ಹೊಸ ವರ್ಷದ ಹೊತ್ತಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಮತ್ತು ಕರ್ನಾಟಕದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ಹೊಸದಾಗಿ ಸಲಹೆಗಳನ್ನು ನೀಡಿವೆ.
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಒಳಾಂಗಣ ಕಾರ್ಯಕ್ರಮದಲ್ಲಿ ಜನಸಂದಣಿ ಸೇರದಂತೆ ನೋಡಿಕೊಳ್ಳುವಂತೆ ಎರಡೂ ಸರ್ಕಾರಗಳೂ ಜನಸಾಮಾನ್ಯರಿಗೆ ಸಲಹೆ ನೀಡಿವೆ.
ದಿಢೀರ್ ಆಗಿ ಮತ್ತೆ ಕೋವಿಡ್ ಆತಂಕ ಸೃಷ್ಟಿ ಆಗಿದ್ದು ಯಾಕೆ..?
ಕೋವಿಡ್ ಅಲೆ ಆರಂಭಕ್ಕೂ ಮುನ್ನ ಇದ್ದ ಸಹಜ ಸ್ಥಿತಿಗೇ ಇಡೀ ದೇಶದ ಚಟುವಟಿಕೆಗಳೆಲ್ಲವೂ ಸಂಪೂರ್ಣವಾಗಿ ಮರಳಿ ವರ್ಷಗಳೇ ಕಳೆದಿರುವಾಗ ಈಗ ದಿಢೀರ್ ಆಗಿ ಮತ್ತೆ ಕೋವಿಡ್ ಆತಂಕ ಸೃಷ್ಟಿ ಆಗಿದ್ದು ಯಾಕೆ..?
ಈ ಆತಂಕದ ಹಿಂದಿನ ಕಾರಣ ಚೀನಾದಲ್ಲಿ ಸೋಂಕು ಹಬ್ಬುತ್ತಿರುವ ವೇಗ ಮತ್ತು ಸಾವಿನ ಪ್ರಮಾಣದ ಅಂದಾಜು ಬಗ್ಗೆ ಮಾಧ್ಯಮಗಳ ವರದಿ.
ಆ ವರದಿಯಲ್ಲಿ ಏನಿತ್ತು..?
ಡಿಸೆಂಬರ್ 17ರಂದು ಅಂದರೆ 6 ದಿನಗಳ ಹಿಂದೆ ಪ್ರಕಟವಾದ ವರದಿಯಲ್ಲಿ ಕೆಲವೇ ತಿಂಗಳಲ್ಲಿ ಕೋವಿಡ್ ಸೋಂಕಿನ ಕಾರಣದಿಂದ ಚೀನಾದಲ್ಲಿ 10 ಲಕ್ಷದಷ್ಟು ಜನ ಸಾಯಬಹುದು ಅಂದಾಜಿಸಲಾಗಿತ್ತು.
ಡಿಸೆಂಬರ್ 15ರಂದು ಬಿಡುಗಡೆ ಆದ ಹಾಂಕಾಂಗ್ ವಿಶ್ವವಿದ್ಯಾಲಯದ ಮಾಜಿ ಡೀನ್ ಗ್ರೇಬಿಯಲ್ ಲೆಂಗ್ ಅವರು ಬರೆದ ಅಧ್ಯಯನ ವರದಿ ಪ್ರಕಾರ
ಚೀನಾದಲ್ಲಿ ಸಡಿಲಗೊಳಿಸಲಾಗುತ್ತಿರುವ ಕೋವಿಡ್ ನಿರ್ಬಂಧಗಳ ಹಿನ್ನೆಲೆಯಲ್ಲಿ ಚೀನಾದ ಪ್ರತಿ 10 ಲಕ್ಷ ಜನಕ್ಕೆ 684 ಮಂದಿ ಸಾಯಬಹುದು. ಅಂದರೆ ಚೀನಾದ ಜನಸಂಖ್ಯೆಗೆ ಹೋಲಿಸಿದರೆ ಸಾವಿನ ಸಂಖ್ಯೆ 9 ಲಕ್ಷದ 64 ಸಾವಿರದ 400 ತಲುಪಬಹುದು
ಅಂದಾಜು ಮಾಡಲಾಗಿತ್ತು.
ಚೀನಾದಲ್ಲಿ ಕೋವಿಡ್ ಲಸಿಕೆ:
ಚೀನಾ ತನ್ನ ದೇಶದ ಜನರಿಗೆ ನೀಡುತ್ತಿರುವ ಎರಡು ಕೋವಿಡ್ ಲಸಿಕೆಗಳು ವಿಶ್ವದ ಉಳಿದ ಲಸಿಕೆಗಳಿಗೆ ಹೋಲಿಸಿದರೆ ಅಷ್ಟು ಪರಿಣಾಮಕಾರಿಯಾಗಿಲ್ಲ. ಸಿನೋವ್ಯಾಕ್ ಲಸಿಕೆ ಶೇಕಡಾ 50ರಷ್ಟು ಪರಿಣಾಮಕಾರಿಯಾಗಿದ್ದರೆ, ಸಿನೋಫಾರ್ಮ ಲಸಿಕೆ ಶೇಕಡಾ 78ರಷ್ಟೇ ಪರಿಣಾಮಕಾರಿಯಾಗಿದೆ.
ಚೀನಾದ ವೃದ್ಧಾಪ್ಯ ಜನಸಂಖೆಯಲ್ಲಿ 60 ವರ್ಷ ಮೇಲ್ಪಟ್ಟವರಲ್ಲಿ ಶೇಕಡಾ 69ರಷ್ಟು ಮಂದಿಯಷ್ಟೇ ಬೂಸ್ಟರ್ ಡೋಸ್ ಲಸಿಕೆ ಪಡೆದಿದ್ದಾರೆ ಮತ್ತು 80 ವರ್ಷ ಮೇಲ್ಪಟ್ಟವರಲ್ಲಿ ಶೇಕಡಾ 49 ಮಂದಿಯಷ್ಟೇ ಬೂಸ್ಟರ್ ಡೋಸ್ ಲಸಿಕೆ ಪಡೆದಿದ್ದಾರೆ.
ಏನಿದು BF.7..?
ಚೀನಾದಲ್ಲಿ ಕೋವಿಡ್ ಸೋಂಕಿನ ಅಲೆ ಇಷ್ಟೊಂದು ವೇಗವಾಗಿ ಹಬ್ಬುತ್ತಿರುವುದಕ್ಕೆ ಕೋವಿಡ್ ಸೋಂಕಿನ ತಳಿಗಳಲ್ಲಿ ಒಂದಾಗಿರುವ ಒಮಿಕ್ರಾನ್ನ ಉಪ ತಳಿ BF.7 ಕಾರಣ ಎನ್ನುವುದು ತಜ್ಱರ ಮಾತು.
ಭಾರತದಲ್ಲಿ ಒಮಿಕ್ರಾನ್ ಕೋವಿಡ್ ತಳಿಯ ಉಪ ತಳಿ BF.7 ಜುಲೈನಲ್ಲೇ ಪತ್ತೆ ಆಗಿತ್ತು. ಭಾರತದಲ್ಲಿ ಜುಲೈನಿಂದ ಅಕ್ಟೋಬರ್ ಅವಧಿಯಲ್ಲಿ ಇಲ್ಲಿಯವರೆಗೆ BF.7 ಸೋಂಕಿತರ ನಾಲ್ಕು ಪ್ರಕರಣಗಳು ಪತ್ತೆ ಆಗಿವೆ. ಅವುಗಳಲ್ಲಿ ಮೂರು ಪ್ರಕರಣ ಗುಜರಾತ್ನಲ್ಲಿ ಮತ್ತು 1 ಪ್ರಕರಣ ಒಡಿಶಾದಲ್ಲಿ ಪತ್ತೆ ಆಗಿತ್ತು.
ಪ್ರಮುಖ ಇಂಗ್ಲೀಷ್ ದೈನಿಕ ಡಿಸೆಂಬರ್ 21ರಂದು ಪ್ರಕಟಿಸಿದ್ದ ವರದಿ ಪ್ರಕಾರ
ಜುಲೈನಲ್ಲೇ BF.7 ಸೋಂಕು ಪತ್ತೆ ಆಗಿತ್ತು. 7ಗುಜರಾತ್ ಮತ್ತು ಒಡಿಶಾದಲ್ಲಿ BF.7 ಉಪ ತಳಿಯ ಸೋಂಕುಗಳು ನಾಲ್ವರಲ್ಲಿ ಪತ್ತೆ ಆಗಿದ್ದವು ಮತ್ತು BF.7 ಸೋಂಕಿನ ತೀವ್ರತೆಗೂ ಸಂಬಂಧ ಇಲ್ಲ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ
ಎಂದು ವರದಿ ಪ್ರಕಟಿಸಿತ್ತು.
ಪ್ರಮುಖ ಇಂಗ್ಲೀಷ್ ದೈನಿಕ ಟೈಮ್ಸ್ ಆಫ್ ಇಂಡಿಯಾ ಇವತ್ತು ಪ್ರಕಟಿಸಿರುವ ವರದಿ ಪ್ರಕಾರ
ಎರಡು ವರ್ಷಗಳ ಹಿಂದೆಯೇ ಅಂದರೆ 2021ರ ಫೆಬ್ರವರಿಯಲ್ಲೇ ಕೋವಿಡ್ ಸೋಂಕಿನ ಉಪ ತಳಿ BF.7 91 ದೇಶಗಳಲ್ಲಿ ಪತ್ತೆ ಆಗಿತ್ತು. ವಿಶ್ವದಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾದ ಶೇಕಡಾ 0.05 ಮಂದಿಯಲ್ಲಷ್ಟೇ ಈ ತಳಿ ಪತ್ತೆ ಆಗಿತ್ತು.
ಒಮಿಕ್ರಾನ್ ಕೋವಿಡ್ ತಳಿಯ ಉಪ ತಳಿ BF.7ಗೆ BA.5.2.1.7 ಎಂದೂ ನಾಮಕರಣ ಮಾಡಲಾಗಿದೆ. ಭಾರತದಲ್ಲಿ ವರದಿ ಆಗ್ತಿರುವ ಒಟ್ಟು ಸೋಂಕಿನ ಪ್ರಮಾಣದಲ್ಲಿ ಇದರ ಪಾಲು ಶೇಕಡಾ 5ಕ್ಕಿಂತಲೂ ಕಡಿಮೆ.
BF.7 ಲಕ್ಷಣಗಳೇನು..?
ಶ್ವಾಸಕೋಶದ ಸೋಂಕು, ಗಂಟಲು ಕೆರೆತ, ಜ್ವರ, ನೆಗಡಿ, ಕಫ BF.7 ಉಪ ತಳಿಯ ಲಕ್ಷಣಗಳು. ವಾಂತಿ ಮತ್ತು ಬೇಧಿ ಕೂಡಾ ಇದರ ಲಕ್ಷಣ.
ADVERTISEMENT
ADVERTISEMENT