ಬಿಜೆಪಿಗೆ ಭಾರೀ ಮುಖಭಂಗ – ಬಿಜೆಪಿ ಭದ್ರಕೋಟೆ ಛಿದ್ರ- ಕಾಂಗ್ರೆಸ್​​ಗೆ ಐತಿಹಾಸಿಕ ಗೆಲುವು

ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಮುಖ್ಯಮಂತ್ರಿ ಏಕನಾಥ್​ ಶಿಂಧೆ ಬಣದ ಮೈತ್ರಿಕೂಟ ಸರ್ಕಾರ ಘೋರ ಮುಖಭಂಗ ಅನುಭವಿಸಿದೆ.

ಪುಣೆ ಲೋಕಸಭಾ ಕ್ಷೇತ್ರದಲ್ಲಿ ಬರುವ ಕಸ್ಬಾ ಪೇತ್​ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​+ಎನ್​ಸಿಪಿ+ಶಿವಸೇನೆ ಉದ್ಧವ್​ ಠಾಕ್ರೆ ಬಣ ಮೈತ್ರಿಕೂಟದಿಂದ ಕಣಕ್ಕಿಳಿದಿದ್ದ ಕಾಂಗ್ರೆಸ್​ ಅಭ್ಯರ್ಥಿ ರವೀಂದ್ರ ದಂಗೇಕರ್​ ಗೆದ್ದಿದ್ದಾರೆ.

ಬಿಜೆಪಿ ಅಭ್ಯರ್ಥಿ ಹೇಮಂತ್​ ರಸಾನೆ ಅವರ ವಿರುದ್ಧ 11 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್​ ಭಾರೀ ಗೆಲುವು ಸಾಧಿಸಿದೆ.

ಉಪ ಚುನಾವಣೆ ಘೋಷಣೆ ಆದ ಬಳಿಕ ಬಿಜೆಪಿ ಮೈತ್ರಿಕೂಟ ಸರ್ಕಾರದ ಸಚಿವರು ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿದ್ದರು. ಕೊನೆಯ 3-4 ದಿನ ಸ್ವತಃ ಮುಖ್ಯಮಂತ್ರಿ ಶಿಂಧೆ ಮತ್ತು ಡಿಸಿಎಂ ದೇವೇಂದ್ರ ಫಡ್ನಾವೀಸ್​ ಕ್ಷೇತ್ರದಲ್ಲಿ ನಿರಂತರ ಪ್ರಚಾರ ಕೈಗೊಂಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷರು ಕೂಡಾ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದರು.

ಆದರೆ ಆಡಳಿತದಲ್ಲಿದ್ದರೂ ಬಿಜೆಪಿ ಮೈತ್ರಿಕೂಟಕ್ಕೆ ಕಾಲು ಶತಮಾನ ತನ್ನ ಹಿಡಿತದಲ್ಲಿದ್ದ ಕ್ಷೇತ್ರವನ್ನು ಉಳಿಸಿಕೊಳ್ಳಲು ಆಗಲಿಲ್ಲ.

ಈ ವಿಧಾನಸಭಾ ಕ್ಷೇತ್ರ 1995ರಿಂದ 2019ರವರೆಗೂ ಅಂದರೆ 34 ವರ್ಷಗಳಿಂದ ಬಿಜೆಪಿ ಹಿಡಿತದಲ್ಲೇ ಇತ್ತು. ಕಳೆದ 6 ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿಯೇ ಗೆದ್ದಿತ್ತು. 

2019ರಲ್ಲಿ ಬಿಜೆಪಿ ಶಾಸಕಿಯಾಗಿ ಆಯ್ಕೆ ಆಗಿದ್ದ ಮುಕ್ತಾ ತಿಲಕ್​ ಅವರ ಅಕಾಲಿನ ಸಾವಿನ ಕಾರಣದಿಂದ ಉಪ ಚುನಾವಣೆ ನಡೆದಿದೆ.

ಆರ್​ಎಸ್​ಎಸ್​-ಬಿಜೆಪಿ ಭದ್ರಕೋಟೆ ಎನ್ನಲಾಗಿರುವ ಕ್ಷೇತ್ರದಲ್ಲಿ ಕಾಂಗ್ರೆಸ್​ ಗೆದ್ದಿರುವುದು ಮಹಾಮೈತ್ರಿ ಕೂಟಕ್ಕೆ ದೊಡ್ಡ ಇಂಬು ತಂದುಕೊಟ್ಟಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ+ಏಕ್​ನಾಥ್​ ಶಿಂಧೆ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಡೆದ ಚುನಾವಣೆಗಳಲ್ಲಿ ಆಡಳಿತ ಮೈತ್ರಿಕೂಟ ಸಾಲು ಸಾಲು ಮುಖಭಂಗ ಅನುಭವಿಸಿದೆ. ವಿಧಾನಸಭಾ ಉಪ ಚುನಾವಣೆ, ಜಿಲ್ಲಾ ಪಂಚಾಯತಿ ಚುನಾವಣೆ, ಗ್ರಾಮ ಪಂಚಾಯತಿ ಚುನಾವಣೆ, ವಿಧಾನಪರಿಷತ್​ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಭಾರೀ ಹಿನ್ನಡೆ ಆಗಿದೆ.

LEAVE A REPLY

Please enter your comment!
Please enter your name here