ADVERTISEMENT
ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ಲಿಂಗಾಯತ ಮತಗಳು ಕೈ ತಪ್ಪಬಹುದು ಎಂಬ ಆತಂಕ ಬಿಜೆಪಿಯನ್ನು ಬಲವಾಗಿ ಕಾಡಲು ಶುರುವಾಗಿದೆ.
ಈ ಹಿನ್ನೆಲೆಯಲ್ಲಿ ಲಿಂಗಾಯತ ಮತಗಳನ್ನು ಮತ್ತೆ ಸೆಳೆಯುವ ಪ್ರಯತ್ನದ ಭಾಗವಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಬಿಜೆಪಿ ಹೊಸ ಹುದ್ದೆಯನ್ನು ನೀಡುವ ನಿರೀಕ್ಷೆ ಇದೆ.
ಕರ್ನಾಟಕ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಬಿಜೆಪಿ ಯಡಿಯೂರಪ್ಪ ಅವರನ್ನು ನೇಮಕ ಮಾಡಬಹುದು ಎಂದು ಮೂಲಗಳು ತಿಳಿಸಿವೆ.
ಈ ಮೂಲಕ ಕರ್ನಾಟಕದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಭಾರವನ್ನು ಬಿಜೆಪಿ ಯಡಿಯೂರಪ್ಪನವರ ಮೇಲೆ ಹಾಕುವ ನಿರೀಕ್ಷೆ ಇದೆ.
ಜೊತೆಗೆ ಕರ್ನಾಟಕದಲ್ಲಿ ಬಿಜೆಪಿಗೆ ಯಡಿಯೂರಪ್ಪನವರೇ ಸರ್ವೋಚ್ಛ ನಾಯಕರು, ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂಬ ಸಂದೇಶ ರವಾನಿಸುವ ಪ್ರಯತ್ನವನ್ನೂ ಬಿಜೆಪಿ ಮಾಡಲಿದೆ ಎನ್ನಲಾಗಿದೆ.
ಅವಧಿಪೂರ್ಣಗೊಳಿಸಲು ಅವಕಾಶವನ್ನು ಕೊಡದೇ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರನ್ನು ಇಳಿಸಿದ ಬಳಿಕ ಬಿಜೆಪಿ ಬಿಎಸ್ವೈ ಅವರನ್ನು ಸಂಪೂರ್ಣವಾಗಿ ಕಡೆಗಣಿಸಿತ್ತು.
ಚುನಾವಣೆಯಲ್ಲಿ ಹಿನ್ನಡೆ ಆಗಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ಬಿಜೆಪಿ ಸಂಸದೀಯ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಿತ್ತಾದರೂ ಅದು ಪಕ್ಷಕ್ಕೆ ಆಗಿರುವ ಹಾನಿಯನ್ನು ಸರಿಪಡಿಸುವಲ್ಲಿ ನೆರವಾಗಿಲ್ಲ.
ಸ್ವತಃ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಗಳಿಗೂ ಯಡಿಯೂರಪ್ಪ ಅವರನ್ನು ಕರೆದಿರಲಿಲ್ಲ. ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಕೊನೆಗೆ ಘಳಿಗೆಯಲ್ಲಿ ತರಾತುರಿಯಲ್ಲಿ ಯಡಿಯೂರಪ್ಪ ಅವರನ್ನು ಆಹ್ವಾನಿಸಲಾಗಿತ್ತು.
ಮಂಡ್ಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದ ಸಮಾವೇಶದಲ್ಲೂ ಯಡಿಯೂರಪ್ಪನವರಿಗೆ ಆಹ್ವಾನ ಇರಲಿಲ್ಲ.
ಕಾಂಗ್ರೆಸ್ನಲ್ಲೂ ಲಿಂಗಾಯತರೇ ಪ್ರಚಾರ ಸಮಿತಿ ಅಧ್ಯಕ್ಷ:
ಇತ್ತ ಕಾಂಗ್ರೆಸ್ನಲ್ಲಿ ಪ್ರಮುಖ ಲಿಂಗಾಯತ ನಾಯಕ ಮತ್ತು ಮಾಜಿ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಅವರು ಕಾಂಗ್ರೆಸ್ನ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದಾರೆ. ಈ ಮೂಲಕ ನಾವೂ ಲಿಂಗಾಯತರಿಗೆ ಮಣೆ ಹಾಕಿದ್ದೇವೆ ಎಂಬ ಸಂದೇಶವನ್ನು ಈ ಹಿಂದೆಯೇ ರವಾನಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಿತ್ತು.
ADVERTISEMENT