ಮುಂದಿನ ವರ್ಷದ ಅಕ್ಟೋಬರ್ನಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯಲಿದೆ. ಅದಕ್ಕೂ ಒಂದು ವರ್ಷ ಮೊದಲೇ ಪ್ರಮುಖ ಸುದ್ದಿವಾಹಿನಿ ಝೀ ನ್ಯೂಸ್ ಮತ್ತು ಮ್ಯಾಟ್ರೆಜ್ ಜಂಟಿಯಾಗಿ ಚುನಾವಣಾ ಪೂರ್ವ ಸಮೀಕ್ಷೆಯನ್ನು ಪ್ರಕಟಿಸಿದೆ.
ಯಾರಿಗೆ ಹೆಚ್ಚು ಶೇಕಡಾವಾರು ಮತ..?
ಒಂದು ವೇಳೆ ಈಗ ಚುನಾವಣೆ ನಡೆದರೆ ಝೀ ನ್ಯೂಸ್ ಸಮೀಕ್ಷೆ ಪ್ರಕಾರ ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣಕ್ಕೆ ಶೇಕಡಾ 46ರಷ್ಟು ಮತಗಳು ಸಿಗಬಹುದು ಎಂದು ಅಂದಾಜಿಸಲಾಗಿದೆ.
ಎನ್ಸಿಪಿ ಮತ್ತು ಕಾಂಗ್ರೆಸ್ ಹಾಗೂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣಕ್ಕೆ ಶೇಕಡಾ 35ರಷ್ಟು ಮತಗಳು ಸಿಗಬಹುದು ಎಂದು ಅಂದಾಜಿಸಲಾಗಿದೆ.
2019ರಲ್ಲಿ ಕಾಂಗ್ರೆಸ್ ಜೊತೆಗೆ ಉದ್ಧವ್ ಠಾಕ್ರೆ ಮೈತ್ರಿ ಮಾಡಿಕೊಂಡಿದ್ದು ಸರಿಯೇ ತಪ್ಪೇ ಎಂದು ಕೇಳಿದಾಗ ಶೇಕಡಾ 57ರಷ್ಟು ಮಂದಿ ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಎಷ್ಟು ಸೀಟು ಸಿಗಬಹುದು..?
ಝೀ ನ್ಯೂಸ್-ಮ್ಯಾಟ್ರೆಜ್ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಬಿಜೆಪಿ ಮತ್ತು ಶಿವಸೇನೆ (ಏಕನಾಥ್ ಶಿಂಧೆ ಬಣ) ಮೈತ್ರಿಕೂಟ 165-185 ಸೀಟುಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.
ಮಹಾ ವಿಕಾಸ ಮೈತ್ರಿಕೂಟ 88-118 ಸೀಟುಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.
ರಾಜ್ಠಾಕ್ರೆ ನೇತೃತ್ವದ ಎಂಎನ್ಎಸ್ 2ರಿಂದ 5 ಸೀಟುಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.
12ರಿಂದ 22 ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಜಯ ಗಳಿಸಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.
ಒಟ್ಟು 288 ಸದಸ್ಯದ ಬಲದ ವಿಧಾನಸಭಾ ಚುನಾವಣೆಯಲ್ಲಿ 145 ಶಾಸಕರ ಬೆಂಬಲ ಅಗತ್ಯ.
ಝೀ ನ್ಯೂಸ್ ಮತ್ತು ಮ್ಯಾಟ್ರೆಜ್ ಸಮೀಕ್ಷೆ ಪ್ರಕಾರ ಪ್ರಚಂಡ ಬಹುಮತದೊಂದಿಗೆ ಬಿಜೆಪಿ ಮೈತ್ರಿಕೂಟ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬರಲಿದೆ.
ಸುಳ್ಳಾಗಿದ್ದ ಕರ್ನಾಟಕ ಸಮೀಕ್ಷೆ:
ಕರ್ನಾಟಕ ವಿಧಾನಸಭಾ ಚುನಾವಣೆ ಸಂಬಂಧ ಝೀ ನ್ಯೂಸ್ ಪ್ರಕಟಿಸಿದ್ದ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳೆರಡು ಸುಳ್ಳಾಗಿದ್ದವು.
ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 103ರಿಂದ 115 ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ಬರಬಹುದು ಎಂದು ಅಂದಾಜು ಮಾಡಿತ್ತು. ಕಾಂಗ್ರೆಸ್ಗೆ 79ರಿಂದ 91 ಸೀಟು ಸಿಗಬಹುದು ಎಂದು ಹೇಳಿತ್ತು. ಜೆಡಿಎಸ್ 26ರಿಂದ 36 ಸೀಟುಗಳಲ್ಲಿ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿತ್ತು.
ಚುನಾವಣೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್ಗೆ 103-118 ಸೀಟು ಸಿಗಬಹುದು, ಬಿಜೆಪಿಗೆ 79-93 ಸೀಟು ಸಿಗಬಹುದು ಮತ್ತು ಜೆಡಿಎಸ್ಗೆ 25ರಿಂದ 33 ಸೀಟು ಸಿಗಬಹುದು ಎಂದು ಝೀ ನ್ಯೂಸ್ ಅಂದಾಜಿಸಿತ್ತು.
ADVERTISEMENT
ADVERTISEMENT