ದೇವರಿಗೆ ಕಣ್ಣಿಲ್ವಾ? – ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 9 ಮಂದಿ ಸಾವು

ಟೆಂಪೋ ಟ್ರಾವೆಲರ್ ಗೆ ಹಾಲಿನ ಲಾರಿ ಹಾಗೂ ಸಾರಿಗೆ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂಭತ್ತು ಮಂದಿ ಸಾವನ್ನಪ್ಪಿ ಹನ್ನೆರಡು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಧ್ಯರಾತ್ರಿ ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ ಗಾಂಧಿನಗರ ಬಳಿ  ನಡೆದಿದೆ.

ಒಂದೇ ಕುಟುಂಬಕ್ಕೆ ಸೇರಿದ ಹಳ್ಳಿಕೆರೆ, ಸಾಲಹಳ್ಳಿಯ ಹದಿನಾಲ್ಕು ಮಂದಿ ಟಿಟಿ ವಾಹನದಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯಕ್ಕೆ ತೆರಳಿದ್ದರು. ಅಲ್ಲಿಂದ ಹಾಸನಕ್ಕೆ ಆಗಮಿಸಿ ಹಾಸನಾಂಬೆ ದೇವಿ ದರ್ಶನ ಪಡೆದು ಸ್ವಗ್ರಾಮಕ್ಕೆ ವಾಪಾಸ್ ಆಗುತ್ತಿದ್ದರು. ಇನ್ನೇನು ಊರು ತಲುಪಲು ಮೂರ್ನಾಲ್ಕು ನಿಮಿಷ ಇದೆ ಎನ್ನುವಾಗ ಜವರಾಯ ವಕ್ಕರಿಸಿದ್ದಾನೆ.

ಅರಸೀಕೆರೆ-ಶಿವಮೊಗ್ಗ ನಡುವಿನ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಕಾಮಗಾರಿ ನಡೆಯುತ್ತಿದ್ದು, ಟಿಟಿ ವಾಹನದ ಹಿಂದೆ ಸಾರಿಗೆ ಬಸ್ ಬರುತ್ತಿತ್ತು. ಶಿವಮೊಗ್ಗ ಕಡೆಯಿಂದ ರಾಂಗ್ ರೂಟ್ ನಲ್ಲಿ ಯಮಸ್ವರೂಪಿಯಾಗಿ ಬಂದ ಹಾಲಿನ ಲಾರಿ, ಎರಡು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಟಿಟಿ ಪಲ್ಟಿ ಆಗಿವೆ. ಹಿಂದೆ ಬರುತ್ತಿದ್ದ ಆರ್ ಟಿಸಿ ಪಲ್ಟಿಯಾದ ಟೆಂಪೋ ಟ್ರಾವೆಲರ್ ಗೆ ಡಿಕ್ಕಿ ಹೊಡೆದು ಭಾರೀ ಅನಾಹುತ ಸಂಭವಿಸಿದೆ. ಸ್ಥಳದಲ್ಲಿಯೇ ನಾಲ್ಕು ಮಕ್ಕಳು ಸೇರಿ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. 12ಮಂದಿ ಗಾಯಗೊಂಡಿದ್ದು, ಅರಸೀಕೆರೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಬಸ್ ಮುಂಭಾಗ ಕುಳಿತಿದ್ದ ಕೆಲವರಿಗೆ ಗಾಯಗಳಾಗಿವೆ.

ಮೃತರೆಲ್ಲ ಒಂದೇ ಕುಟುಂಬದವರಾಗಿದ್ದಾರೆ.
ಸಾಲಾಪುರದ 7 ಮಂದಿ ಹಾಗೂ ದೊಡ್ಡಿಹಳ್ಳಿಯ ಇಬ್ಬರು ದಾರುಣ ಸಾವು ಕಂಡಿದ್ದಾರೆ.

ಅರಸೀಕೆರೆ ತಾಲ್ಲೂಕು ಆಸ್ಪತ್ರೆಯ ಶವಾಗಾರದ ಬಳಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿಡೆ.

ಅಪಘಾತ ಬೆನ್ನಲ್ಲೇ ಲಾರಿ ಚಾಲಕ ಎಸ್ಕೇಪ್ ಆಗಿದ್ದಾನೆ. ಬಸ್ ನಲ್ಲಿದ್ದವರ ಪ್ರಕಾರ, ಹಾಲಿನ ಲಾರಿ ಚಾಲಕನದ್ದೇ ಸಂಪೂರ್ಣ ತಪ್ಪು..ರಾಂಗ್ ರೂಟ್ ನಲ್ಲಿ ಬಂದಿದ್ದರಿಂದ ಈ ಅಪಘಾತ ಸಂಭವಿಸಿದೆ.