ADVERTISEMENT
ಅಕ್ಷಯ್ ಕುಮಾರ್, ಮುಖ್ಯ ಸಂಪಾದಕರು, ಪ್ರತಿಕ್ಷಣ
BF.7. ಕೋವಿಡ್ ಸೋಂಕಿನ ತಳಿ ಒಮಿಕ್ರಾನ್ನ ಉಪ ತಳಿಗೆ ವೈದ್ಯ ಲೋಕ ಇಟ್ಟಿರುವ ಹೆಸರು. ಚೀನಾದಲ್ಲಿ ಕೋವಿಡ್ ಸೋಂಕು ಹಬ್ಬುತ್ತಿರುವುದರ ಹಿಂದೆ BF.7 ಪಾಲಿದೆ ಎನ್ನುವುದು ತಜ್ಞರ ಮಾತು.
ಆದರೆ ಕೋವಿಡ್ ಅಲೆ ಸಂಬಂಧ ಭಾರತದಲ್ಲಿ ಸೃಷ್ಟಿ ಆಗಿರುವ ಆತಂಕ ಮತ್ತು ಕೇಂದ್ರ ಮತ್ತು ರಾಜ್ಯಗಳಲ್ಲಿರುವ ಸರ್ಕಾರಗಳ ನಿರ್ಧಾರಗಳು ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಗ್ವಾದದ ಸೊತ್ತಾಗಿದೆ.
ಕರ್ನಾಟಕದಲ್ಲಿ ಈ ವಾಗ್ವಾದದಲ್ಲಿ ಈಗ ಜೆಡಿಎಸ್ ಕೂಡಾ ಸೇರಿಕೊಂಡಿದೆ.
ಕಾಲಾನುಕ್ರಮ ತಿಳಿಯಿರಿ:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಈಗ ಕೊನೆಯ ಘಟ್ಟಕ್ಕೆ ಬಂದು ತಲುಪಿದೆ. ರಾಷ್ಟ್ರ ರಾಜಧಾನಿ ದೆಹಲಿ ಪ್ರವೇಶಿಸಲಿರುವ ಯಾತ್ರೆ ಆ ಬಳಿಕ ಕಣಿವೆ ನಾಡು ಕಾಶ್ಮೀರದಲ್ಲಿ ಪರಿಸಮಾಪ್ತಿ ಆಗಲಿದೆ.
ಭಾರತ್ ಜೋಡೋ ಯಾತ್ರೆ ಯಶಸ್ಸನ್ನು ಕಂಡು ಆ ಯಾತ್ರೆಯನ್ನು ಸ್ಥಗಿತಗೊಳಿಸುವ ಸಲುವಾಗಿಯೇ ಬಿಜೆಪಿ ಕೋವಿಡ್ ನಾಟಕ ಆಡುತ್ತಿದೆ ಎನ್ನುವುದು ಕಾಂಗ್ರೆಸ್ನ ನೇರ ಆರೋಪ.
ಕಾಂಗ್ರೆಸ್ ಮಾಧ್ಯಮ ಘಟಕದ ಮುಖ್ಯಸ್ಥ ಮತ್ತು ರಾಜ್ಯಸಭಾ ಸಂಸದ ಜೈರಾಂ ರಮೇಶ್ ಅವರು ಮೊನಚಾಗಿ ಟ್ವೀಟ್ವೊಂದನ್ನು ಮಾಡಿದ್ದಾರೆ.
ಚೀನಾದಲ್ಲಿ ಕೋವಿಡ್ ಸೋಂಕಿನ ಹೆಚ್ಚಳಕ್ಕೆ ಕಾರಣವಾಗಿರುವ ಒಮಿಕ್ರಾನ್ ತಳಿಯ ಉಪ ತಳಿ BF.7ನ ನಾಲ್ವರು ಸೋಂಕಿತರು ಒಡಿಶಾ ಮತ್ತು ಗುಜರಾತ್ನಲ್ಲಿ ಪತ್ತೆ ಆಗಿದ್ದು ಜುಲೈ, ಸೆಪ್ಟೆಂಬರ್ ಮತ್ತು ನವೆಂಬರ್ನಲ್ಲಿ. ಭಾರತ್ ಜೋಡೋ ಯಾತ್ರೆ ಸಂಬಂಧ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಆರೋಗ್ಯ ಸಚಿವರು ಪತ್ರ ಬರೆದಿದ್ದು ನಿನ್ನೆ (ಅಂದರೆ ಡಿಸೆಂಬರ್ 20ರಂದು). ಪ್ರಧಾನಿ ಪರಿಶೀಲನಾ ಸಭೆ ನಡೆಸಿದ್ದು ಇಂದು (ಅಂದರೆ ಡಿಸೆಂಬರ್ 22ರಂದು). ದೆಹಲಿಗೆ ಭಾರತ್ ಜೋಡೋ ಯಾತ್ರೆ ಪ್ರವೇಶಿಸುವುದು ಮರು ದಿನ (ಅಂದರೆ ಡಿಸೆಂಬರ್ 24ರಂದು). ಈಗ ನೀವು ಕಾಲಾನುಕ್ರಮ ತಿಳಿಯಿರಿ
ಎಂದು ಕುಚೋದ್ಯವಾಗಿ ಟ್ವೀಟಿಸಿ ಭಾರತ್ ಜೋಡೋ ಯಾತ್ರೆಯನ್ನೇ ಬಿಜೆಪಿ ಗುರಿ ಮಾಡುತ್ತಿದೆ ಎನ್ನುವ ಆರೋಪ ಮಾಡಿದ್ದರು.
ಡಿಸೆಂಬರ್ 21ರಂದು ಪ್ರಕಟವಾದ ಇಂಗ್ಲೀಷ್ ದೈನಿಕ ದಿ ಹಿಂದೂ ವರದಿ ಪ್ರಕಾರ ಜುಲೈನಲ್ಲೇ BF.7 ಒಮಿಕ್ರಾನ್ ಉಪ ತಳಿ ಭಾರತದಲ್ಲಿ ಪತ್ತೆ ಆಗಿತ್ತು.
ವಡೋದಾರ ನಗರ ಪಾಲಿಕೆ ಆಯುಕ್ತರ ಪ್ರಕಾರ,
ಅಮೆರಿಕದಿಂದ ಭಾರತಕ್ಕೆ ಸೆಪ್ಟೆಂಬರ್ 11ರಂದು ಗುಜರಾತ್ಗೆ ಬಂದ 61 ವರ್ಷದ ಮಹಿಳೆಗೆ ಸೆಪ್ಟೆಂಬರ್ 18ರಂದು ಕೋವಿಡ್ ಪರೀಕ್ಷೆ ನಡೆಸಿದಾಗ ಸೋಂಕು ಪತ್ತೆ ಆಗಿತ್ತು. ಅವರಲ್ಲಿ BF.7 ಉಪ ತಳಿ ದೃಢಪಟ್ಟಿತ್ತು ಮತ್ತು ಆಕೆ ಮನೆಯಲ್ಲಿದ್ದುಕೊಂಡೇ ಸೋಂಕಿನಿಂದ ಗುಣಮುಖರಾಗಿದ್ದರು.
ರಾಹುಲ್ ಗಾಂಧಿಗೆ ಪತ್ರ ಬರೆದ ಆರೋಗ್ಯ ಸಚಿವರು:
ಭಾರತ್ ಜೋಡೋ ಯಾತ್ರೆಯಿಂದ ರಾಜಸ್ಥಾನದಲ್ಲಿ ಕೋವಿಡ್ ಸೋಂಕಿನ ಹೆಚ್ಚಳದ ಆತಂಕ ಇದೆ ಎಂದು ಡಿಸೆಂಬರ್ 20ರಂದು ಬಿಜೆಪಿಯ ಮೂವರು ಸಂಸದರು ಪತ್ರ ಬರೆದಿದ್ದನ್ನು ಆಧರಿಸಿ ಅವತ್ತೇ ಕೇಂದ್ರ ಆರೋಗ್ಯ ಸಚಿವ ಮನ್ಶುಖ್ ಮಾಂಡವೀಯ ಅವರು ಸೋಂಕು ಹಬ್ಬುವಿಕೆಯನ್ನು ತಡೆಗಟ್ಟುವ ಸಲುವಾಗಿ ಭಾರತ್ ಜೋಡೋ ಯಾತ್ರೆಯನ್ನು ತಡೆಗಟ್ಟುವಂತೆ, ಇಲ್ಲವಾದಲ್ಲಿ ಕೋವಿಡ್ ನಿಯಮ ಪಾಲಿಸಿ ಭಾರತ್ ಜೋಡೋ ಯಾತ್ರೆ ನಡೆಸುವಂತೆ ಕೋರಿದ್ದರು.
ಪ್ರಧಾನಿ ಮೋದಿ ಸಭೆ:
ಚೀನಾದಲ್ಲಿ ಕೋವಿಡ್ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗಿರುವ BF.7 ಜುಲೈನಿಂದ ನವೆಂಬರ್ ತಿಂಗಳ ಅವಧಿಯಲ್ಲಿ ಪತ್ತೆ ಆಗಿದ್ದಾದರೂ ಪ್ರಧಾನಿ ಮೋದಿ ಅವರು ಕೋವಿಡ್ ನಿಯಂತ್ರಣ ಸಂಬಂಧ ತುರ್ತು ಎನ್ನಲಾಗಿರುವ ಉನ್ನತ ಮಟ್ಟದ ಸಭೆ ನಡೆಸಿದ್ದು ನಿನ್ನೆ ಅಂದರೆ ಗುರುವಾರವಷ್ಟೇ.
ಹಿಂದಿನ ದಿನ ಮದುವೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಮೋದಿ:
ಈ ಸಭೆಗೂ ಹಿಂದಿನ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಇಂದೋರ್ನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ವರ್ಗಿಯಾ ಅವರ ಸಂಬಂಧಿಯ ಮದುವೆ ಕಾರ್ಯಕ್ರಮದಲ್ಲಿ ತಮ್ಮ ಸಂಪುಟ ಸಚಿವರ ಜೊತೆಗೆ ಪ್ರಧಾನಿ ಮೋದಿ ಅವರು ಭಾಗಿ ಆಗಿದ್ದರು.
ಮರು ದಿನ ಸಭೆ, ಸಂಸತ್ತಿನಲ್ಲಿ ಮಾಸ್ಕ್:
ಮರು ದಿನ ಕೋವಿಡ್ ನಿಯಂತ್ರಣ ಸಂಬಂಧ ಉನ್ನತ ಮಟ್ಟದ ಸಭೆ ನಡೆಸಿದ್ದ ಪ್ರಧಾನಿ ಮೋದಿ ಅವರು ಮಾಸ್ಕ್ ಧರಿಸಿಯೇ ಸಂಸತ್ತಿಗೆ ಬಂದರು. ಬಿಜೆಪಿ ಸಂಸದರೂ ಕೂಡಾ ಮಾಸ್ಕ್ ಧರಿಸಿಯೇ ಸಂಸತ್ತಿಗೆ ಬಂದರು.
ಕೋವಿಡ್ ನಿಯಮಗಳ ಸಂಪೂರ್ಣ ಸಡಿಲಿಕೆಯ ಬಳಿಕ ನಿನ್ನೆಯವರೆಗೂ ಪ್ರಧಾನಿ ಮೋದಿಯವರು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ, ರೋಡ್ಶೋಗಳಲ್ಲಿ ಮಾಸ್ಕ್ ಧರಿಸಿರಲಿಲ್ಲ.
ಆರೋಗ್ಯ ಸಚಿವರು ಸಭೆ ನಡೆಸಿದ್ದು ಯಾವಾಗ..?
ವಿಚಿತ್ರ ಅಂದ್ರೆ ಆರೋಗ್ಯ ಸಚಿವ ಮನ್ಶುಖ್ ಮಾಂಡವೀಯಾ ಕೂಡಾ ಆರೊಗ್ಯ ಸಚಿವಾಲಯದ ಉನ್ನತಾಧಿಕಾರಿಗಳ ಸಭೆ ನಡೆಸಿದ್ದು ಡಿಸೆಂಬರ್ 21ರಂದು. ಅಂದಹಾಗೆ ರಾಹುಲ್ ಗಾಂಧಿಗೆ ಕೋವಿಡ್ ಸಂಬಂಧ ಸಚಿವರು ಪತ್ರ ಬರೆದಿದ್ದು ಡಿಸೆಂಬರ್ 20ರಂದು. ರಾಹುಲ್ ಗಾಂಧಿಗೆ ಪತ್ರ ಬರೆದ ಮರು ದಿನ ಸಚಿವರು ಸಭೆ ನಡೆಸಿರುವುದು ಸೋಜಿಗ.
ಡಿಸೆಂಬರ್ 21ರವರೆಗೆ ಸಭೆ ನಡೆಸುವವರೆಗೆ ಆರೋಗ್ಯ ಸಚಿವರು ಸಾರ್ವಜನಿಕ ಸಭೆ, ಸಂಸತ್ತಿನ ಕಲಾಪಗಳಲ್ಲಿ ಭಾಗವಹಿಸುವರೆಗೆ ಮಾಸ್ಕ್ ಧರಿಸಿಯೇ ಇರಲಿಲ್ಲ.
ಅಂದಹಾಗೆ ಚೀನಾದಲ್ಲಿ 10 ಲಕ್ಷದಷ್ಟು ಮಂದಿ ಕೋವಿಡ್ ಸೋಂಕಿನಿಂದ ಕೆಲವೇ ತಿಂಗಳಲ್ಲಿ ಸಾಯಬಹುದು ಎಂಬ ಬಗ್ಗೆ ಹಾಂಕಾಂಗ್ ವಿಶ್ವವಿದ್ಯಾಲಯದ ಅಧ್ಯಯನ ವರದಿ ಡಿಸೆಂಬರ್ 17ರಂದೇ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈ ವರದಿ ಬಳಿಕಷ್ಟೇ ಭಾರತದಲ್ಲಿ ಈಗ ಹೊಸ ಆತಂಕ ಸೃಷ್ಟಿ ಆಗಿದೆ.
ಬಿಜೆಪಿ ಬೃಹತ್ ಸಮಾವೇಶ:
ಒಂದು ಕಡೆ ಕೋವಿಡ್ ಸೋಂಕು ಹಬ್ಬುವಿಕೆ ಕಾರಣದಿಂದ ಭಾರತ್ ಜೋಡೋ ಯಾತ್ರೆ ಸ್ಥಗಿತಗೊಳಿಸುವಂತೆ ಕೇಂದ್ರ ಆರೋಗ್ಯ ಸಚಿವರು ರಾಹುಲ್ ಗಾಂಧಿ ಅವರಿಗೆ ಡಿಸೆಂಬರ್ 20ರಂದು ಪತ್ರ ಬರೆದಿದ್ದರೆ ಅತ್ತ ಡಿಸೆಂಬರ್ 21ರಂದು ಪಶ್ಚಿಮ ಬಂಗಾಳದಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಬಿಜೆಪಿ ನಾಯಕ ಸುವೆಂದು ಅಧಿಕಾರಿ ಅವರು ಬೃಹತ್ ಸಮಾವೇಶವನ್ನು ನಡೆಸಿದ್ದರು. ಆ ಸಮಾವೇಶದಲ್ಲಿ ಸ್ವತಃ ಸುವೆಂದು ಅಧಿಕಾರಿ ಒಳಗೊಂಡಂತೆ ಯಾವೊಬ್ಬ ನಾಯಕರೂ ಕಾರ್ಯಕರ್ತರೂ ಮಾಸ್ಕ್ ಧರಿಸಿರಲಿಲ್ಲ, ಸಾಮಾಜಿಕ ಅಂತರ ಕಾಪಾಡಿರಲಿಲ್ಲ.
ಗುಜರಾತ್ನಲ್ಲಿ ನಡೆದ ಚುನಾವಣೆ:
ಜುಲೈ ಮತ್ತು ನವೆಂಬರ್ ಅವಧಿಯಲ್ಲಿ ಗುಜರಾತ್ನಲ್ಲಿ ಒಮಿಕ್ರಾನ್ನ ಉಪ ತಳಿ BF.7 ಕಾಣಿಸಿಕೊಂಡಿತ್ತೆಂದು ಸರ್ಕಾರವೇ ಈಗ ಹೇಳುತ್ತಿದೆ. ಈ ನಡುವೆಯೂ ಗುಜರಾತ್ನಲ್ಲಿ ಎರಡು ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಿತು.
ಪ್ರಧಾನಿ ಮೋದಿ ಎರಡೂ ಹಂತಗಳಲ್ಲೂ 50 ಕಿಲೋ ಮೀಟರ್ ದೂರಕ್ಕೆ ಬೃಹತ್ ರೋಡ್ ಶೋ ಕೈಗೊಂಡಿದ್ದರು. ಬೃಹತ್ ಸಮಾವೇಶಗಳನ್ನು ಉದ್ದೇಶಿಸಿ ಮಾತಾಡಿದ್ದರು. ಬಿಜೆಪಿ ಜೊತೆಗೆ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿಯ ನಾಯಕರು ಕೂಡಾ ಬೃಹತ್ ರೋಡ್ ಶೋ, ಮೆರವಣಿಗೆ, ಜನಸಭಾಗಳನ್ನು ನಡೆಸಿದ್ದರು. ಆದರೆ ಆಗ ಯಾವ ರಾಜಕೀಯ ನಾಯಕರೂ ಕೋವಿಡ್ ಸೋಂಕಿನ ಉಪ ತಳಿಯ ಬಗ್ಗೆ ತುಟಿಪಿಟಿಕ್ ಅಂದಿರಲಿಲ್ಲ.
ಗುಜರಾತ್ನಲ್ಲಿ ಆತಂಕವೇ ಇಲ್ಲ:
ಗುಜರಾತ್ನ ಹೊಸ ಆರೋಗ್ಯ ಸಚಿವ ರಿಷಿಕೇಷ್ ಪಟೇಲ್ ಅವರ ಪ್ರಕಾರ ಉಳಿದ ದೊಡ್ಡ ರಾಜ್ಯಗಳಿಗೆ ಹೋಲಿಸಿದರೆ ಗುಜರಾತ್ನಲ್ಲಿ ಸೋಂಕಿನ ಪ್ರಮಾಣವೇ ಕಡಿಮೆ ಇದೆ.
ಮಹಾರಾಷ್ಟ್ರ, ಕರ್ನಾಟಕ, ದೆಹಲಿ ಮತ್ತು ತಮಿಳುನಾಡಿನಲ್ಲಿ ವರದಿ ಆಗ್ತಿರುವ ಕೋವಿಡ್ ಸೋಂಕಿಗೆ ಹೋಲಿಸಿದರೆ ಗುಜರಾತ್ನಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಅತ್ಯಂತ ಕಡಿಮೆ. ಕಳೆದ ತಿಂಗಳು (ಅಂದರೆ ಗುಜರಾತ್ನಲ್ಲಿ ವಿಧಾನಸಭಾ ಚುನಾವಣೆ ನಡೆದ ತಿಂಗಳು) ಗುಜರಾತ್ನಲ್ಲಿ ಪತ್ತೆ ಆಗ್ತಿದ್ದ ಕೇಸ್ ಗಳು ದಿನಕ್ಕೆ 5ರಿಂದ 10ರಷ್ಟೇ ಮತ್ತು ಒಟ್ಟು ಸಕ್ರಿಯ ಪ್ರಕರಣಗಳು ಕೇವಲ 23
ಎಂದು ಗುಜರಾತ್ ಆರೋಗ್ಯ ಸಚಿವರು ಹೇಳಿದ್ದಾರೆ.
ಅಷ್ಟೊಂದು ಆತಂಕ ಏಕೆ..?
ಭಾರತದಲ್ಲಿ ಕಳೆದ 15-20 ದಿನಗಳಿಂದ ಪ್ರತಿ ದಿನ ವರದಿ ಆಗ್ತಿರುವ ಹೊಸ ಸೋಂಕಿತರ ಪ್ರಕರಣ 100-200 ಅಷ್ಟೇ. ನವೆಂಬರ್ ಮಧ್ಯಂತರ ಅವಧಿಯಲ್ಲಿ ದಿನಕ್ಕೆ 500 ಕೇಸ್ ವರದಿ ಆಗಿತ್ತು. ಅಕ್ಟೋಬರ್ನಲ್ಲಿ 1 ಸಾವಿರ ಕೇಸ್ ವರದಿ ಆಗಿತ್ತು.
ಅನಗತ್ಯ ಆತಂಕ ಸೃಷ್ಟಿಸಿದ ಭಾರತೀಯ ವೈದ್ಯಕೀಯ ಸಂಘದ ಸಲಹೆ:
ಭಾರತದಲ್ಲಿ ಪತ್ತೆ ಆದ 145 ಹೊಸ ಕೋವಿಡ್ ಕೇಸ್ಗಳಲ್ಲಿ ನಾಲ್ವರಿಗೆ BF.7 ಸೋಂಕು ಪತ್ತೆ ಆಗಿದೆ ಮತ್ತು ಆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವಂತೆ ಭಾರತೀಯ ವೈದ್ಯಕೀಯ ಸಂಘ ಜನಸಾಮಾನ್ಯರಲ್ಲಿ ಮನವಿ ಮಾಡಿ ನಿನ್ನೆಯಷ್ಟೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿತ್ತು.
ವೈದ್ಯಕೀಯ ಸಂಘ ಕೊಟ್ಟ ಸಲಹೆಗಳಲ್ಲಿ ಎಲ್ಲ ರೀತಿ ಸಭೆ, ಸಮಾರಂಭ ಮತ್ತು ಕಾರ್ಯಕ್ರಮಗಳನ್ನು ಆದಷ್ಟು ತಡೆಗಟ್ಟಬೇಕು ಎನ್ನುವುದೂ ಸೇರಿತ್ತು.
ಆದರೆ ವೈದ್ಯಕೀಯ ಸಂಘ ಹೊಸದಾಗಿ ಎಂದು ಹೇಳಿದ ಆ ನಾಲ್ವರೂ BF.7 ಸೋಂಕಿತರು ಪತ್ತೆ ಆಗಿದ್ದು ಜುಲೈನಿಂದ ನವೆಂಬರ್ ತಿಂಗಳ ಅವಧಿಯಲ್ಲಿ. ಅದಕ್ಕಿಂತಲ್ಲೂ ಹೆಚ್ಚಾಗಿ ಅವರೆಲ್ಲರೂ ಆಸ್ಪತ್ರೆಗೆ ದಾಖಲಾಗದೇ ಮನೆಯಲ್ಲಿದ್ದುಕೊಂಡೇ ಗುಣಮುಖರಾಗಿದ್ದಾರೆ.
ಈ ಅಂಶಗಳನ್ನು ಮರೆಮಾಚಿ ಭಾರತೀಯ ವೈದ್ಯಕೀಯ ಸಂಘ ಅನಗತ್ಯ ಆತಂಕ ಸೃಷ್ಟಿಸುವ ರೀತಿಯಲ್ಲಿ ಸಲಹೆ ನೀಡಿದ್ದ ವೈದ್ಯರಲ್ಲೇ ಟೀಕೆಗೆ ಕಾರಣವಾಗಿದೆ.
ಪಂಚರತ್ನದ ಮೇಲೆ ಕಣ್ಣು ಬಿತ್ತಾ..?
ಪಂಚರತ್ನ ಯಾತ್ರೆಯ ಯಶಸ್ಸು ಕಂಡು ಅದರ ಮೇಲೆ ಕೇಶವಕೃಪಾ (ಕರ್ನಾಟಕದಲ್ಲಿ ಆರ್ಎಸ್ಎಸ್ನ ಪ್ರಧಾನ ಕಚೇರಿಗಿರುವ ಹೆಸರು) ಕಣ್ಣುಬಿದ್ದಿದೆ. ಪಂಚರತ್ನ ತಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ADVERTISEMENT