಿಸಿದೆ.
ಕಲ್ಲಿದ್ದಲು ಅದಿರು ಗಣಿಗಾರಿಕೆ ಅನುಮತಿ ನೀಡುವಂತೆ ಸುಪ್ರೀಂಕೋರ್ಟ್ ನಲ್ಲಿ ರೆಡ್ಡಿ ಮಾಲೀಕತ್ವದ ಒಎಂಸಿ ಮನವಿ ಮಾಡಿತ್ತು. ಒಎಂಸಿ ಕೋರಿಕೆಗೆ ಪ್ರತಿಕ್ರಿಯಿಸಿರುವ ಆಂಧ್ರಪ್ರದೇಶ ಅನುಮತಿ ನೀಡಬಹುದು ಎಂದು ಹೇಳಿದೆ.
2010ರಲ್ಲಿ ಉನ್ನತ ಮಟ್ಟದ ಸಮಿತಿಯ ಶಿಫಾರಸ್ಸು ಆಧರಿಸಿ ಆಂಧ್ರದ ಅನಂತಪುರ ಜಿಲ್ಲೆಯಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಗೆ ಸುಪ್ರೀಂಕೋರ್ಟ್ ನಿಷೇಧ ಹೇರಿತ್ತು.
ಗಣಿಗಾರಿಕೆಗೆ ಅನುಮತಿ ನೀಡಲಾದ ಪ್ರದೇಶವನ್ನು ಹೊರತುಪಡಿಸಿ ಉಳಿದ ಪ್ರದೇಶದಲ್ಲೂ ಅಕ್ರಮವಾಗಿ ಗಣಿಗಾರಿಕೆ ಮಾಡಲಾಗಿದೆ ಮತ್ತು ಅಪಾರ ಪ್ರಮಾಣದಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ವರದಿ ನೀಡಿತ್ತು.
ಕಳೆದ ತಿಂಗಳು ಅಂದರೆ ಜುಲೈ 21ರಂದು ಎರಡೂ ರಾಜ್ಯಗಳ ನಡುವಿನ ಗಡಿ ವಿವಾದ ಬಗೆಹರಿದಿದೆ ಮತ್ತು ಎಸ್ಜಿಐ ನೀಡಿರುವ ವರದಿಯನ್ನು ಎರಡೂ ರಾಜ್ಯಗಳು ಒಪ್ಪಿಕೊಂಡಿವೆ ಎಂದು ಸುಪ್ರೀಂಕೋರ್ಟ್ ಗೆ ಆಂಧ್ರ ಸರ್ಕಾರ ಮಾಹಿತಿ ನೀಡಿದೆ. ಈ ವಿಚಾರಣೆಯ ವೇಳೆಯೇ ಈ ಆಧಾರದಲ್ಲೇ ಗಣಿಗಾರಿಕೆಗೆ ಅನುಮತಿ ನೀಡಬಹುದು ಎಂದು ಒಎಂಸಿ ವಾದಿಸಿತ್ತು. ತನ್ನ ಭೂ ಪ್ರದೇಶದಲ್ಲಿ ಗಣಿಗಾರಿಕೆ ಆರಂಭಿಸುವುದಕ್ಕೆ ನಮ್ಮ ಆಕ್ಷೇಪಗಳಿಲ್ಲ ಎಂದು ಆಂಧ್ರಪ್ರದೇಶ ಸುಪ್ರೀಂಕೋರ್ಟ್ ಗೆ ಹೇಳಿದೆ.