BJP ಕೊಟ್ಟ ದುಡ್ಡಿಗೆ ಸುದ್ದಿಗಳನ್ನು ಜಾಹೀರಾತು ರೂಪದಲ್ಲಿ ಪ್ರಕಟಿಸಿದ ಕನ್ನಡದ 4 ಪತ್ರಿಕೆಗಳು..!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಒಗ್ಗೂಡಿಸಿ (Bharat Jodo) ಪಾದಯಾತ್ರೆಯ ಎರಡನೇ ಹಂತದ ಕರ್ನಾಟಕದಲ್ಲಿ ಇವತ್ತಿನಿಂದ ಆರಂಭ ಆಗಿದೆ. ಎರಡು ದಿನಗಳ ವಿರಾಮದ ಬಳಿಕ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಪಾದಯಾತ್ರೆ ಮತ್ತೆ ಆರಂಭ ಆಗಿದೆ. ಇವತ್ತಿನಿಂದ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಕೂಡಾ ಪಾಲ್ಗೊಂಡಿರುವುದು ವಿಶೇಷ.
ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಪಾದಯಾತ್ರೆಯ ಎರಡನೇ ಹಂತದ ಮೊದಲ ದಿನ ಕರ್ನಾಟಕದ ಬಿಜೆಪಿ ರಾಜ್ಯ ಘಟಕ (Karnataka BJP) ಕನ್ನಡದ ಸುದ್ದಿ ಪತ್ರಿಕೆಗಳಲ್ಲಿ ಜಾಹೀರಾತು ರೂಪದಲ್ಲಿ ನೀಡಿರುವ ಸುದ್ದಿ ಮತ್ತು ಬಿಜೆಪಿಯವರು ದುಡ್ಡು ಕೊಟ್ಟರು ಎಂಬ ಕಾರಣಕ್ಕೆ ಜಾಹೀರಾತು ರೂಪದಲ್ಲಿ ಪ್ರಕಟಿಸಿದ ಕನ್ನಡದ ಸುದ್ದಿಪತ್ರಿಕೆಗಳ ವಿಶ್ವಾಸರ್ಹತೆ ಬಗ್ಗೆಯೇ ಪ್ರಶ್ನೆಗಳು ಎದ್ದಿವೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi) ಸರ್ಕಾರದಲ್ಲಿ ಸಚಿವರಾಗಿರುವ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಒಡೆತನದ ಕನ್ನಡಪ್ರಭ, ವಿಶ್ವೇಶ್ವರ್ ಭಟ್ ಅವರ ವಿಶ್ವವಾಣಿ, ಸಂಯುಕ್ತ ಕರ್ನಾಟಕ ಮತ್ತು ಹೊಸದಿಗಂತ ಪತ್ರಿಕೆ ಮುಖಪುಟದಲ್ಲೇ ಜಾಹೀರಾತು ರೂಪದಲ್ಲಿ ಸುದ್ದಿಗಳನ್ನು ಪ್ರಕಟಿಸಿದೆ.
ಬಿಜೆಪಿ ಕರ್ನಾಟಕ ಈ ಸುದ್ದಿಗಳನ್ನು ಜಾಹೀರಾತು ರೂಪದಲ್ಲಿ ಕನ್ನಡದ ಸುದ್ದಿಪತ್ರಿಕೆಗಳಲ್ಲಿ ದುಡ್ಡು ಕೊಟ್ಟು ಪ್ರಕಟಿಸಿದೆ.
ಬಿಜೆಪಿಯೇ ದುಡ್ಡು ಕೊಟ್ಟು ಸುದ್ದಿ ಹಾಕಿಸಿರುವ ಕಾರಣ ಈ ನಾಲ್ಕು ಪತ್ರಿಕೆಗಳ ಮುಖಪುಟದಲ್ಲಿ ಜಾಹೀರಾತು ರೂಪದಲ್ಲಿ ಪ್ರಕಟ ವಾಗಿರುವ ಸುದ್ದಿಗಳು ಮತ್ತು ಸುದ್ದಿಗಳನ್ನು ಹಾಕಿರುವ ಜಾಗ ಕೂಡಾ ಒಂದೇ ರೀತಿ ಇದೆ.
ಜಾಹೀರಾತಿನ ಕೆಳಭಾಗದಲ್ಲಿ ಮೂಲೆಯಲ್ಲಿ ಸಣ್ಣ ಅಕ್ಷರಗಳಲ್ಲಿ ಪ್ರಕಟಣೆ: ಬಿಜೆಪಿ ಕರ್ನಾಟಕ ಎಂಬ ಎರಡು ಪದಗಳಿವೆ.
ಆದರೆ ಈ ಸುದ್ದಿಗಳನ್ನು ಓದಿದರೆ ಇದು ಪತ್ರಿಕೆಯವರೇ ಪ್ರಕಟಿಸಿರುವ ಸುದ್ದಿ ಆಗಿರಬೇಕು ಎಂಬ ಎಂದು ಸಾಮಾನ್ಯ ಓದುಗರು ಭಾವಿಸಿದರೆ ಅದು ಸಾಮಾನ್ಯ ಓದುಗರು ಮಾಡಿಕೊಳ್ಳುವ ಸ್ವಯಂಕೃತ ಅಪರಾಧವಷ್ಟೇ.
ದುಡ್ಡು ಕೊಟ್ಟರೆ ಸುದ್ದಿಗಳನ್ನು ಜಾಹೀರಾತಿನ ರೂಪದಲ್ಲಿ ಹಾಕಬಹುದು ಎನ್ನುವ ಮೂಲಕ ಕನ್ನಡ ಪತ್ರಿಕೋದ್ಯಮ ಕಡುಕೆಟ್ಟ, ಹೊಲಸು ಸಂಪ್ರದಾಯವನ್ನು ಬಹಿರಂಗವಾಗಿಯೇ ಆರಂಭಿಸಿದ್ದು ಮಾತ್ರ ವಿಷಾದನೀಯ.
ದುಡ್ಡು ಕೊಟ್ಟು ಪ್ರಕಟಿಸಿದ ಸುದ್ದಿಗಳ ಸರಣಿ ಟ್ವೀಟ್:
ಕನ್ನಡದ ನಾಲ್ಕು ದಿನಪತ್ರಿಕೆಗಳಲ್ಲಿ ತಾನು ದುಡ್ಡು ಕೊಟ್ಟು ಪ್ರಕಟಿಸಿದ ಸುದ್ದಿಗಳನ್ನು ಪತ್ರಿಕೆಗಳೇ ತಮ್ಮ ವರದಿಯ ಭಾಗವಾಗಿ ಪ್ರಕಟಿಸಿದಂತೆ ಬಿಂಬಿಸಲು ತಾನು ಜಾಹೀರಾತು ಕೊಟ್ಟಿದ್ದ ಸುದ್ದಿಗಳನ್ನು ಬಿಜೆಪಿ ಕರ್ನಾಟಕ ತನ್ನ ಟ್ವಿಟ್ಟರ್ ಖಾತೆಯಲ್ಲಿ ಸರಣಿ ರೂಪದಲ್ಲಿ ಹಂಚಿಕೊಳ್ಳುತ್ತಿದೆ.