ADVERTISEMENT
ಕನ್ನಡ, ತೆಲುಗು, ತಮಿಳು ಸಿನಿ ಪ್ರೇಕ್ಷಕರಿಗೆ ಮರೆಯಲಾಗದ ಹಾಡುಗಳನ್ನು ನೀಡಿರುವ ರಾಜ್-ಕೋಟಿ ಸಂಗೀತ ನಿರ್ದೇಶಕ ಜೋಡಿಯನ್ನು ಈಗ ಆ ವಿಧಿಯೂ ಬೇರ್ಪಡಿಸಿದೆ. ಸಂಗೀತ ನಿರ್ದೇಶಕ ಕೊಟಿ ಜೊತೆಗೆ ಅದೆಷ್ಟೋ ಹಾಡುಗಳಿಗೆ ಸ್ವರಗಳನ್ನು ನೀಡಿದ್ದ ರಾಜ್ ವಿಧಿವಶ ರಾಗಿದ್ದಾರೆ.
ಹೈದರಾಬಾದ್ನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ರಾಜ್ ಅವರು ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ರಾಜ್ ನಿಧನದಿಂದ ಚಿತ್ರೋದ್ಯಮದಲ್ಲಿ ವಿಷಾದ ಛಾಯೆ ಆವರಿಸಿದೆ.
ರಾಜ್ ನಿಜನಾಮ ತೋಟಕೂರ ಸೋಮರಾಜು.. ಸಂಗೀತ ಪ್ರಪಂಚದಲ್ಲಿ ರಾಜ್-ಕೋಟಿ ಜೋಡಿ ಸಿಕ್ಕಾಪಟ್ಟೆ ಫೇಮಸ್. ಹಲವು ದಶಕಗಳ ಕಾಲ ಸಿನಿಪ್ರಿಯರನ್ನು ತಮ್ಮ ಸಂಗೀತದ ಮೂಲಕ ರಂಜಿಸಿದ್ದರು. ರಾಜ್-ಕೋಟಿ ಜೋಡಿ 150ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿತ್ತು.
ಕನ್ನಡದಲ್ಲಿ 1991ರಲ್ಲಿ ಬಂದ ಇಬ್ಬರು ಹೆಂಡಿರ ಮುದ್ದಿನ ಪೊಲೀಸ್ ಚಿತ್ರದಿಂದ ಹಿಡಿದು ಸ್ನೇಹದ ಕಡಲಲ್ಲಿ, ಎದುರುಮನೆಲಿ ಗಂಡ-ಪಕ್ಕದ್ಮನೆಲಿ ಹೆಂಡತಿ, ಸೂರಿ, ನಗರದಲ್ಲಿ ನಾಯಕರು, ಮಾಲಾಶ್ರೀ ಮಾಮಾಶ್ರೀ, ಗೃಹಲಕ್ಷ್ಮಿ, ಜ್ವಾಲಾ, ಆಹಾ ಬ್ರಹ್ಮಾಚಾರಿ, ಸರ್ವರ್ ಸೋಮಣ್ಣ, ರಾಯರು ಬಂದರು ಮಾವನ ಮನೆಗೆ… ಕಿಲಾಡಿಗಳು, ತಾಳಿಯ ಸೌಭಾಗ್ಯ, ರೌಡಿ ಮತ್ತು 1995ರಲ್ಲಿ ಬಂದ ಗಡಿಬಿಡಿ ಅಳಿಯ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ಬಹುತೇಕ ಸಿನಿಮಾಗಳು ಹಾಡುಗಳು ಸೂಪರ್ ಹಿಟ್ ಆಗಿದ್ದವು ಎನ್ನುವುದು ವಿಶೇಷ.
ತೆಲುಗಿನಲ್ಲಿ ಬಂದ ಮುಠಾಮೇಸ್ತ್ರಿ, ಬಾವ ಬಾವಮರಿದಿ, ಗೋವಿಂದಾ ಗೋವಿಂದಾ, ಹಲೋ ಬ್ರದರ್ ಸೇರಿ ಹಲವು ಚಿತ್ರಗಳು ಇವರಿಗೆ ಹೆಸರು ತಂದುಕೊಟ್ಟಿದ್ದವು.
ಕೆಲ ಕಾರಣಗಳಿಂದಾಗಿ ರಾಜ್-ಕೋಟಿ ಜೋಡಿ ಬೇರ್ಪಟ್ಟಿತ್ತು. ರಾಜ್ ಪ್ರತ್ಯೇಕವಾಗಿ ಕೆಲ ಚಿತ್ರಗಳಿಗೆ ಸಂಗೀತ ನೀಡಿದ್ದರು. ಸಿಸೀಂದ್ರಿ, ರಾಮುಡೊಚ್ಚಾಡು, ಪ್ರೇಮಂಟೇ ಇದೇರಾ ಸೇರಿ ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ಕೆಲವು ಚಿತ್ರಗಳಲ್ಲಿ ರಾಜ್ ಅತಿಥಿ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದರು.
ADVERTISEMENT