ಬಿಗ್ ಬಾಸ್ ಖ್ಯಾತಿಯ ನಗೆ ನಟ ಮಂಜು ಪಾವಗಡ ಸಹೋದರ ಪ್ರದೀಪ್ ವಿರುದ್ಧ ಬ್ಲಾಕ್ ಮೇಲ್ ಆರೋಪ ಕೇಳಿಬಂದಿದ್ದು, ಸಾರ್ವಜನಿಕರು ಮೈ ಚಳಿ ಬಿಡಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ಸತ್ಯ ವಿಸ್ಮಯ ಹೆಸರಿನ ವಾರ ಪತ್ರಿಕೆ ಸಂಪಾದಕರಾಗಿರುವ ಮಂಜು ಪಾವಗಡ ಸಹೋದರ ಪ್ರದೀಪ್, ತುಮಕೂರು ನಗರದ ಜೀವನೋಪಾಯ ಕೇಂದ್ರದಲ್ಲಿ CRC ಆಗಿ ಕೆಲಸ ಮಾಡುತ್ತಿರುವ ದೀಪಿಕಾ ಎಂಬ ಮಹಿಳೆಗೆ ಹಣಕ್ಕಾಗಿ ಬೇಡಿಕೆ ಇಟ್ಟು ಬ್ಲಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ.
ಸಬ್ಸಿಡಿಯಲ್ಲಿ ಸಾಲ ಮಂಜೂರು ಮಾಡಿಕೊಡುವಂತೆ ದೀಪಿಕಾ ಅವರಲ್ಲಿ ದುಂಬಾಲು ಬಿದ್ದಿದ್ದ ಪ್ರದೀಪ್ ಪಾವಗಡ, ಲಂಚದ ಆಸೆ ತೋರಿಸಿ, ಅದನ್ನು ವಿಡಿಯೋ ಮಾಡಿಟ್ಟುಕೊಂಡಿದ್ದರು. ನಂತರ ಆ ವಿಡಿಯೋ ತೋರಿಸಿ ನಿರಂತರವಾಗಿ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಶುಕ್ರವಾರ ಸಂಜೆ ದೀಪಿಕಾ ಕೆಲಸ ಮಾಡುವ ಜಾಗಕ್ಕೆ ಬಂದು ಬ್ಲಾಕ್ ಮೇಲ್ ಮಾಡುತ್ತಿದ್ದಾಗ, ದೀಪಿಕಾ ರೊಚ್ಚಿಗೆದ್ದಿದ್ದಾರೆ. ಸಿಬ್ಬಂದಿ ಜೊತೆ ಸೇರಿಕೊಂಡು ಪ್ರದೀಪ್ ಪಾವಗಡಗೆ ಚಪ್ಪಲಿಯಿಂದ ಥಳಿಸಿದ್ದಾರೆ.
ಅಷ್ಟೇ ಅಲ್ಲ, ಪ್ರದೀಪ್ ಪಾವಗಡ ಜೊತೆ ಬಂದಿದ್ದ ನಕಲಿ ಪತ್ರಕರ್ತರು ಸೇರಿ ಹ್ಯೂಮನ್ ರೈಟ್ಸ್ ಎಂದು ಹೇಳಿಕೊಂಡು ಬಂದವರಿಗೂ ಸಿಬ್ಬಂದಿಯೇ ಧರ್ಮದೇಟು ನೀಡಿದ್ದಾರೆ.
ದೀಪಿಕಾ ನೀಡಿದ ದೂರಿನ ಆಧಾರದ ಮೇಲೆ ಪ್ರದೀಪ್ ಪಾವಗಡ ಸೇರಿ ನಾಲ್ವರು ವಂಚಕರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.
ಪ್ರದೀಪ್ ಪಾವಗಡ ವಂಚನೆ ಮತ್ತು ಬ್ಲಾಕ್ ಮೇಲ್ ಪ್ರಕರಣ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ ಅವರಿಗೂ ಮುಜುಗರ ಉಂಟು ಮಾಡಿದೆ.