ಕರೆಂಟ್ ಬಿಲ್ ಹೆಚ್ಚು ಬರ್ತಿದ್ಯಾ? ಮೀಟರ್ ಗಿರಗಿರ ತಿರುಗುತ್ತಿದೆಯಾ? ಹೀಗೆ ಮಾಡಿ.

ಮನೆಯಲ್ಲಿ ಹೆಚ್ಚು ವಿದ್ಯುತ್ ಉಪಕರಣಗಳು ಇಲ್ಲ. ಆದರೂ, ಬಿಲ್ ಮಾತ್ರ ಹೆಚ್ಚು ಬರುತ್ತಿದೆ. 200 ಯೂನಿಟ್​ಗೆ ಹೆಚ್ಚುಕಮ್ಮಿ ಇರಬೇಕಾದ ಬಳಕೆ ಪ್ರಮಾಣ 350 ಯೂನಿಟ್​ ಅಂತಾ ತೋರಿಸುತ್ತಿದೆ. ಬರೀ ಬೇಸಿಗೆಯಲ್ಲಿ ಮಾತ್ರವಲ್ಲ, ಚಳಿಗಾಲದಲ್ಲೂ ಇದೇ ಕತೆ. ನಾನ್ ಏನು ಮಾಡ್ಲಿ..?

ಯದ್ವಾತದ್ವಾ ಬಿಲ್ ಬರುತ್ತಿದ್ದರೇ ಯಾರಿಗಾದರೂ ಮೀಟರ್ ಮೇಲೆ ಅನುಮಾನ ಬಂದೇ ಬರುತ್ತದೆ. ಇಂತಹ ಸಂದರ್ಭದಲ್ಲಿ.. ವಿದ್ಯುತ್ ಸಂಸ್ಥೆಗಳಿಗೆ ನಿಗದಿ ಶುಲ್ಕ ಪಾವತಿಸಿ ಮೀಟರ್ ಚೆಕ್ ಮಾಡಿಸಬೇಕು. ಲೋಪಗಳು ಕಂಡುಬಂದಲ್ಲಿ ಹಳೆ ಮೀಟರ್ ಜಾಗದಲ್ಲಿ ಹೊಸ ಮೀಟರ್ ಅಳವಡಿಸುತ್ತಾರೆ.

ಮೀಟರ್ ಸರಿಯಿದೆ ಎಂದು ಟೆಸ್ಟಿಂಗ್​ ವೇಳೆ ಗೊತ್ತಾದರೆ..?

ಮನೆಯಲ್ಲಿ ಬಳಸುವ ವಿದ್ಯುತ್ ಉಪಕರಣಗಳಲ್ಲೂ ಲೋಪ ಇರಬಹುದು. ಅರ್ತಿಂಗ್​, ವೈರಿಂಗ್​​​ನಲ್ಲಿ ಆಗಿರುವ ಲೋಪಗಳಿಂದ ವಿದ್ಯುತ್ ಸೋರಿಕೆ ಆಗಿ ನಿಮ್ಮ ಮನೆಯ ವಿದ್ಯುತ್ ಬಿಲ್ ಹೆಚ್ಚಳಕ್ಕೆ ಕಾರಣ ಆಗಿರಬಹುದು.

ನಿಮ್ಮ ಮನೆಯಲ್ಲಿ ಬಳಸುವ ಫ್ರಿಡ್ಜ್, ವಾಷಿಂಗ್ ಮೆಷಿನ್ ಎಷ್ಟು ವರ್ಷಗಳ ಹಳೆಯವು.. ಅವುಗಳ ಗುಣಮಟ್ಟ ಎಂಥದ್ದು ಎನ್ನುವುದರ ಮೇಲೆಯೂ ವಿದ್ಯುತ್ ಬಳಕೆಯ ಪ್ರಮಾಣ ಆಧಾರಿತವಾಗಿರುತ್ತದೆ.

ಪ್ರತಿ ತಿಂಗಳು ಬರುವ ವಿದ್ಯುತ್ ಬಿಲ್ ಗಮನಿಸಿ, ನೀವು ಬಳಕೆ ಮಾಡಿರುವ ಪ್ರಮಾಣ ಮತ್ತು ಬಂದಿರುವ ಬಿಲ್ ಸರಿ ಇದೆಯೇ ಎಂಬುದನ್ನು ಗೊತ್ತು ಮಾಡಿಕೊಳ್ಳಬೇಕು.

ಬಿಲ್​ನಲ್ಲಿರುವ ಆರ್​ಎಂಡಿ – ರೆಕಾರ್ಡೆಡ್​ ಮ್ಯಾಗ್ಸಿಮಮ್ ಡಿಮ್ಯಾಂಡ್​ ಪರಿಶೀಲಿಸಿದಲ್ಲಿ ಎಷ್ಟು ಬಳಕೆ ಮಾಡುತ್ತಿದ್ದೇವೆ ಎಂಬುದು ಗೊತ್ತಾಗುತ್ತದೆ.

ಮನೆಯಲ್ಲಿರುವ ಉಪಕರಣಗಳು, ಅವುಗಳ ವಿನಿಯೋಗಕ್ಕೆ ಆಗುವ ಕರೆಂಟ್ ಎಷ್ಟು ಆಗುತ್ತದೆ ಎಂಬುದರ ಬಗ್ಗೆ ನಾಲೆಡ್ಜ್ ಹೊಂದಿರಬೇಕು.

– ಗೃಹಪಯೋಗಿ ವಿದ್ಯುತ್ ಉಪಕರಣಗಳು ಮನೆಯಲ್ಲಿ ಕಡಿಮೆ ಇದ್ದರೂ, ಬಿಲ್ ಹೆಚ್ಚಾಗಿ ಬರುತ್ತಿದ್ದರೇ, ಗೃಹೋಪಕರಣಗಳನ್ನು ಎಷ್ಟು ವರ್ಷದಿಂದ ಬಳಸುತ್ತಿದ್ದೇವೆ ಎಂಬುದನ್ನು ಒಮ್ಮೆ ಪರಿಶೀಲಿಸಬೇಕು.

– ರೆಫ್ರಿಜರೇಟರ್ ತುಂಬಾ ಹಳೆಯದಾಗಿದ್ದರೇ ವಿದ್ಯುತ್ ಬಳಕೆಯ ಪ್ರಮಾಣ ಹೆಚ್ಚಿರುತ್ತದೆ. ತಿಂಗಳಿಗೆ 50 ಯೂನಿಟ್ ಬಳಕೆ ಆಗಬೇಕಾದ ಜಾಗದಲ್ಲಿ 150 ಯೂನಿಟ್ ಖರ್ಚಾಗುತ್ತಿರುತ್ತದೆ.

ಇವುಗಳ ಸ್ಥಾನದಲ್ಲಿ ಹೊಸದನ್ನು ಬಳಕೆ ಮಾಡುವುದು ಉತ್ತಮ. ವಿದ್ಯುತ್ ಉಳಿತಾಯ ಮಾಡುವ ಸ್ಟಾರ್ ರೇಟಿಂಗ್ ಹೊಂದಿರುವ ಫ್ರಿಡ್ಜ್ ಖರೀದಿ ಮಾಡಿದಲ್ಲಿ ಉತ್ತಮ.

– ಸರಿಯಾದ ಗುಣಮಟ್ಟ ಇಲ್ಲದ ಫ್ಯಾನ್, ಗೀಸರ್ ಮತ್ತು ಇತರೆ ಗೃಹೋಪಕರಣಗಳನ್ನು ಬಳಕೆ ಮಾಡಿದಾಗಲೂ ನಿಮ್ಮ ಮನೆಯ ವಿದ್ಯುತ್ ಮೀಟರ್ ಗಿರಗಿರ ತಿರುಗುತ್ತದೆ.. ಇವುಗಳ ಸ್ಥಾನದಲ್ಲಿ ಗುಣಮಟ್ಟದ ಉಪಕರಣಗಳನ್ನು ಅಳವಡಿಸಬೇಕು.

ಲೀಕೇಜ್ ತಪ್ಪಿಸಬೇಕು:

ಮನೆಯಲ್ಲಿರುವ ಉಪಕರಣಗಳೆಲ್ಲಾ ಹೊಸವು. ಜೊತೆಗೆ ಅತ್ಯುತ್ತಮ ಗುಣಮಟ್ಟ ಹೊಂದಿವೆ. ಆದರೂ ಕರೆಂಟ್ ಬಿಲ್ ಹೆಚ್ಚು ಬರುತ್ತಿದೆ, ಏಕೆ ಎನ್ನುವುದೇ ಅರ್ಥವಾಗುತ್ತಿಲ್ಲ ಎನ್ನುತ್ತೀರಾ..?  ಮನೆಯಲ್ಲಿ ಆಗುತ್ತಿರುವ ವಿದ್ಯುತ್ ಸೋರಿಕೆಯಿಂದಲೂ ಬಿಲ್ ಹೆಚ್ಚು ಬರುತ್ತಿರಬಹುದು.

– ಮೊದಲಿಗೆ ಮನೆಗೆ ವಿದ್ಯುತ್ ಸರಬರಾಜು ಆಗುವ ಮೈನ್ ಬ್ರೇಕರ್ ಅಥವಾ ಮೈನ್ ಸ್ವಿಚ್ ಆಫ್ ಮಾಡಬೇಕು. ಇದರೊಂದಿಗೆ ಮೀಟರ್ ತಿರುಗುವುದು ನಿಲ್ಲುತ್ತದೆ. ಒಂದೊಮ್ಮೆ ಮೀಟರ್ ತಿರುಗುತ್ತಲೇ ಇದ್ದರೇ ವಿದ್ಯುತ್ ಲೀಕೇಜ್ ಆಗುತ್ತಿದೆ ಎಂದರ್ಥ.

– ಎಲೆಕ್ಟ್ರಿಷಿಯನ್ ಸಂಪರ್ಕಿಸಿದಲ್ಲಿ ಅವರು ಕ್ಲಾಂಪ್ ಮೀಟರ್ ನೆರವಿನಿಂದ ಲೋಪವನ್ನು ಗುರುತಿಸಿ ಸರಿಮಾಡುತ್ತಾರೆ.

– ಮೀಟರ್​, ಅರ್ತ್ ಪಾಯಿಂಟ್, ಸ್ವಿಚ್ ಬೋರ್ಡ್, ಸಾಕೆಟ್​​ಗಳನ್ನು ಎಲೆಕ್ಟ್ರಿಷಿಯನ್​ನಿಂದ ಪರಿಶೀಲನೆ ಮಾಡಿಸಬೇಕು.

– ಪ್ರತಿಯೊಂದು ಪಾಯಿಂಟ್ ಪರಿಶೀಲಿಸಿದಲ್ಲಿ ಎಲ್ಲಿ ಕರೆಂಟ್ ಲೀಕ್ ಆಗುತ್ತದೆ ಎನ್ನುವುದು ಗೊತ್ತಾಗುತ್ತಿದೆ.

– ಮನೆಗಳಲ್ಲಿ ತಪ್ಪು ತಪ್ಪು ವೈರಿಂಗ್​ನಿಂದಲೂ ಬಿಲ್ ಜಾಸ್ತಿ ಬರುತ್ತಿರುತ್ತದೆ. ಒಂದು ಪ್ಲಾಟ್ ವೈರನ್ನು ಇನ್ನೊಂದು ಫ್ಲಾಟ್ ಮೀಟರ್​ಗೆ ಅಳವಡಿಸುವುದು.

– ಕಾಮನ್ ಮೋಟಾರ್ ಅನ್ನು ಯಾರದ್ದೋ ಒಂದು ಪೋರ್ಷನ್​ಗೆ ಸೇರಿಸುವುದು.. ಬಿಲ್ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಈ ಲೋಪಗಳನ್ನು ಗುರುತಿಸಿ ಸರಿಪಡಿಸಿಕೊಂಡಲ್ಲಿ ನಿಮ್ಮ ಮನೆಗೆ ಹೆಚ್ಚು ಕರೆಂಟ್ ಬಿಲ್ ಬರಲ್ಲ.