ಅಕ್ಷಯ್ ಕುಮಾರ್ ಉಪ್ಪಡುಕುಕ್ಕು -ಮುಖ್ಯ ಸಂಪಾದಕರು, ಪ್ರತಿಕ್ಷಣ ನ್ಯೂಸ್
ಬಂಟ್ವಾಳ ವಿಧಾನಸಭಾ ಕ್ಷೇತ್ರ. ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ರಾಜಕೀಯ ಇತಿಹಾಸವನ್ನು ಗಮನಿಸಿದರೆ ಇದು ಕಾಂಗ್ರೆಸ್ ಭದ್ರಕೋಟೆ. ಮಾಜಿ ಸಚಿವ ರಮಾನಾಥ್ ರೈ ಅವರ ವೈಯಕ್ತಿಕ ವರ್ಚಸ್ಸು, ಪ್ರಭಾವ ಹೊಂದಿರುವ ಕ್ಷೇತ್ರ.
1985ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದ ರಮಾನಾಥ್ ರೈ ಅವರು ಆ ಬಳಿಕ 1989, 1994, 1999ರಲ್ಲಿ ನಿರಂತರವಾಗಿ ಗೆದ್ದು ವಿಧಾನಸೌಧ ಪ್ರವೇಶಿಸಿದರು.
ರಮಾನಾಥ್ ರೈ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಸೋಲಾಗಿದ್ದು 2004ರಲ್ಲಿ. ಸಮ್ಮಿಶ್ರ ಸರ್ಕಾರ ರಚನೆಗೆ ಕಾರಣವಾಗಿದ್ದ 2004ರ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ನಾಗರಾಜ್ ಶೆಟ್ಟಿ ಅವರು ಬಿಜೆಪಿಯಿಂದ ಗೆದ್ದು ಮೊದಲ ಬಾರಿಗೆ ಬಂಟ್ವಾಳ ಶಾಸಕರಾದರು.
ಆದರೆ 2008ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಮೊದಲ ಬಾರಿಗೆ ಸ್ವತಂತ್ರವಾಗಿ ಸರ್ಕಾರ ರಚಿಸಲು ಕಾರಣವಾಗಿದ್ದ ಚುನಾವಣೆಯಲ್ಲಿ ಬಿಜೆಪಿಗೆ ಬಂಟ್ವಾಳದಲ್ಲಿ ಸೋಲಾಯಿತು. ಮತ್ತೆ ರಮಾನಾಥ್ ರೈ ಅವರೇ ಗೆದ್ದರು. 2013ರಲ್ಲೂ ಸತತ ಎರಡನೇ ಬಾರಿಯೂ ಗೆದ್ದು ರೈ ಅವರೇ ಶಾಸಕರಾದರು.
ಆದರೆ 2018ರ ಚುನಾವಣೆಯಲ್ಲಿ ಬಂಟ್ವಾಳದಲ್ಲಿ ಮತ್ತೆ ಬಿಜೆಪಿ ಗೆಲ್ತು, ಕಾಂಗ್ರೆಸ್ ಸೋಲ್ತು. ಆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಹೊಸ ಮುಖವನ್ನು ಪರಿಚಯಿಸಿತು, ಅವರೇ ಉಳಿಪ್ಪಾಡಿ ರಾಜೇಶ್ ನಾಯ್ಕ್. ಕಳೆದ ಚುನಾವಣೆಯಲ್ಲಿ ರಾಜೇಶ್ ನಾಯಕ್ 15,971 ಮತಗಳಿಂದ ರಮಾನಾಥ್ ರೈ ಅವರ ವಿರುದ್ಧ ಗೆದ್ದು ಮೊದಲ ಬಾರಿಗೆ ಶಾಸಕರಾದರು.
2018ರಲ್ಲಿ ಬಂಟ್ವಾಳದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಗಿದ್ದ ಅಂಶಗಳು:
1. ಆಡಳಿತ ವಿರೋಧಿ ಅಲೆ:
ಸಿದ್ದರಾಮಯ್ಯನವರ ಸರ್ಕಾರ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆ
2. ಹಿಂದೂ ಕಾರ್ಯಕರ್ತರ ಕೊಲೆ:
ಬಂಟ್ವಾಳದಲ್ಲಿ ನಡೆದಿದ್ದ ಶರತ್ ಮಡಿವಾಳ, ಹರೀಶ್ ಪೂಜಾರಿ ಕೊಲೆಯನ್ನು ಮುಂದಿಟ್ಟುಕೊಂಡು ಹಿಂದೂಗಳಿಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ರಕ್ಷಣೆ ಇಲ್ಲ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿ ಹಿಂದೂ ಮತಗಳ ಕ್ರೋಢೀಕರಣ ಮಾಡುವಲ್ಲಿ ಯಶಸ್ವಿ ಆಯಿತು.
3. ಕಲ್ಲಡ್ಕ ಪ್ರಭಾಕರ್ ವಿದ್ಯಾಕೇಂದ್ರದ ವಿವಾದ:
ಕಲ್ಲಡ್ಕ ಪ್ರಭಾಕರ್ ಭಟ್ ನಡೆಸುತ್ತಿರುವ ಶ್ರೀರಾಮಕೇಂದ್ರಕ್ಕೆ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಿಂದ ದತ್ತಿ ಕೇಂದ್ರದಿಂದ ನೀಡಲಾಗುತ್ತಿದ್ದ ಅನುದಾನವನ್ನು ಆಗಿನ ಸಿದ್ದರಾಮಯ್ಯ ಸರ್ಕಾರ ವಾಪಸ್ ಪಡೆದಿದ್ದನ್ನು ಬಿಜೆಪಿ ಮತ್ತು ಆರ್ಎಸ್ಎಸ್ ಹಿಂದೂ ವಿರೋಧಿ ನಡೆ ಎಂದು ಬಣ್ಣಿಸಿ ಮತ ಸೆಳೆಯಲು ಬಳಸಿಕೊಂಡವು. ಯಶಸ್ವಿ ಆದವು.
4. ವಿವಾದಾತ್ಮಕ ಮಾತುಗಳು:
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮಾನಾಥ್ ರೈ ಅವರು ಆಡಿದ್ದ ವಿವಾದಾತ್ಮಕ ಮಾತುಗಳು ಅವರಿಗೆ ಕ್ಷೇತ್ರದಲ್ಲಿ ಹಿನ್ನಡೆಗೆ ಪ್ರಮುಖ ಕಾರಣವಾಗಿತ್ತು.
5. ಪೂಜಾರಿ ಅವರ ಆಪ್ತ ಬಿಜೆಪಿಗೆ ಹೋಗಿದ್ದು:
ಕರಾವಳಿ ಕಾಂಗ್ರೆಸ್ ರಾಜಕೀಯ ಮುತ್ಸದಿ ಜನಾರ್ದನ ಪೂಜಾರಿ ಅವರು 2018ರ ಚುನಾವಣೆಯ ಸಂದರ್ಭದಲ್ಲಿ ತಮ್ಮ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದು ಮತ್ತು ಅವರ ಆಪ್ತ ವಲಯದಲ್ಲಿದ್ದ ಹರಿಕೃಷ್ಣ ಬಂಟ್ವಾಳ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ವಾಲಿದ್ದು ಕೂಡಾ ಬಿಜೆಪಿಗೆ ಲಾಭ ಆಗಿತ್ತು.
6. ಪೊಳಲಿ ದೇವಸ್ಥಾನ ಕೊಡಿಮರ ವಿಷಯ:
ಪೊಳಲಿ ದೇವಸ್ಥಾನದ ಕೊಡಿಮರವನ್ನು ಆಗ ಅರಣ್ಯ ಸಚಿವ ರಮನಾಥ್ ರೈ ಅವರು ಮಾಡಿಸಿಕೊಟ್ಟಿದ್ದರು. ಆದರೆ ಅದಕ್ಕೆ ಸರ್ಕಾರಕ್ಕೆ 21 ಲಕ್ಷ ರೂಪಾಯಿ ಕಟ್ಟಬೇಕಾಗಿತ್ತು. ಕಾಂಗ್ರೆಸ್ ಸರ್ಕಾರ ಬಿಲ್ಲವರಿಂದ ದುಡ್ಡು ಕಟ್ಟಿಸಿಕೊಂಡಿತು ಎಂದು ಕೊನೆ ಕ್ಷಣದಲ್ಲಿ ಹಬ್ಬಿಸಿ ಬಿಜೆಪಿ ಮತ ಅಸ್ತ್ರವಾಗಿ ಬಳಸಿಕೊಂಡಿತ್ತು.
ಏನಾಗಬಹುದು..?