ಭಾರತೀಯ ಚಿತ್ರರಂಗದಲ್ಲಿ ಪ್ರೇಮಪಕ್ಷಿಗಳಾಗಿ ಗುರುತಿಸಿಕೊಂಡಿದ್ದ ನಟ ಸಿದ್ಧಾರ್ಥ್ ಮತ್ತು ನಟಿ ಅದಿತಿ ರಾವ್ ಹೈದರಿ ಇಂದು ತೆಲಂಗಾಣದ ವನಪರ್ತಿ ಜಿಲ್ಲೆಯ ಶ್ರೀರಂಗಪುರದಲ್ಲಿರುವ ಶ್ರೀ ರಂಗನಾಯಕಸ್ವಾಮಿ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಮದುವೆ ನಡೆದಿದೆ. ಈ ಕುರಿತು ಹಲವು ಸ್ಥಳೀಯ ಸುದ್ದಿ ಪೋರ್ಟಲ್ಗಳು ವರದಿ ಮಾಡಿವೆ.
ಅದಿತಿ ಮತ್ತು ಸಿದ್ಧಾರ್ಥ್ ಕಳೆದ ಕೆಲ ಸಮಯದಿಂದ ಪ್ರೀತಿಯಲ್ಲಿದ್ದರು. ಮದುವೆಗೂ ಮುನ್ನ ಒಟ್ಟಿಗೆ ವಾಸಿಸುತ್ತಿದ್ದರು. ಅಂತಿಮವಾಗಿ, ಇಂದು ವೈವಾಹಿಕ ಜೀವನ ಆರಂಭಿಸಿದ್ದಾರೆ. ತೆರೆ ಹಂಚಿಕೊಂಡ ಮಹಾ ಸಮುದ್ರಂ (2021) ಚಿತ್ರದ ಚಿತ್ರೀಕರಣದ ವೇಳೆ ಜೋಡಿ ನಡುವೆ ಪ್ರೇಮಾಂಕುರವಾಗಿತ್ತು.
ಅದಿತಿ ರಾವ್ ಅವರ ಅಜ್ಜ ವನಪರ್ತಿ ಸಂಸ್ಥಾನದ ಅಂತಿಮ ಆಡಳಿತಗಾರರಾಗಿದ್ದರು. ಇಂದಿಗೂ ಅವರ ಕುಟುಂಬವು ಪ್ರಸಿದ್ಧ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತದೆ. ಹಾಗಾಗಿ ಅದಿತಿ ಈ ದೇವಾಲಯದಲ್ಲಿ ಮದುವೆಯಾಗಲು ನಿರ್ಧರಿಸಿದರು. ಸಿದ್ದಾರ್ಥ್ ಅವರು ತಮಿಳುನಾಡಿನವರಾಗಿರುವುದರಿಂದ ತಮಿಳುನಾಡಿನ ಪುರೋಹಿತರಿಂದ ವಿವಾಹದ ವಿಧಿವಿಧಾನಗಳು ನಡೆದಿವೆ ಎಂದು ವರದಿಯಾಗಿದೆ. ಆದರೆ, ಸಿದ್ಧಾರ್ಥ್ ಅಥವಾ ಅದಿತಿ ರಾವ್ ಹೈದರಿ ಇನ್ನೂ ಮದುವೆ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಪ್ರೇಮಪಕ್ಷಿಗಳಿಂದ ಅಧಿಕೃತ ಮಾಹಿತಿ, ಫೋಟೋ-ವಿಡಿಯೋ ನಿರೀಕ್ಷಿಸಲಾಗಿದೆ.
ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ ತಮ್ಮ ಸಂಬಂಧದ ಬಗ್ಗೆ ಹೆಚ್ಚೇನು ಹೇಳಿಕೊಂಡಿರಲಿಲ್ಲ. ಅದರಂತೆ ಮದುವೆ ಬಗ್ಗೆಯೂ ಜೋಡಿಯಿಂದ ಯಾವುದೇ ಸುಳಿವಿರಲಿಲ್ಲ. ಮದುವೆಯಾಗಿದ್ದರೂ ಇನ್ನೂ ಯಾವುದೇ ಪೋಸ್ಟ್ ಈ ಸೆಲೆಬ್ರಿಟಿ ಕಪಲ್ ಇಂದ ಶೇರ್ ಆಗಿಲ್ಲ. ಮದುವೆ ನಂತರ ಜೋಡಿಯ ಮೊದಲ ಫೋಟೋ ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು, ಕಾತರರಾಗಿದ್ದಾರೆ. ವರದಿಗಳ ಪ್ರಕಾರ, ದಂಪತಿ ಶೀಘ್ರದಲ್ಲೇ ತಮ್ಮ ವಿವಾಹವನ್ನು ಸಾರ್ವಜನಿಕವಾಗಿ ಘೋಷಿಸಲು ಯೋಜಿಸಿದ್ದಾರೆ ಎಂಬ ಮಾಹಿತಿಯೂ ಇದೆ. ಸದ್ಯ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನವಜೋಡಿಗೆ ಶುಭ ಕೋರುತ್ತಿದ್ದಾರೆ.