ಲೋಕಾಯುಕ್ತ ಪೊಲೀಸರ ಕೈಗೆ ಸಿಗದೇ ಬಿಜೆಪಿ ಶಾಸಕ ನಾಪತ್ತೆ – LookOut ನೋಟಿಸ್​ ಜಾರಿ

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ಟೆಂಡರ್​ ಹಗರಣದಲ್ಲಿ ಮೊದಲ ಅರೋಪಿಯಾಗಿರುವ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ವಿರುದ್ಧ ಕರ್ನಾಟಕ ಲೋಕಾಯುಕ್ತ ಪೊಲೀಸರು ಲುಕ್​ಔಟ್​ ನೋಟಿಸ್​ ಹೊರಡಿಸಿದ್ದಾರೆ.

ಮಾರ್ಚ್​ 2ರಂದು ಟೆಂಡರ್​ ಮಂಜೂರಾತಿ ಸಂಬಂಧ ಪ್ರಶಾಂತ್​ ಮಾಡಾಳು ಲಂಚ ಸ್ವೀಕರಿಸಿ ಸಿಕ್ಕಿಬಿದ್ದ ಬಳಿಕ ಹಗರಣದಲ್ಲಿ ಮೊದಲ ಆರೋಪಿಯಾಗಿರುವ ಮಾಡಾಳ್​ ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ಶಾಸಕ ಮಾಡಾಳು ಪತ್ತೆಗಾಗಿ ಲುಕೌಟ್​ ನೋಟಿಸ್​ ಹೊರಡಿಸಲಾಗಿದೆ.

ತಲೆಮರೆಸಿಕೊಂಡಿರುವ ಆರೋಪಿ ದೇಶ ಬಿಟ್ಟು ಹೋಗದಂತೆ ಎಚ್ಚರವಹಿಸುವ ಸಲುವಾಗಿ ಮತ್ತು ಆ ಆರೋಪಿ ಓಡಾಟದ ಬಗ್ಗೆ ಮಾಹಿತಿ ಇದ್ದಲ್ಲಿ ತಿಳಿಸುವಂತೆ ಸೂಚಿಸುವ ಸಲುವಾಗಿ ತನಿಖಾ ಸಂಸ್ಥೆಗಳು ಹೊರಡಿಸುವ ನೋಟಿಸೇ ಲುಕೌಟ್​ ನೋಟಿಸ್​.

ದೇಶದ ಎಲ್ಲ ವಿಮಾನನಿಲ್ದಾಣಗಳು, ಬಂದರುಗಳಿಗೆ ಲುಕೌಟ್​ ನೋಟಿಸ್​ನ್ನು ರವಾನಿಸಲಾಗುತ್ತದೆ. ಒಂದು ವೇಳೆ ಲುಕೌಟ್​ ನೋಟಿಸ್​ ಎದುರಿಸುತ್ತಿರುವ ಆರೋಪಿ ಪತ್ತೆ ಆದಲ್ಲಿ ವಲಸೆ ಅಧಿಕಾರಿಗಳಿಗೆ ಆತನನ್ನು ಬಂಧಿಸುವ ಅಧಿಕಾರವಿತರುತ್ತದೆ.

ಬಳಿಕ ಆತನನ್ನು ಸಂಬಂಧಿಸಿದ ತನಿಖಾ ಸಂಸ್ಥೆಗೆ ಹಸ್ತಾಂತರ ಮಾಡಲಾಗುತ್ತದೆ.

ಆರೋಪಿತನ ಪತ್ತೆಗೆ ಅಗತ್ಯವಾಗಿರುವ ಆರೋಪಿತನ ಚಹರೆಯ ಬಗ್ಗೆ ಮೂರು ಮಾಹಿತಿಗಳನ್ನು ಲುಕೌಟ್​ ನೋಟಿಸ್​ನಲ್ಲಿ ಉಲ್ಲೇಖ ಮಾಡಲಾಗುತ್ತದೆ.

ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿ ಪ್ರಕಾರ ಲುಕೌಟ್​ ನೋಟಿಸ್​ ಜಾರಿ ಮಾಡಲಾಗುತ್ತದೆ. ಸಾಮಾನ್ಯವಾಗಿ ಒಂದು ಬಾರಿ ಹೊರಡಿಸಲಾದ ಲುಕೌಟ್​ ನೋಟಿಸ್​ ಒಂದು ವರ್ಷದವರೆಗೆ ಜಾರಿಯಲ್ಲಿರುತ್ತದೆ. ಒಂದು ವೇಳೆ ಅದಕ್ಕೂ ಮೊದಲೇ ಆರೋಪಿ ಬಂಧಿತನಾದ್ದಲ್ಲಿ ಆ ಲುಕೌಟ್​ ನೋಟಿಸ್​ನ್ನು ಹಿಂಪಡೆಯಬಹುದು.

ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ:

ಟೆಂಡರ್​ ಹಗರಣದಲ್ಲಿ ಮೊದಲ ಆರೋಪಿ ಆಗಿರುವ, ತಲೆಮರೆಸಿಕೊಂಡಿರುವ ಶಾಸಕ ಮಾಡಾಳು ವಿರೂಪಾಕ್ಷಪ್ಪ ಕರ್ನಾಟಕ ಹೈಕೋರ್ಟ್​ನಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

ನಾಳೆ ಹೈಕೋರ್ಟ್​ನಲ್ಲಿ ಅರ್ಜಿ ವಿಚಾರಣೆಗೆ ಬರಲಿದೆ.

LEAVE A REPLY

Please enter your comment!
Please enter your name here