ವಿಶೇಷ ವರದಿ
ಸಮಾಜವಾದಿಯಲ್ಲಿ ತಮ್ಮ ರಾಜಕೀಯ ಜೀವನವನ್ನು ಶುರು ಮಾಡಿದ ಸಿದ್ದರಾಮಯ್ಯ ಅವರ ರಾಜಕೀಯ ಜೀವಿತಾವಧಿಯಲ್ಲಿ ಅನೇಕ ತಿರುವುಗಳು ಘಟಿಸಿವೆ.
ಒಂದೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಪ್ರತ್ಯರ್ಥಿಯಾಗಿದ್ದರು. ನಂತರ ಅದೇ ಪಕ್ಷವನ್ನು ಸೇರಿ ಮುಖ್ಯಮಂತ್ರಿ ಕೂಡ ಆದರು. ಮತ್ತೊಮ್ಮೆ ಅದೇ ಹುದ್ದೆ ಸಿದ್ದರಾಮಯ್ಯರನ್ನು ವರಿಸಿದೆ.
76 ವರ್ಷದ ಸಿದ್ದರಾಮಯ್ಯಗೆ ರಾಜಕೀಯದಲ್ಲಿ 45 ವರ್ಷದಷ್ಟು ಸುದೀರ್ಘ ರಾಜಕೀಯ ಅನುಭವ ಇದೆ. ಕರ್ನಾಟಕದಲ್ಲಿ ದೇವರಾಜು ಅರಸು ಬಳಿಕ ಐದು ವರ್ಷ ಆಡಳಿತ ನಡೆಸಿದ ಏಕೈಕ ರಾಜಕಾರಣಿ ಸಿದ್ದರಾಮಯ್ಯ.
ಶಾಲೆಗೆ ಹೋಗದಿದ್ದರೂ ಕಾನೂನು ಪದವಿ..
1948ರ ಆಗಸ್ಟ್ 12ರಂದು ಮೈಸೂರು ಜಿಲ್ಲೆಯ ಸಿದ್ದರಾಮನ ಹುಂಡಿಯಲ್ಲಿ ಕೃಷಿಕರ ಕುಟುಂಬದಲ್ಲಿ ಸಿದ್ದರಾಮಯ್ಯ ಜನಿಸಿದರು.
10 ವರ್ಷದವರೆಗೂ ಸಿದ್ದರಾಮಯ್ಯ ಶಾಲೆಯ ಮೆಟ್ಟಿಲನ್ನು ತುಳಿಯಲಿಲ್ಲ. ಹೊಲದಲ್ಲಿ ಅಪ್ಪ-ಅಣ್ಣಂದಿರಿಗೆ ನರವಾಗುತ್ತಾ ದನ ಕಾಯುತ್ತಿದ್ದರಂತೆ.. ಆ ನಂತರ ನೇರವಾಗಿ ಐದನೇ ತರಗತಿಗೆ ಪ್ರವೇಶ ಪಡೆದ ಸಿದ್ದರಾಮಯ್ಯ ಮುಂದೆ ಕಾನೂನು ಪದವಿ ಕೂಡ ಪಡೆದರು.
ಸಿದ್ದರಾಮಯ್ಯ ಅವರು ಓಬಿಸಿ ವರ್ಗಕ್ಕೆ ಸೇರಿದ ಕುರುಬ ಸಮುದಾಯದವರು. ಕರ್ನಾಟಕದಲ್ಲಿ ಈ ಸಮುದಾಯದ ಜನಸಂಖ್ಯೆ ಪ್ರಮಾಣ ಶೇಕಡಾ 9ರಷ್ಟಿದೆ. ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದಲ್ಲಿ ಸಿದ್ದರಾಮಯ್ಯ ಪ್ರಶ್ನಾತೀತ ನಾಯಕರು. ಈ ಸಮುದಾಯಗಳ ಮೇಲೆ ಸಿದ್ದರಾಮಯ್ಯ ಹಿಡಿತ ಹೊಂದಿದ್ದಾರೆ. ಇದು ಈ ಬಾರಿಯ ಚುನಾವಣೆಯಲ್ಲೂ ಪ್ರತಿಫಲಿಸಿದೆ.
ಸಮಾಜವಾದಿ ಸಿದ್ದಾಂತ
ಸಿದ್ದರಾಮಯ್ಯ ಅವರದ್ದು ಸಮಾಜವಾದಿ ಸಿದ್ದಾಂತ. ರಾಮಮನೋಹರ್ ಲೋಹಿಯಾ ಅವರ ಪ್ರಭಾವಳಿ ಸಿದ್ದರಾಮಯ್ಯ ಮೇಲಿದೆ.
1978ರಲ್ಲಿ ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಸಿದ್ದರಾಮಯ್ಯಗೆ ರೈತ ನಾಯಕ ಎಂಡಿ ನಂಜುಂಡಸ್ವಾಮಿ ಪರಿಚಯ ಆಗುತ್ತಾರೆ. ಅವರ ಒತ್ತಾಸೆಯಿಂದಲೇ ಸಿದ್ದರಾಮಯ್ಯ ರಾಜಕೀಯ ಪ್ರವೇಶ ಮಾಡುತ್ತಾರೆ.
1983ರಲ್ಲಿ ಮೊದಲ ಬಾರಿಗೆ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಚುನಾಯಿತರಾಗುತ್ತಾರೆ. ಈ ಗೆಲುವಿನೊಂದಿಗೆ ಹಳೆ ಮೈಸೂರು ಭಾಗದಲ್ಲಿ ಮೊದಲ ಬಾರಿಗೆ ಸಿದ್ದರಾಮಯ್ಯ ಗುರುತಿಸಿಕೊಂಡರು.
ನಂತರ ಜನತಾ ಪಾರ್ಟಿ ಸೇರಿದರು. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದರು.
1985ರ ಮಧ್ಯಂತರ ಚುನಾವಣೆಯಲ್ಲಿ ಜನತಾಪಕ್ಷ 139 ಸೀಟ್ ಗೆದ್ದು ಅಧಿಕಾರಕ್ಕೆ ಏರಿತು. ಚಾಮುಂಡೇಶ್ವರಿ ಕ್ಷೇತ್ರದಿಂದ ಎರಡನೇ ಬಾರಿಗೆ ಗೆದ್ದ ಸಿದ್ದರಾಮಯ್ಯ, ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಪಶುಸಂಗೋಪನೆ ಸಚಿವರಾದರು.
1994ರಲ್ಲಿ ಹೆಚ್ಡಿ ದೇವೇಗೌಡ ನಾಯಕತ್ವದಲ್ಲಿ ಜನತಾ ಪಕ್ಷ ಸರ್ಕಾರ ರಚಿಸಿತು. ಅಂದು ಆರ್ಥಿಕ ಮಂತ್ರಿಯಾಗಿದ್ದು ಸಿದ್ದರಾಮಯ್ಯ.
1996ರಲ್ಲಿ ಜೆಹೆಚ್ ಪಟೇಲ್ ಮುಖ್ಯಮಂತ್ರಿಯಾದಾಗ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿ ಪ್ರಮೋಷನ್ ಪಡೆದರು.
ಕಾಂಗ್ರೆಸ್ಗೆ ಸೇರ್ಪಡೆ.. ಮುಖ್ಯಮಂತ್ರಿ ಪದವಿ..
ದೇವೇಗೌಡರ ನಾಯಕತ್ವದಲ್ಲಿ ಒಂದು ವರ್ಗ, ಜನತಾ ಪಕ್ಷದಿಂದ ಬೇರ್ಪಟ್ಟು ಜೆಡಿಎಸ್ ಪಕ್ಷ ಉಗಮಕ್ಕೆ ಕಾರಣವಾಗುತ್ತದೆ. ಅಮದು ಸಿದ್ದರಾಮಯ್ಯ ಕೂಡ ದೇವೇಗೌಡರನ್ನು ಅನುಸರಿಸುತ್ತಾರೆ.
2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸಿದಾಗ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗುತ್ತಾರೆ.
ಕಾಲ ನಂತರದಲ್ಲಿ ದೇವೇಗೌಡರು ಮತ್ತು ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯಗಳು ಉಂಟಾದವು. ಕುಮಾರಸ್ವಾಮಿಯವರ ರಾಜಕೀಯ ಏಳಿಗೆಗಾಗಿ ಪಕ್ಷದ ನಂಬರ್ 2 ನಾಯಕರಾಗಿದ್ದ ಸಿದ್ದರಾಮಯ್ಯರನ್ನು ಮೂಲೆಗುಂಪು ಮಾಡಲು ದೇವೇಗೌಡರು ಪ್ರಯತ್ನಿಸಿದರು ಎಂಬ ಆರೋಪವಿದೆ.
ಈ ಭಿನ್ನಾಭಿಪ್ರಾಯಗಳು ತಾರಕಕ್ಕೆ ಏರಿ 2005ರಲ್ಲಿ ಜೆಡಿಎಸ್ನಿಂದ ಹೊರಹಾಕಲ್ಪಟ್ಟ ಸಿದ್ದರಾಮಯ್ಯ ಕಾಂಗ್ರೆಸ್ ಸೇರುತ್ತಾರೆ. 2006ರ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಗೆದ್ದು ಬೀಗುತ್ತಾರೆ.
2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲುವಿನ ತೀರಕ್ಕೆ ಮುನ್ನಡೆಸಿದ ಸಿದ್ದರಾಮಯ್ಯ ಮುಖ್ಯಮಂತ್ರಿ ಕೂಡ ಆಗುತ್ತಾರೆ. ಸರಿಯಾಗಿ ಹತ್ತು ವರ್ಷಗಳ ನಂತರ ಸಿದ್ದರಾಮಯ್ಯಗೆ ಮತ್ತೆ ಮುಖ್ಯಮಂತ್ರಿ ಆಗುವ ಸುಯೋಗ ಕೂಡಿಬಂದಿದೆ.
ನಾಸ್ತಿಕನೆಂಬ ಮುದ್ರೆ..
ಸಿದ್ದರಾಮಯ್ಯ ನಾಸ್ತಿಕ.. ದೇವಾಲಯಗಳಿಗೆ ಹೋಗಲ್ಲ ಎಂಬ ಮಾತಿತ್ತು. ಅವರ ವೇಷಭೂಷಣ ನಡೆ ನುಡಿ ಕೂಡ ಹಾಗೆಯೇ ಇರುತ್ತವೆ. ಅವರ ಆಹಾರ್ಯದಲ್ಲಿ ಧರ್ಮಕ್ಕೆ ಸಂಬಂಧಿಸಿದ ಯಾವುದೇ ಕುರುಹುಗಳು ಕಾಣುವುದಿಲ್ಲ. ಯಾವಾಗಲೂ ಶ್ವೇತವರ್ಣದ ಪಂಚೆ, ಜುಬ್ಬಾ, ಬಿಳಿ ಶಲ್ಯದಲ್ಲಿಯೇ ಸಿದ್ದರಾಮಯ್ಯ ರಾರಾಜಿಸುತ್ತಾರೆ.
ಎಲ್ಲರು ನನ್ನನ್ನು ನಾಸ್ತಿಕ ಎಂದು ಭಾವಿಸುತ್ತಾರೆ. ಆದರೆ, ಅದು ನಿಜವಲ್ಲ.ನನಗೂ ದೈವ ಭಕ್ತಿ ಇದೆ. ನನ್ನಲ್ಲೂ ದೈವ ಚಿಂತನೆ ಇದೆ. ಆದರೆ, ನಾನು ಮೂಢನಂಬಿಕೆಗಳಿಗೆ ದೂರ. ಯಾವುದನ್ನೇ ಆಗಲಿ ಸೈನ್ಸ್ ಆಯಾಮದಲ್ಲೇ ಪರಿಶೀಲಿಸುತ್ತೇನೆ ಎಂದು ಹಿಂದೊಮ್ಮೆ ಸಿದ್ದರಾಮಯ್ಯ ಅವರೇ ಹೇಳಿಕೊಂಡಿದ್ದಾರೆ.