ಜಾರ್ಖಂಡ್ನಲ್ಲಿರುವ ಜೈನ ಧರ್ಮಿಯರ ಪುಣ್ಯ ಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸುವ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸೂಚಿಸಿದೆ.
ಈ ಮೂಲಕ ಕಳೆದ ಹಲವು ದಿನಗಳಿಂದ ಜೈನ ಧರ್ಮಿಯರು ನಡೆಸುತ್ತಿದ್ದ ಪ್ರತಿಭಟನೆಗೆ ಜಯ ಸಿಕ್ಕಿದೆ.
ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸುವ ಸಂಬಂಧ ಆಗಸ್ಟ್ 2, 2019ರಂದು ಕೇಂದ್ರ ಸರ್ಕಾರ ತಾನು ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆಯುವ ಸಂಬಂಧ ಇವತ್ತಿನ ಹೊಸ ಆದೇಶದಲ್ಲಿ ಹೇಳಿದೆ.
ಪಾರ್ಶ್ವನಾಥ ವನ್ಯಜೀವಿ ಸಂರಕ್ಷಿತಾರಣ್ಯ ಸಂರಕ್ಷಿಸುವ ಸಲುವಾಗಿ ಮತ್ತು ಸಮ್ಮೇದ ಶಿಖರ್ಜಿಯ ಪಾವಿತ್ರ್ಯತೆಯನ್ನು ಕಾಪಾಡುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಆದೇಶ ಹೊರಡಿಸಿದೆ.
ಸಮ್ಮೇದ ಶಿಖರ್ಜಿ ಪರ್ವತ ಕ್ಷೇತ್ರ ವಿಶ್ವದ ಪುಣ್ಯ ಕ್ಷೇತ್ರ ಮತ್ತು ಜೈನರಿಗೆ ತೀರ್ಥ ಸ್ಥಾನವಾಗಿದ್ದು, ಸರ್ಕಾರ ಇದರ ಪಾವಿತ್ರ್ಯತೆ ಮತ್ತು ಜೈನ ಧರ್ಮಿಯರಿಗೆ ಮಹತ್ವವನ್ನು ಮನಗಂಡು ಅದನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚಿಸುತ್ತಿದ್ದೇವೆ ಎಂದು ಸರ್ಕಾರ ತನ್ನ ಹೊಸ ಆದೇಶದಲ್ಲಿ ಹೇಳಿದೆ.
ADVERTISEMENT
ಸಮ್ಮೇದ ಶಿಖರ್ಜಿಯಲ್ಲಿರುವ ಪಾರ್ಶ್ವನಾಥ ಗಿರಿ ಬಫರ್ ಝೋನ್ನ್ನು ಸಂರಕ್ಷಿಸುವ ಸಲುವಾಗಿ ಇತರೆ ಎಲ್ಲ ರೀತಿಯ ಪ್ರವಾಸೋದ್ಯಮ ಮತ್ತು ಪ್ರಾಕೃತಿಕ ಪ್ರವಾಸೋದ್ಯಮ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದ ಇನ್ಸ್ಪೆಕ್ಟರ್ ಜನರಲ್ ರೋಹಿತ್ ತಿವಾರಿ ಅವರು ಜಾರ್ಖಂಡ್ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ.
ಪರಿಸರ ಸೂಕ್ಷ್ಮ ವಲಯ ಅಧಿಸೂಚನೆಯ ಕಲಂ 3ರ ಪ್ರಕಾರ ಈ ಹಿಂದೆ ಚಟುವಟಿಕೆಗಳಿಗೆ ನೀಡಲಾಗಿರುವ ಅನುಮತಿಗೆ ಕೇಂದ್ರ ಸರ್ಕಾರ ತಡೆ ನೀಡಿದೆ.
ಪಾರ್ಶ್ವನಾಥ ವನ್ಯಜೀವಿ ಸಂರಕ್ಷಿತಾರಣ್ಯ ಪ್ರದೇಶವನ್ನು ಸಂರಕ್ಷಿಸುವ ಸಲುವಾಗಿ ಈ ಪ್ರದೇಶದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಸಮ್ಮೇದ ಶಿಖರ್ಜಿಯ ಪಾವಿತ್ರ್ಯವನ್ನು ಕಾಪಾಡುವ ಸಲುವಾಗಿ ಧ್ವನಿವರ್ಧಕಗಳ ಬಳಕೆಗೂ ನಿಷೇಧ ಹೇರಲಾಗಿದೆ.
ಪಾರ್ಶ್ವನಾಥ ಬೆಟ್ಟದಲ್ಲಿ ಕ್ಯಾಂಪಿಂಗ್ ಮತ್ತು ಟ್ರೆಕ್ಕಿಂಗ್ಗೂ ನಿರ್ಬಂಧ ಹೇರಲಾಗಿದೆ.
ಸಮ್ಮೇದ ಶಿಖರ್ಜಿಯಲ್ಲಿರುವ ಧಾರ್ಮಿಕ ಮತ್ತು ಐತಿಹಾಸಿಕವಾಗಿ ಮಹತ್ವದ ಪಡೆದಿರುವ ಸ್ಮಾರಕಗಳು, ಗುಹೆಗಳು, ಬಂಡೆಗಳು ಮತ್ತು ತೀರ್ಥ ಕ್ಷೇತ್ರಗಳನ್ನು ವಿರೂಪಗೊಳಿಸದಂತೆ ಮತ್ತು ಈ ಸ್ಥಳಗಳ ಪಾಕೃತಿಕ ಹಿನ್ನೆಲೆಗೆ ಭಂಗ ತರದಂತೆ ಕ್ರಮಕೈಗೊಳ್ಳುವಂತೆ ಜಾರ್ಖಂಡ್ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸೂಚಿಸಿದೆ.
ADVERTISEMENT