ತನ್ನ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಿ ಅಂತ ಕಾಂಗ್ರೆಸ್ ಗೆ ಕುಟುಕುತ್ತಿದ್ದ ಎನ್ಡಿಎ ಮೈತ್ರಿಕೂಟಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಡೆಗೂ ಸ್ಪಷ್ಟನೆ ನೀಡಿದ್ದಾರೆ.
ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನವೇ ತನ್ನ ಮುಂದಿನ ಅವಧಿಯ ಪ್ರಧಾನಿ ಅಭ್ಯರ್ಥಿಯನ್ನಾಗಿ ಮತ್ತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಘೋಷಿಸಿರುವ ಎನ್ ಡಿಎ ಮೈತ್ರಿಕೂಟದ ಬಾಯಿ ಮುಚ್ಚಿಸಿದ್ದಾರೆ ಇಂಡಿಯಾ ಮೈತ್ರಿಕೂಟದ ನಾಯಕ ಖರ್ಗೆ.
ಇಂಡಿಯಾ ಮೈತ್ರಿಕೂಟದಲ್ಲಿ ಸಾಕಷ್ಟು ಪ್ರಮುಖ ರಾಜಕೀಯ ಪಕ್ಷಗಳು ಪಾಲುದಾರರಾಗಿರೋದ್ರಿಂದಾಗಿ ಈಗಲೇ ಪ್ರಧಾನಿ ಅಭ್ಯರ್ಥಿ ಬಗ್ಗೆ ಯಾವ ನಿರ್ಣಯವನ್ನು ಕೈಗೊಳ್ಳಲಾಗಿಲ್ಲ. ಇನ್ನು ಇದನ್ನೇ ಪ್ರತಿಪಕ್ಷಗಳು ಟೀಕಾತ್ಮಕವಾಗಿ ವಿಶ್ಲೇಷಣೆ ಮಾಡ್ತಿದ್ವು. ಕಾಂಗ್ರೆಸ್ ಗೆ ಆಗಲಿ ಅಥವಾ ಇಂಡಿಯಾ ಮೈತ್ರಿಕೂಟದಲ್ಲಾಗಲೀ ಪ್ರಧಾನಿ ಅಭ್ಯರ್ಥಿಯಾಗೋದಕ್ಕೆ ಅರ್ಹ ಅಭ್ಯರ್ಥಿಯೇ ಇಲ್ಲ ಅಂತ ಪದೇ ಪದೇ ಕೆಣಕುತ್ತಿರುವ ಸಂದರ್ಭದಲ್ಲಿ ಖರ್ಗೆ ಈ ವಿಚಾರವಾಗಿ ಒಂದು ಸ್ಪಷ್ಟನೆ ನೀಡಿದ್ದಾರೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಬಣ ಗೆದ್ದ ಬಳಿಕವೇ ಪ್ರಧಾನಿ ಹೆಸರನ್ನು ನಿರ್ಧರಿಸುತ್ತೇವೆ ಅಂತ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಹರಿಯಾಣದಲ್ಲಿ 6ನೇ ಹಂತದಲ್ಲಿ, ಪಂಜಾಬ್ ಮತ್ತು ಚಂಡೀಗಢದಲ್ಲಿ ಅಂತಿಮ ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಮತದಾನಕ್ಕೂ ಮುನ್ನ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಂಡೀಗಢದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಒಂದು ವೇಳೆ ಇಂಡಿಯಾ ಬಣವು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಹುಮತ ಪಡೆಯುವಲ್ಲಿ ಯಶಸ್ವಿಯಾದರೆ, ನಾವೆಲ್ಲರೂ ಕುಳಿತು, ಚರ್ಚೆ ಮಾಡಿ ಪ್ರಧಾನಿ ಹೆಸರನ್ನು ಅಂತಿಮಗೊಳಿಸುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.
ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಗೆದ್ದರೆ ಮೂರನೇ ಬಾರಿ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗುವುದು ಖಚಿತ. ಒಂದು ವೇಳೆ ಇಂಡಿಯಾ ಮೈತ್ರಿಕೂಟ ಗೆದ್ರೆ ಪ್ರಧಾನಿ ಹುದ್ದೆಗೆ ಮಲ್ಲಿಕಾರ್ಜುನ ಖರ್ಗೆಯವರೇ ಮೊದಲ ಆಯ್ಕೆ ಆಗಬಹುದು ಎಂದು ಇಂಡಿಯಾ ಮೈತ್ರಿಕೂಟದಲ್ಲೇ ಕೇಳಿಬರುತ್ತಿರುವ ಮಾತು.