ADVERTISEMENT
ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿದ್ದ ಮಲ್ಲಿಕಾರ್ಜುನ ಖೂಬಾ ಅವರು ಬಿಜೆಪಿ ಬಿಡಲು ನಿರ್ಧರಿಸಿದ್ದಾರೆ.
ಬಿಜೆಪಿ ಬಿಟ್ಟು ಖೂಬಾ ಅವರು ಜೆಡಿಎಸ್ ಸೇರಲಿದ್ದಾರೆ.
ಜೆಡಿಎಸ್ ಸೇರುವ ಸಂಬಂಧ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಆಗಿದ್ದಾರೆ.
ಚನ್ನಪಟ್ಟಣಕ್ಕೆ ತೆರಳಿ ಕುಮಾರಸ್ವಾಮಿ ಅವರನ್ನು ಭೇಟಿ ಆಗಿರುವ ಖೂಬಾ, ಕುಮಾರಸ್ವಾಮಿ ಅವರಿಗೆ ಶಾಲು ಹಾಕಿ ಸನ್ಮಾನಿಸಿದ್ದಾರೆ.
ಖೂಬಾ ಅವರಿಗೆ ಜೆಡಿಎಸ್ ಬಸವಕಲ್ಯಾಣದಿಂದ ಟಿಕೆಟ್ ನೀಡಲಿದೆ.
ಈಗಾಗಲೇ ಈ ಬಸವಕಲ್ಯಾಣದಿಂದ ಸೈಯದ್ ಯಾಸ್ರಬ್ ಅಲಿ ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡಲಾಗಿದೆಯಾದರೂ ಖೂಬಾ ಅವರಿಗೆ ಜೆಡಿಎಸ್ ಟಿಕೆಟ್ ನೀಡಲಿದೆ.
2013ರಲ್ಲಿ ಖೂಬಾ ಅವರು ಜೆಡಿಎಸ್ ಟಿಕೆಟ್ನಿಂದ ಗೆದ್ದು ಶಾಸಕರಾಗಿದ್ದರು. 2004ರಲ್ಲೂ ಜೆಡಿಎಸ್ ಶಾಸಕರಾಗಿ ಖೂಬಾ ಗೆದ್ದಿದ್ದರು. ಆದರೆ 2018ರ ಚುನಾವಣೆ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಅವರ ಆಗ್ರಹದ ಮೇರೆಗೆ ಬಿಜೆಪಿಗೆ ಸೇರ್ಪಡೆ ಆಗಿದ್ದರು.
ಆದರೆ 2018ರ ಚುನಾವಣೆಯಲ್ಲಿ ಖೂಬಾ ಅವರು ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. 2018ರಲ್ಲಿ ಕಾಂಗ್ರೆಸ್ನಿಂದ ಬಿ ನಾರಾಯಣ ರಾವ್ ಅವರು ಗೆದ್ದಿದ್ದರು.
ಆದರೆ ನಾರಾಯಣ್ ರಾವ್ ಅವರ ನಿಧನದಿಂದ 2021 ನಡೆದ ಉಪ ಚುನಾವಣೆಯಲ್ಲಿ ಖೂಬಾ ಬದಲಿಗೆ ಬಿಜೆಪಿ ಶರಣು ಸಲಗಾರ್ ಅವರಿಗೆ ಟಿಕೆಟ್ ನೀಡಿತ್ತು.
ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಖೂಬಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 9,390 ಮತಗಳನ್ನು ಪಡೆದರು.
ಖೂಬಾ ಬಂಡಾಯದ ಹಿನ್ನೆಲೆಯಲ್ಲಿ ಉಪ ಚುನಾವಣೆಯ ದಿನದಂದೇ ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷದವರೆಗೆ ಅಮಾನತು ಮಾಡಲಾಗಿತ್ತು.
ADVERTISEMENT