Appu – ಗಂಧದ ಗುಡಿಯಲ್ಲಿ ಪವರ್ ಸ್ಟಾರ್ ಪೂಜೆ.. ಸಖತ್ ಆಗಿದೆ ಟ್ರೈಲರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneet Rajkumar)ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಹೆಸರು ಹೇಳಿದರೆ ಸಾಕು ಇಡೀ ಕರುನಾಡು ಆರಾಧಿಸಲು ನಿಲ್ಲುತ್ತದೆ. ಅವರೆಡೆಗಿನ ಅಭಿಮಾನ ಅವರಿಲ್ಲದ ಸಂದರ್ಭದಲ್ಲಿ ನೂರ್ಮಡಿಆಗಿದೆ. ಹಬ್ಬ, ಜಾತ್ರೆ.. ಖುಷಿ ಏನೇ ಇರಲಿ ಅಲ್ಲಿ ಅಪ್ಪು (Appu)ಫೋಟೋ ರಾರಾಜಿಸಿರುತ್ತದೆ. ಇದೀಗ ಅಪ್ಪು ಅಭಿಮಾನಿಗಳಿಗೆ ಪಿ ಆರ್ ಕೆ (PRK)ಸಂಸ್ಥೆ ಗುಡ್ ನ್ಯೂಸ್ ನೀಡಿದೆ.

ಅಪ್ಪು ನಟನೆಯ ಕೊನೆಯ ಚಿತ್ರ ಗಂಧದಗುಡಿಯ ಟ್ರೈಲರ್ (Gandhadagudi Trailer release) ಇಂದು ಬೆಳಗ್ಗೆ 10 ಗಂಟೆ 19 ನಿಮಿಷ 10 ಸೆಕೆಂಡ್ ಪಿ ಆರ್ ಕೆ ಸ್ಟುಡಿಯೋಸ್ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ಬೆಂಗಳೂರಿನ ನರ್ತಕಿ ಥೀಯೇಟರ್ ನಲ್ಲಿ (Nartaki theatre)ಅಭಿಮಾನಿಗಳಿಗಾಗಿ ಗಂಧದ ಗುಡಿ ಟ್ರೈಲರ್ ಲಾಂಚ್ ಮಾಡಲಾಗಿದೆ.

ಗಂಧದಗುಡಿ ಟ್ರೈಲರ್ ನಲ್ಲಿ ಚಾಮರಾಜನಗರ ಜಿಲ್ಲೆಯ ದಟ್ಟ ಕಾನನದ ಜಗತ್ತನ್ನು ಪುನೀತ್ ರಾಜಕುಮಾರ್ (Punit Rajkumar), ನಿರ್ದೇಶಕ ವೈಲ್ಡ್ ಲೈಫ್ ಫೋಟೋಗ್ರಾಫರ್ ಅಮೋಘ ವರ್ಷ (Director AmoghaVarsha)ಜೊತೆಗೂಡಿ ಪರಿಚಯಿಸುವ ಕೆಲಸ ಮಾಡಿದ್ದಾರೆ. ಒಂದೊಂದು ದೃಶ್ಯವೂ ವಾವ್ ಅನ್ನುವಂತಿದೆ.  ಇದರಲ್ಲಿ ಪುನೀತ್ ರಾಜಕುಮಾರ್ ನಟಿಸಿಲ್ಲ.. ಜೀವಿಸಿದ್ದಾರೆ.

ದಟ್ಟಾರಣ್ಯದಲ್ಲಿ ಮಾಡುವ ಟ್ರೇಕ್ಕಿಂಗ್(Trekking ), ನೀರಿನಾಳದಲ್ಲಿ ಮಾಡುವ ಸ್ಕೂಬಾ ಡೈವಿಂಗ್(Scooba diving), ಪ್ರಾಣಿ ಪ್ರಪಂಚವನ್ನು (WildLife)ತೋರಿಸಿರುವ ಪರಿ ಅನನ್ಯ.. ಫೋಟೋಗ್ರಾಫರ್ ಕೈಚಳಕ ಮನಸೊರೆಗೊಳ್ಳದೇ ಬಿಡುವುದಿಲ್ಲ.

ಮುಗ್ಧತೆಯೇ ಮೈವೆತ್ತ ಪುನೀತ್ ರಾಜಕುಮಾರ್ ಒಂದು ಹಂತದಲ್ಲಿ ನಮ್ಮೂರಿನ ಪಕ್ಕದಲ್ಲಿ ಇರೋ ಇಷ್ಟು ಅದ್ಭುತವಾದ ಜಗತ್ತನ್ನು ನೋಡಿಯೇ ಇಲ್ವಲ್ಲ ಅಂತಾರೆ.

ತಾನು ಹುಟ್ಟಿ ಬೆಳೆದ ಗಾಜಾನೂರಿನ ಮನೆಯನ್ನು ಟ್ರೈಲರ್ ನಲ್ಲಿ ಪುನೀತ್ ರಾಜಕುಮಾರ್ ಪರಿಚಯಿಸಿದ್ದಾರೆ. ಈ ವೇಳೆ ಅಪ್ಪಾಜಿ ರಾಜಕುಮಾರ್ ಜೊತೆ ಬಾಲ ಅಪ್ಪು ಫೋಟೋ ಕಣ್ಮುಂದೆ ಬಂದು ಹೋಗುತ್ತವೆ. ನಮಗೆ ಅರಿವಿಲ್ಲದೆಯೇ ಕಣ್ಣುಗಳು ಒದ್ದೆ ಆಗುತ್ತವೆ.

ಅಕ್ಟೋಬರ್ 29ಕ್ಕೆ ಅಪ್ಪು ಇಲ್ಲವಾಗಿ ವರ್ಷವಾಗುತ್ತದೆ. ಅದಕ್ಕೂ ಒಂದಿನ ಮೊದಲು ಅಂದರೇ ಅಕ್ಟೋಬರ್ 28ಕ್ಕೆ ಗಂಧದಗುಡಿ ಸಿನಿಮಾ ಥೀಯೇಟರ್ ಗಳಲ್ಲಿ ರಿಲೀಸ್ ಆಗಲಿದೆ. ಅಭಿಮಾನಿಗಳು ಮಾತ್ರವಲ್ಲ ಇಡೀ ಕರುನಾಡು ಅಪ್ಪು ಜಪದಲ್ಲಿ ಮಿಂದೇಳುವುದು ಪಕ್ಕ.