ನನ್ನ ಉಸಾಬರಿಗೆ ಬಂದ್ರೆ ಸುಮ್ಮನೆ ಬಿಡಲ್ಲ – ವಿರೋಧಿಗಳಿಗೆ ಮಾಜಿ ಸಿಎಂ ಶೆಟ್ಟರ್ ಎಚ್ಚರಿಕೆ

ನಾನು ಯಾರ ಉಸಾಬರಿಗೂ (ತಂಟೆಗೆ) ಹೋಗಲ್ಲ. ಆದ್ರೆ ನನ್ನ ಉಸಾಬರಿಗೆ ಬಂದ್ರೆ ಸುಮ್ಮನೆ ಬಿಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ಅವರು ಬಿಜೆಪಿ ಪಕ್ಷದೊಳಗೇ ಇರುವ ತಮ್ಮ ವಿರೋಧಿಗಳಿಗೆ ನೇರ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ತಮ್ಮ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ತಮ್ಮ ರಾಜಕೀಯ ವಿರೋಧಿಗಳಿಗೆ ಶೆಟ್ಟರ್​ ಸಂದೇಶ ರವಾನಿಸಿದ್ದಾರೆ.
ಜಗದೀಶ್ ಶೆಟ್ಟರ್ ಸರಳ ಸಜ್ಜನ ರಾಜಕಾರಣಿ ನಿಜ. ನಾನಾಯ್ತು, ನನ್ನ ಕೆಲಸ ಅಷ್ಟೇ. ನಾನು ಯಾರ ಉಸಾಬರಿಗೆ(ತಂಟೆಗೆ) ನಾನು ಹೋಗುವುದಿಲ್ಲ. ಆದ್ರೆ ನನ್ನ ಉಸಾಬರಿಗೆ ಬಂದ್ರೆ ಸುಮ್ಮನೆ ಬಿಡುವುದಿಲ್ಲ
ಎಂದು ಶೆಟ್ಟರ್​ ಅವರು ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಜಗದೀಶ್​ ಶೆಟ್ಟರ್​ ಅವರು ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿ ಆಗಲು ಒಪ್ಪದೇ ಸಂಪುಟದಿಂದ ಹೊರಗುಳಿದರು.
ಆ ಬಳಿಕ ಬಿಜೆಪಿ ಪಕ್ಷದ ನಾಯಕರೇ ಶೆಟ್ಟರ್​ ಅವರನ್ನು ಮೂಲೆಗುಂಪು, ಕಡೆಗಣನೆ ಮಾಡುವ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ.
ಇದಲ್ಲದೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸದ್ಯ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಶೆಟ್ಟರ್​ ಅವರಿಗೆ ಬಿಜೆಪಿಯಲ್ಲೇ ಟಿಕೆಟ್​ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಗುಸುಗುಸು ಮಧ್ಯೆ ಶೆಟ್ಟರ್​ ಅವರು ಕೊಟ್ಟಿರುವ ಎಚ್ಚರಿಕೆ ಮಹತ್ವ ಪಡೆದಿದೆ.

LEAVE A REPLY

Please enter your comment!
Please enter your name here