ಮಹಿಳಾ ಟೆಕ್ಕಿಯನ್ನು ಮದುವೆಯಾಗಲು ಬಯಸಿದ್ದ ವ್ಯಕ್ತಿಯೇ ತನ್ನ ಗೆಳತಿಯನ್ನು ಆಕೆಯ ಹುಟ್ಟುಹಬ್ಬದಂದೇ ಬೆಂಕಿ ಹಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಚೆನ್ನೈನ ತಲಂಬೂರ್ ನಲ್ಲಿ ಈ ಘಟನೆ ನಡೆದಿದ್ದು ಸಾಫ್ಟ್ ವೇರ್ ಕಂಪನಿ ಉದ್ಯೋಗಿ ನಂದಿನಿ ( ೨೪) ಕೊಲೆಗೀಡಾದ ಯುವತಿಯಾಗಿದ್ದಾಳೆ. ಆರೋಪಿ ವೆಟ್ರಿಮಾರನ್ ಕೊಲೆಗೀಡಾಗಿರುವ ನಂದಿನಿಯ ಸಹಪಾಠಿಯಾಗಿದ್ದು, ಓದು ಮುಗಿದ ಬಳಿಕ ಇಬ್ಬರೂ ಒಂದೇ ಕಂಪನಿಯಲ್ಲಿ ಸಹೋದ್ಯೋಗಿಗಳೂ ಆಗಿದ್ದರು. ಆರೋಪಿ ವೆಟ್ರಿಮಾರನ್ ನಂದಿನಿಯ ಮೇಲೆ ಗೆಳೆತನಕ್ಕೂ ಮೀರಿದ ವ್ಯಾಮೋಹವಿಟ್ಟುಕೊಂಡಿದ್ದ. ಇದರ ಸಲುವಾಗಿಯೇ ಪಾಂಡಿಯನ್ ಮಹೇಶ್ವರಿಯಾಗಿದ್ದ ಆತ ಲಿಂಗ ಬದಲಿಸಿಕೊಂಡು ವೆಟ್ರಿಮಾರನ್ ಆಗಿ ಪರಿವರ್ತನೆಯಾಗಿದ್ದ.
ಶನಿವಾರ ಸಂಜೆ ನಂದಿನಿಯ ಹುಟ್ಟುಹಬ್ಬದಂದು ಆಕೆಗೆ ಸರ್ಪ್ರೈಸ್ ನೀಡುತ್ತೇನೆಂದು ನಂಬಿಸಿ ಆಕೆಯ ಕಣ್ಣಿಗೆ ಬಟ್ಟೆ ಕಟ್ಟಿ ಬ್ಲೇಡ್ ನಿಂದ ನಂದಿಯ ಮೈಕೈ ಕೊಯ್ದಿದ್ದಾನೆ. ಅಲ್ಲದೆ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ತೀವ್ರ ಸುಟ್ಟಗಾಯಗಳಿಂದ ಕೂಗಿಕೊಳ್ಳುತ್ತಿದ್ದ ನಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ಕೊಲೆಯಾದ ನಂದಿನಿ ಬೇರೆ ಹುಡುಗರೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದದ್ದು ಆರೋಪಿ ವೆಟ್ರಿಮಾರನ್ ಗೆ ಸಹಿಸಲಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಕೆಯನ್ನು ಕೊಲೆ ಮಾಡಿರಬಹುದು ಅಂತ ಪೊಲೀಸರು ತಿಳಿಸಿದ್ದಾರೆ.
ಸದ್ಯ ಆರೋಪಿ ವೆಟ್ರಿಮಾರನ್ ನನ್ನು ಬಂಧಿಸಿರುವ ಚೆನ್ನೈ ಪೊಲೀಸರು ಹೆಚ್ಚುವರಿ ತನಿಖೆ ನಡೆಸುತ್ತಿದ್ದಾರೆ