ಇಂಗ್ಲೆಂಡ್: ಬ್ರಿಟನ್’ನ ನೂತನ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆಯಾಗಿದ್ದಾರೆ.
ಮಾಜಿ ಹಣಕಾಸು ಸಚಿವರಾಗಿದ್ದ ರಿಷಿ ಸುನಕ್ ಅವರಿಗೆ 193 ಸಂಸದರ ಬೆಂಬಲ ಲಭಿಸಿದ್ದು, ಪ್ರತಿಸ್ಪರ್ಧಿ ಪೆನ್ನಿ ಮೊರ್ಡಾಂಟ್ ಅವರಿಗೆ 26 ಸಂಸದರ ಬೆಂಬಲ ದೊರೆತಿದ್ದವು.
ಬ್ರಿಟನ್ ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಕನ್ಸರ್ವೇಟಿವ್ ಪಕ್ಷದ ಮುಖಂಡ ರಿಷಿ ಸುನಕ್ ಭಾರತದ ಮೊದಲ ಸಂಜಾತ ಹಾಗೂ ಯುಕೆಯ ಮೊದಲ ಹಿಂದೂ ಪ್ರಧಾನಿಯಾಗಿದ್ದಾರೆ.
ಲಿಜ್ ಟ್ರಸ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸುನಕ್ ಅದೃಷ್ಟ ಖುಲಾಯಿಸಿತು. 45 ದಿನಗಳ ಆಳ್ವಿಕೆ ನಂತರ ಲಿಜ್ ಟ್ರಸ್ ಗುರುವಾರ ರಾಜೀನಾಮೆ ನೀಡಿದ ನಂತರ ರಿಷಿ ಸುನಕ್ ಮತ್ತು ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಯುಕೆ ಪ್ರಧಾನಿ ರೇಸ್ ನಲ್ಲಿದ್ದರು. ಆದರೆ, ಅಗತ್ಯ ಬೆಂಬಲ ಹೊಂದಿದ್ದರು ಕೂಡಾ ಬೋರಿಸ್ ಜಾನ್ಸನ್ ಪ್ರಧಾನಿ ಹುದ್ದೆ ರೇಸ್ ನಿಂದ ಹಿಂದೆ ಸರಿದಿದ್ದರಿಂದ ಸುನಕ್ ವಿಜಯ ಪತಾಕೆ ಹಾರಿಸಿದ್ದಾರೆ.
ಬ್ರಿಟನ್’ನಲ್ಲಿ ತಲೆದೋರಿದ್ದ ರಾಜಕೀಯ ಬಿಕ್ಕಟ್ಟಿನ ಮಧ್ಯೆ 45 ದಿನಗಳ ಹಿಂದೆ ಪ್ರಧಾನಿ ಹುದ್ದೆಗೇರಿದ ಲಿಝ್ ಟ್ರಸ್ ಅವರು ದಿಢೀರ್ ಬೆಳವಣಿಗೆಯಲ್ಲಿ ಪ್ರಧಾನಿ ಹುದ್ದೆಗೆ ಕಳೆದ ವಾರ ರಾಜೀನಾಮೆ ಸಲ್ಲಿಸಿದ್ದರು.
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರ ಅಳಿಯ ಭಾರತೀಯ ಮೂಲದ ರಿಷಿ ಸುನಕ್ ದೇಶದ ಆರ್ಥಿಕತೆಯನ್ನು ಸರಿದಾರಿಗೆ ತರುವ ಭರವಸೆ ನೀಡಿದ್ದಾರೆ.