ADVERTISEMENT
ಬಿಜೆಪಿಯಲ್ಲಿ ಕಡೆಗಣಿಸಲ್ಪಟ್ಟಿದ್ದ, ಮೂಲೆಗುಂಪಾಗಿದ್ದ ಇಳಿ ವಯಸ್ಸಿನ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಎಸ್ ಎಂ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವ ಪತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೃಷ್ಣ ಅವರು ರವಾನಿಸಿದ್ದಾರೆ.
ಬಿಜೆಪಿಯಲ್ಲಿ ಕಡೆಗಣಿಸಲ್ಪಟ್ಟಿದ್ದ ಎಸ್ ಎಂ ಕೃಷ್ಣ:
2017ರ ಜನವರಿಯಲ್ಲಿ ಎಸ್ ಎಂ ಕೃಷ್ಣ ಅವರು ಕಾಂಗ್ರೆಸ್ನ್ನು ಬಿಟ್ಟು ಅದೇ ವರ್ಷದ ಮಾರ್ಚ್ನಲ್ಲಿ ಬಿಜೆಪಿಗೆ ಸೇರ್ಪಡೆ ಆಗಿದ್ದರು. ಈ ಮೂಲಕ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ದೊಡ್ಡ ಶಕ್ತಿ ಸಿಕ್ಕಿದೆ ಎಂದು ಬಿಜೆಪಿ ಬಿಂಬಿಸಿಕೊಳ್ಳುವ ಪ್ರಯತ್ನವನ್ನು ಮಾಡಿತ್ತು.
ಎಸ್ ಎಂ ಕೃಷ್ಣ ಅವರು ಬಿಜೆಪಿ ಸೇರಿದ್ದ ಆರಂಭದಲ್ಲಿ ಅವರನ್ನು ದೇಶದ ಉಪ ರಾಷ್ಟ್ರಪತಿಯನ್ನಾಗಿ ಮಾಡಲಾಗುತ್ತದೆ ವದಂತಿ ಆಗಿತ್ತು. ಆದರೆ ಬಿಜೆಪಿ ಕೃಷ್ಣ ಅವರನ್ನು ಉಪರಾಷ್ಟ್ರಪತಿ ಹುದ್ದೆಗೆ ಏರಿಸಲಿಲ್ಲ.
ಎಸ್ ಎಂ ಕೃಷ್ಣ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಬಿಜೆಪಿ ನಾಯಕರೆಲ್ಲ ದೊಡ್ಡ ದೊಡ್ಡ ಮಾತುಗಳನ್ನು ಆಡಿದ್ದರೂ ಹಳೆ ಮೈಸೂರು ಭಾಗದಲ್ಲಿ ನಡೆದ ಪಕ್ಷದ ಪ್ರಮುಖ ಚಟುವಟಿಕೆಯಿಂದಲೇ ಕೃಷ್ಣ ಅವರನ್ನು ದೂರ ಇಡಲಾಯಿತು.
ಇದೇ ಡಿಸೆಂಬರ್ 31ರಂದು ಕೃಷ್ಣ ಅವರ ತವರು ಜಿಲ್ಲೆ ಮಂಡ್ಯದಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಸಭೆಗೂ ಕೃಷ್ಣ ಅವರಿಗೆ ಆಹ್ವಾನ ಇರಲಿಲ್ಲ. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಶಾ ಭಾಗಿಯಾಗಿದ್ದರೂ ಕೃಷ್ಣ ಅವರಿಗೆ ಕರೆ ಇರಲಿಲ್ಲ.
ಮಂಡ್ಯಕ್ಕೆ ಅಮಿತ್ ಶಾ ಬಂದು ಹೋದ ಕೇವಲ ನಾಲ್ಕೇ ದಿನದಲ್ಲಿ ಕೃಷ್ಣ ಅವರು ಬಿಜೆಪಿಗೆ ರಾಜೀನಾಮೆ ಕೊಟ್ಟಿರುವುದು ವಿಶೇಷ.
ಕೃಷ್ಣ ಅವರ ಜನ್ಮದಿನದಂದು ಕೃಷ್ಣ ಅವರ ಮನೆಗೆ ತೆರಳಿ ಹೂಗುಚ್ಛ ಕೊಟ್ಟು ಶುಭಾಶಯ ಹೇಳಿದ್ದು ಬಿಟ್ಟರೆ ಬಿಜೆಪಿ ನಾಯಕರೊಂದಿಗೆ ಪಕ್ಷದ ಸಮಾವೇಶ, ಸಮಾರಂಭ, ಕಾರ್ಯಕ್ರಮಗಳಲ್ಲಿ ಕೃಷ್ಣ ಅವರು ಕಾಣಿಸಿಕೊಳ್ಳಲೇ ಇಲ್ಲ. ಪತ್ರ ವ್ಯವಹಾರಕ್ಕಷ್ಟೇ ಕೃಷ್ಣ ಅವರ ರಾಜಕೀಯ ಚಟುವಟಿಕೆ ಬಿಜೆಪಿಯಲ್ಲಿ ಸೀಮಿತವಾಗಿತ್ತು.
ಈ ಮೂಲಕ ಮುತ್ಸದಿ ರಾಜಕಾರಣಿ ಎಂದು ಕರೆಸಿಕೊಂಡಿದ್ದ ಕೃಷ್ಣ ಅಕ್ಷರಶಃ ಬಿಜೆಪಿಯಲ್ಲಿ ಮೂಲೆಗುಂಪಾಗಿದ್ದರು.
ವಯಸ್ಸಿನ ಕಾರಣ:
ಎಸ್ ಎಂ ಕೃಷ್ಣ ಅವರಿಗೆ ಈಗ 90 ವರ್ಷ ವಯಸ್ಸು. ವಯಸ್ಸಿನ ಅರಿವಿರಬೇಕು. 90ನೇ ವರ್ಷದಲ್ಲಿ ನಾವು 50 ವರ್ಷದವರ ಥರ ನಟನೆ ಮಾಡಲು ಸಾಧ್ಯವಿಲ್ಲ. ಆ ವಯಸ್ಸಿನ ಕಾರಣದಿಂದ ನಾನು ಈ ಸಾರ್ವಜನಿಕ ಜೀವನದಿಂದ ಹಿಂಜರಿಯುತ್ತಿದ್ದೇನೆ
ಎಂದಿರುವ ಎಸ್ ಎಂ ಕೃಷ್ಣ ಅವರು ಬಿಜೆಪಿ ತಮ್ಮನ್ನು ಕಡೆಗಣಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಂದಹಾಗೆ ಎಸ್ ಎಂ ಕೃಷ್ಣ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರುವಾಗ ಅವರ ವಯಸ್ಸು 85 ಆಗಿತ್ತು. 81ನೇ ವಯಸ್ಸಿನಲ್ಲೂ ಕೃಷ್ಣ ಅವರಿಗೆ ಕಾಂಗ್ರೆಸ್ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ವಿದೇಶಾಂಗ ಖಾತೆಯಂತ ಪ್ರಮುಖ ಹುದ್ದೆಯನ್ನೇ ನೀಡಿತ್ತು.
ಆದರೆ 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ಬಳಿಕ ಕೃಷ್ಣ ಬಿಜೆಪಿ ಮನೆ ಸೇರಿದ್ದರು.
ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಹಿನ್ನಡೆ:
ಮೇಲ್ನೋಟಕ್ಕೆ ಎಸ್ ಎಂ ಕೃಷ್ಣ ಅವರು ತಾವು ವಯಸ್ಸಿನ ಕಾರಣದಿಂದ ಬಿಜೆಪಿಗೆ ರಾಜೀನಾಮೆ ಕೊಟ್ಟಿರುವುದಾಗಿ ಹೇಳಿದ್ದರೂ ಐದು ವರ್ಷ ಮುಖ್ಯಮಂತ್ರಿಯಾಗಿದ್ದ, ಕೇಂದ್ರದಲ್ಲಿ ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದ ತಮ್ಮನ್ನು ಬಿಜೆಪಿ ಮೂಲೆಗುಂಪು ಮಾಡಿದ್ದರಿಂದ ಕೃಷ್ಣ ಅವರು ಅಸಮಾಧಾನಗೊಂಡಿದ್ದರು.
ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹೊತ್ತಲ್ಲಿ ಕೃಷ್ಣ ಅವರು ಬಿಜೆಪಿ ಬಿಟ್ಟಿರುವುದು ಆ ಭಾಗದಲ್ಲಿ ಕೃಷ್ಣ ನಿಷ್ಠ ಮತಗಳನ್ನು ಬಿಜೆಪಿಯಿಂದ ದೂರ ಮಾಡುವುದಕ್ಕೆ ಕಾರಣವಾಗಬಹುದು.
ಒಕ್ಕಲಿಗ ಮತ ಅಧಿಕ ಇರುವ ಹಳೆ ಮೈಸೂರಲ್ಲಿ ಬಿಜೆಪಿ ಕೃಷ್ಣ ಅವರನ್ನೇ 2018ರ ಚುನಾವಣೆಯಲ್ಲಿ ಮತ ನಾಣ್ಯವಾಗಿ ಬಳಸಿತ್ತು.
ನಾಮಕರಣ ಜಟಾಪಟಿ:
ಕೆಲ ದಿನಗಳಿಂದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಮತ್ತು ಕೃಷ್ಣ ಅವರ ನಡುವೆ ಹೆದ್ದಾರಿಗೆ ನಾಮಕರಣ ಮಾಡುವ ಸಂಬಂಧ ಜಟಾಪಟಿ ಆಗಿತ್ತು.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಗೆ ಕಾವೇರಿ ಹೆಸರಿಡುವಂತೆ ಪ್ರತಾಪ್ ಸಿಂಹ ಅವರು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದರು.
ಆದರೆ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಎಕ್ಸ್ಪ್ರೆಸ್ ವೇಗೆ ಹೆಸರಿಡುವಂತೆ ಎಸ್ ಎಂ ಕೃಷ್ಣ ಅವರು ಗಡ್ಕರಿ ಅವರಿಗೆ ಪತ್ರ ಬರೆದಿದ್ದರು.
ADVERTISEMENT