ನಿವೃತ್ತ ಐಪಿಎಸ್​ ಅಣ್ಣಾಮಲೈಗೆ ಕರ್ನಾಟಕ ಚುನಾವಣಾ ಜವಾಬ್ದಾರಿ ವಹಿಸಿದ ಬಿಜೆಪಿ

ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ನಿವೃತ್ತ ಐಪಿಎಸ್​ ಅಧಿಕಾರಿ ಮತ್ತು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರಿಗೆ ಬಿಜೆಪಿ ಕರ್ನಾಟಕದಲ್ಲಿ ಚುನಾವಣಾ ಜವಾಬ್ದಾರಿಯನ್ನು ನೀಡಿದೆ.
ಚುನಾವಣಾ ಉಸ್ತುವಾರಿ ಮತ್ತು ಸಹ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಆದೇಶಿಸಿದ್ದಾರೆ.
ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಕೆ ಧರ್ಮೆಂದ್ರ ಪ್ರಧಾನ್​ ಅವರನ್ನು ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿಯನ್ನಾಗಿ ನೇಮಕ ಮಾಡಿದೆ.
ಕೆ ಅಣ್ಣಾಮಲೈ ಅವರನ್ನು ಸಹ ಚುನಾವಣಾ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.
ಈ ಹಿಂದೆ ಧರ್ಮೆಂದ್ರ ಪ್ರಧಾನ್​ ಕರ್ನಾಟಕ ಬಿಜೆಪಿ ಉಸ್ತುವಾರಿ ಆಗಿದ್ದರು. ಕರ್ನಾಟಕದಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರಧಾನ್​ ಅರಿವಿರುವ ಹಿನ್ನೆಲೆಯಲ್ಲಿ ಅವರಿಗೆ ಚುನಾವಣಾ ರಣತಂತ್ರದ ಹೊಣೆಗಾರಿಕೆ ನೀಡಲಾಗಿದೆ.
ಅಣ್ಣಾಮಲೈ ಅವರು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ತಮ್ಮ ಪೊಲೀಸ್​ ಸೇವೆಯನ್ನು ಆರಂಭಿಸಿದ್ದರು. ಆ ಬಳಿಕ ಚಿಕ್ಕಮಗಳೂರು ಎಸ್​ಪಿಯಾಗಿ, ಬೆಂಗಳೂರಲ್ಲೂ ಪೊಲೀಸ್​ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಇತ್ತೀಚೆಗೆ ಚಿಕ್ಕಮಗಳೂರು ಉತ್ಸವದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರೊಂದಿಗೆ ಭಾಗವಹಿಸಿ ಗಮನ ಸೆಳೆದಿದ್ದರು.
ಅಣ್ಣಾಮಲೈ ಅವರಿಗೆ ಚುನಾವಣಾ ಸಹ ಉಸ್ತುವಾರಿ ನೀಡುವ ಮೂಲಕ ಯುವಕರ ಮತಗಳನ್ನು ಸೆಳೆಯಬಹುದು ಎನ್ನುವುದು ಬಿಜೆಪಿ ಆಲೋಚನೆ.

LEAVE A REPLY

Please enter your comment!
Please enter your name here