ಹಳೆ ಪಿಂಚಣಿ ಯೋಜನೆ ಜಾರಿಗೆ ಬಿಜೆಪಿ ತೀವ್ರ ವಿರೋಧ – ಸರ್ಕಾರಿ ನೌಕರರಿಗೆ ಆಘಾತ

ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಮೂಲಕ ಸರ್ಕಾರಿ ನೌಕರರಿಗೆ ಬಿಜೆಪಿ ಆಘಾತ ನೀಡಿದೆ.

ಫೆಬ್ರವರಿ 1ರಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಜೆಟ್​ ಮಂಡಿಸಿದ ಬಳಿಕ ಬಜೆಟ್​ ಮೇಲಿನ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹಳೆ ಪಿಂಚಣಿ ಯೋಜನೆ ಮರು ಜಾರಿ ಸೂಕ್ತವಲ್ಲ ಎಂದು ಇಂಗ್ಲೀಷ್​ ಸುದ್ದಿವಾಹಿನಿ ನ್ಯೂಸ್​18ಗೆ ನೀಡಿದ ಸಂದರ್ಶನದಲ್ಲಿ ಸಚಿವರು ಹೇಳಿದ್ದಾರೆ.

ಭವಿಷ್ಯದ ಜನಾಂಗದ ಮೇಲೆ ಹೊರೆಯನ್ನು ಹಾಕಿ ಪ್ರಸ್ತುತ ಇರುವ ಪಿಂಚಣಿದಾರರಿಗೆ ಹಳೆ ಪಿಂಚಣಿ ಯೋಜನೆಯಂತೆ ಪಿಂಚಣಿ ನೀಡುವುದು ಸರಿಯಲ್ಲ

ಎಂದು ಹಣಕಾಸು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾರ್ಕಿಕ ಸಮತೋಲನ ಮತ್ತು ಮುಂದಿನ ಜನಾಂಗಕ್ಕೆ ನಾವು ಏನು ಬಿಟ್ಟು ಹೋಗಲಿದ್ದೇವೆ ಎಂಬ ಬಗ್ಗೆ ನಾವು ಯೋಚನೆ ಮಾಡಬೇಕು. ಆರ್ಥಿಕತೆಗಾಗಿ ಸಾಲ ಎತ್ತುವುದು ಅಗತ್ಯ, ಆದರೆ ಇವತ್ತಿನ ಬಗ್ಗೆಯಲ್ಲ, ಭವಿಷ್ಯದ ದಶಕಗಳ ರಾಜ್ಯದ ಆರ್ಥಿಕ ಆರೋಗ್ಯದ ಬಗ್ಗೆ ಸಂಪೂರ್ಣ ತಿಳುವಳಿಕೆ ಇಲ್ಲದ ಹೊರತು ಆತುರದಿಂದ ನಿರ್ಧಾರಕ್ಕೆ ಬರುವುದು ಸರಿಯಲ್ಲ.

ಎಂದು ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದ್ದಾರೆ.

ಹಳೆ ಪಿಂಚಣಿ ಮರು ಜಾರಿಯಿಂದ ಕೆಲವು ರಾಜ್ಯಗಳ ಆರ್ಥಿಕತೆ ಮೇಲೆ ಅಪಾಯ ಕಾಡುತ್ತಿದೆ. ಪ್ರಸ್ತುತ ವೆಚ್ಚಗಳನ್ನು ಭವಿಷ್ಯತ್ತಿಗೆ ಮುಂದೂಡುವ ಮೂಲಕ ರಾಜ್ಯಗಳು ಮುಂದಿನ ವರ್ಷಗಳಲ್ಲಿ ನಿಧಿ ಇಲ್ಲದ ಪಿಂಚಣಿ ಹೊರೆಯನ್ನು ಅನುಭವಿಸಲಿವೆ 

ಎಂದು ಆರ್​ಬಿಐ ವರದಿಯೂ ಹೇಳಿತ್ತು.

ಹಳೆ ಪಿಂಚಣಿ ಯೋಜನೆಯಿಂದ ಭಾರತ ದಿವಾಳಿ:

ಹಳೆ ಪಿಂಚಣಿ ಯೋಜನೆ ಮರು ಜಾರಿಯಾದರೆ 2030ರ ವೇಳೆಗೆ ಭಾರತ ದಿವಾಳಿ ಆಗಲಿದೆ ಎಂದು ಹರಿಯಾಣ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಮನೋಹರ್​ ಲಾಲ್​ ಕಟ್ಟರ್​ ಹೇಳಿದ್ದಾರೆ. ತಮ್ಮ ವಾದ ಸಮರ್ಥನೆಗೆ ಅವರು ತಮ್ಮ ವಾಟ್ಸಾಪ್​ನಲ್ಲಿ ಬಂದ ಸಂದೇಶವನ್ನು ಉಲ್ಲೇಖಿಸಿದ್ದಾರೆ.

ನಾನು ನಿನ್ನೆ ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ವಾಟ್ಸಾಪ್​ನಲ್ಲಿ ಕಳುಹಿಸಿದ್ದ ಸಂದೇಶ ನೋಡಿದೆ. ಆ ಅಧಿಕಾರಿ ಹೇಳುವಂತೆ ಒಂದು ವೇಳೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದರೆ 2030ರೊಳಗೆ ದೇಶ ದಿವಾಳಿ ಆಗಲಿದೆ

ಎಂದು ಸಿಎಂ ಮನೋಹರ್​ ಲಾಲ್​ ಕಟ್ಟರ್​ ಹೇಳಿದ್ದಾರೆ.

ಮನಮೋಹನ್​ ಸಿಂಗ್​ ಖ್ಯಾತ ಅರ್ಥಶಾಸ್ತ್ರಜ್ಱರು ಮತ್ತು ಹಳೆ ಪಿಂಚಣಿ ಯೋಜನೆ ಜಾರಿಯಿಂದ ಭಾರತ ಹಿಂದುಳಿಯಲಿದೆ ಎಂದು 2006ರಲ್ಲಿ ಅವರು ಹೇಳಿದ್ದರು 

ಎಂದು ಮನೋಹರ್​ ಲಾಲ್​ ಕಟ್ಟರ್​​ ಹಳೆ ಪಿಂಚಣಿ ಯೋಜೆ ಜಾರಿಗೆ ವಿರೋಧಿಸಿದ್ದಾರೆ.

ಕೆಲವು ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆ ಮರು ಜಾರಿ:

ಹಿಮಾಚಲಪ್ರದೇಶದಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್​ ತನ್ನ ಮೊದಲ ಸಂಪುಟ ಸಭೆಯಲ್ಲೇ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಿ ಆದೇಶ ಹೊರಡಿಸಿದೆ. ಕಾಂಗ್ರೆಸ್​ ಆಡಳಿತ ಇರುವ ರಾಜಸ್ಥಾನ ಮತ್ತು ಛತ್ತೀಸ್​ಗಢದಲ್ಲೂ ಹಳೆ ಪಿಂಚಣಿ ಯೋಜನೆ ಜಾರಿ ಆಗಿದೆ.

ಪಂಜಾಬ್​ನಲ್ಲಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಆಮ್​ ಆದ್ಮಿ ಪಾರ್ಟಿ ಸರ್ಕಾರ ಕೂಡಾ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದೆ.

ಕರ್ನಾಟಕದಲ್ಲೂ ಹಳೆ ಪಿಂಚಣಿ ಯೋಜನೆಗಾಗಿ ಹೋರಾಟ:

ಕರ್ನಾಟಕದಲ್ಲೂ ಕೆಲ ದಿನಗಳ ಹಿಂದೆ ರಾಜ್ಯ ಸರ್ಕಾರಿ ನೌಕರರು ಹಳೆ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್​​ನಲ್ಲಿ ಹೋರಾಟ ಕೈಗೊಂಡಿದ್ದರು. ಯಾರು ಹಳೆ ಪಿಂಚಣಿ ಯೋಜನೆ ಜಾರಿಗೆ ತರುತ್ತಾರೋ ಅವರಿಗೆ ಮತ ಹಾಕುವುದಾಗಿ ಘೋಷಿಸಿದ್ದಾರೆ.

 

 

LEAVE A REPLY

Please enter your comment!
Please enter your name here