ಕಾಂತಾರ ಸಿನಿಮಾ ನೋಡಿ ನಟ ಜಗ್ಗೇಶ್ ಹೀಗೆಲ್ಲಾ ಹೇಳಿದ್ರಾ?

ಇತ್ತೀಚಿಗೆ ಸದ್ದು ಮಾಡುತ್ತಿರುವ ಸಿನಿಮಾ ಕಾಂತಾರ. ಮಕ್ಕಳಿಂದ ಹಿಡಿದು ಮುದುಕರ ವರೆಗೂ ಈ ಸಿನಿಮಾ ನೋಡಲು ಜನ ಸಿನಿಮಾ ಮಂದಿರದತ್ತ ಮುಗಿಬೀಳುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯ ಜನರೂ ಕೂಡಾ ಕಾಂತಾರ ಸಿನಿಮಾನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ಸಿನಿಮಾ ನೋಡಿದ ನಟ ಜಗ್ಗೇಶ್ ತಮ್ಮ ಮನಸಿನ ಮಾತನ್ನು ಫೇಸ್‌ಬುಕ್‌ ನಲ್ಲಿ ಬರೆದು ಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಒಳಿತು ಬಯಸಿ ಬದುಕುತ್ತಿರುವ ಜೀವ ನನ್ನದು ಕಾರಣ ನನ್ನ ಬದುಕಿಗೆ ಸಕಲವು ನೀಡಿದ ನನ್ನ ತಾಯಿ ಕನ್ನಡ ಚಿತ್ರರಂಗ. ಬಾಲ್ಯದಿಂದ ಕನ್ನಡ ಹಾಗು ರಾಜಣ್ಣನ ಹುಚ್ಚು ಅಭಿಮಾನಿಯಾದ ನಾನು ಕರುನಾಡ ದಾಟಿ ಹೊರ ಹೋಗದೆ ಬದುಕಿದವನು. ಸದಾ ನನ್ನ ಕನ್ನಡದ ಕಲಾರಂಗ ಜಗಮೆಚ್ಚುವ ರಂಗ ಆಗಬೇಕು ಎಂದು ಹಂಬಲಿಸುವ ಜನ್ಮ ನನ್ನದು. ಇತ್ತೀಚಿನ ಚಿತ್ರ ಕಾಂತಾರ ವಿದೇಶಕ್ಕೆ ಬಂದ ಕಾರಣ ನೋಡಲಾಗಲಿಲ್ಲಾ ಆದರೆ ನನ್ನ ಅಕ್ಕನ ಮಗ ಜೀವನ್ ಹಾಗು ನನ್ನ ಅನೇಕ ಚಿತ್ರ ಗುರು ಮೇಲುಕೋಟೆ ಮಂಜ ಚಿತ್ರದಲ್ಲಿ ಖಳನಟನಾಗಿ ಅಭಿನಯಿಸಿದನು. ಇಂದು ಅಮೇರಿಕದ ಡೆನ್ವರ್ ನಲ್ಲಿ ಒರ್ಯಾಕಲ್ ಸಂಸ್ಥೆಯಲ್ಲೆ ಶ್ರೇಷ್ಠ ಸ್ಥಾನದಲ್ಲಿರುವ ಅವನ ಮನೆ ಹತ್ತಿರದಲ್ಲೆ ಮಾಲ್ ಇತ್ತು. ಅಲ್ಲಿ ಕಾಂತಾರ ನೋಡುವ ಅವಕಾಶ ಸಿಕ್ಕಿತು ನೋಡಿ ಬಂದೆ.

ನಾನು ದಕ್ಷಿಣ ಕನ್ನಡದ ದೇವಾಲಯದ ಭಕ್ತ. ವರ್ಷಕ್ಕೆ ಒಂದು ಬಾರಿ ಪೊಳಲಿ, ಕಟೀಲು, ಉಡುಪಿ ಕೃಷ್ಣ, ಮೂಕಾಂಬಿಕೆ, ಕೊರಗಜ್ಜ, ಅಂಬಲಪಾಡಿ, ಉಡುಪಿ ರಾಯರ ಮಠ ದರ್ಶನ ಪಡೆವುದು ನನ್ನ 30 ವರ್ಷದ ಅಭ್ಯಾಸ ಇದು ನನ್ನ ಪ್ರಕಾರ ಶ್ರೇಷ್ಠ ದೇವಭೂಮಿ. ಆಧ್ಯಾತ್ಮಿಕ ಅನುಭವಕ್ಕೆ ಈ ಕ್ಷೇತ್ರದಲ್ಲಿ ಸಂತೃಪ್ತ ಭಾವ ಸಿಗುತ್ತದೆ..ಇಂಥ ನಾಡಿನಿಂದ ಎಂಥ ಅದ್ಭುತ ನಟ ನಿರ್ದೇಶಕ ರಿಷಭ್ ಶೆಟ್ಟಿ ಹುಟ್ಟಿ ಬಂದ ಎಂಥ ಅದ್ಭುತ ಕೊಡುಗೆ ಈತ ಕನ್ನಡ ಚಿತ್ರರಂಗಕ್ಕೆ ಕಾಂತಾರ ಕಡೆಯ 25 ನಿಮಿಷ ನಾನು ಎಲ್ಲಿರುವೆ ಮರೆತು ಹೋಯಿತು. ಚಿತ್ರ ನೋಡಿದ ಮೇಲೆ ಮೌನವಾಯಿತು. ದೇಹ ಮನಸ್ಸು ಹೊರಬಂದಾಗ ಕಾಕತಾಳಿಯ ಎಂಬಂತೆ ಮಂತ್ರಾಲಯ ನರಸಿಂಹಚಾರ್ ವಾಟ್ಸ್ಯಾಪ್ ಕರೆಮಾಡಿ ರಾಯರ ದರ್ಶನ ಮಾಡಿಸಿದರು ಮೂಕವಿಸ್ಮಿತನಾದೆ. ನಂತರ ನನಗೆ ಅನ್ನಿಸಿದ್ದು ಇದು ವೃಷಭ್ ಮಾಡಿದ ಚಿತ್ರವಲ್ಲಾ ಬದಲಿಗೆ ಆತನ ವಂಶೀಕರ ತಂದೆ ತಾಯಿಯ ಆಶೀರ್ವಾದ, ನಶಿಸುತ್ತಿರುವ ಆಧ್ಯಾತ್ಮಿಕ ಭಾವ ಮತ್ತೆ ಮನುಷ್ಯರಿಗೆ ನೆನಪಿಸಲು ದೇವರೆ ಬಂದು ಆತನ ಕೈಯಲ್ಲಿ ಇಂಥ ಅದ್ಭುತ ಸಿನಿಮ ಮಾಡಿಸಿದ್ದಾರೆ.. ದೇವರ ದಯೆಯಿಂದ ರಿಷಭನಿಗೆ ನೂರ್ಕಾಲ ಆಯುಷ್ಯ ಆರೋಗ್ಯ ಕೊಟ್ಟು ಕನ್ನಡ ಕಲಾರಂಗಕ್ಕೆ ಆತನ ಸೇವೆ ಇದೆ ರೀತಿ ಮುಂದುವರಿಯಲಿ ಎಂದು ನನ್ನ ಶುಭಹಾರೈಕೆ’ ಎಂದು ತುಂಬು ಹೃದಯದಿಂದ ಬರೆದು ಹಾರೈಸಿದ್ದಾರೆ.