ಮುಖ್ಯಮಂತ್ರಿ ಮೂಲಕವೇ ಸಂಧಾನ ಯತ್ನ – ರೋಹಿಣಿ ಸಿಂಧೂರಿ ವಿರುದ್ಧ ತನಿಖೆ ಏನಾಯಿತು..?

ಅಕ್ಷಯ್​ ಕುಮಾರ್​, ಮುಖ್ಯ ಸಂಪಾದಕರು

2009ರ ಕರ್ನಾಟಕ ಕೇಡರ್​​ನ ಐಎಎಸ್​ ಅಧಿಕಾರಿ, ಅವಿಭಜಿತ ಆಂಧ್ರಪ್ರದೇಶ ಮೂಲದ ರೋಹಿಣಿ ಸಿಂಧೂರಿ ದಾಸರಿ ಮತ್ತೆ ವಿವಾದದಲ್ಲಿದ್ದಾರೆ.

ಜಡೆ ಜಗಳ ಅಲ್ಲ, ಐಎಎಸ್​-ಐಪಿಎಸ್​ ಸಂಘರ್ಷವಲ್ಲ:

ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಮತ್ತು ಐಜಿಪಿ ಡಿ ರೂಪಾ ಅವರ ನಡುವೆ ನಡೆಯುತ್ತಿರುವ ಸಂಘರ್ಷ ಇದು ಜಡೆ ಜಗಳ ಅಲ್ಲ, ಆರ್​ಆರ್​ಆರ್​ ಸಂಘರ್ಷವೂ ಅಲ್ಲ. ಇದು ಐಪಿಎಸ್​ ಅಥವಾ ಐಎಎಸ್​ ಸಂಘರ್ಷವೂ ಅಲ್ಲ. 

ಬದಲಿಗೆ ಕರ್ನಾಟಕದ ಆಡಳಿತಾತ್ಮಕ ವ್ಯವಸ್ಥೆ ಎಂತಹ ಸ್ಥಿತಿಗೆ ಬಂದಿದೆ ಎನ್ನುವ ಉದಾಹರಣೆಯಷ್ಟೇ. 

ಮುಖ್ಯಮಂತ್ರಿ ಮೂಲಕವೇ ಸಂಧಾನ ಯತ್ನವೇ..?

ಪದೇ ಪದೇ ಆರೋಪಗಳನ್ನು ಎದುರಿಸುತ್ತಿರುವ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಇದುವರೆಗೂ ಯಾವುದೇ ಆಡಳಿತಾತ್ಮಕ ಕ್ರಮಗಳಾಗದೇ ಇರುವುದು, ಆರೋಪಿತ ಸ್ಥಾನದಲ್ಲಿರುವ ಅಧಿಕಾರಿ ಚುನಾಯಿತ ಕಾರ್ಯಾಂಗದ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿಗಳ ಜೊತೆಗೆ ಶಾಸಕರೊಬ್ಬರ ಜೊತೆಗೆ ಸಂಧಾನಕ್ಕೆ ಯತ್ನಿಸುವುದನ್ನು ನೋಡಿದರೆ ಇಡೀ ಆಡಳಿತ ವ್ಯವಸ್ಥೆ ಮೇಲೆ ಸರ್ಕಾರದ ಚುಕ್ಕಾಣಿ ಹಿಡಿತದವರ ಬಿಗಿ ಎಷ್ಟು ಸಡಿಲವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ಸಂಧಾನ ಯತ್ನ ನಿರಾಕರಿಸದ ರೋಹಿಣಿ ಸಿಂಧೂರಿ:

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ರೋಹಿಣಿ ಸಿಂಧೂರಿ ಅವರು ಮಾಜಿ ಸಚಿವ ಮತ್ತು ಕೆ ಆರ್​ ನಗರ ಕ್ಷೇತ್ರದ ಜೆಡಿಎಸ್​ ಶಾಸಕ ಸಾ ರಾ ಮಹೇಶ್​ ಅವರ ವಿರುದ್ಧ ಕಲ್ಯಾಣ ಮಂಟಪಕ್ಕಾಗಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದರು ಎಂಬ ಗಂಭೀರ ಆರೋಪ ಮಾಡಿದ್ದರು.

ಜೂನ್​ 5, 2021ರಲ್ಲಿ ಮೈಸೂರು ಜಿಲ್ಲಾಧಿಕಾರಿ ಆಗಿದ್ದ ರೋಹಿಣಿ ಸಿಂಧೂರಿ ಅವರನ್ನು ಮುಜರಾಯಿ ಇಲಾಖೆ ಆಯುಕ್ತರನ್ನಾಗಿ ಎತ್ತಂಗಡಿ ಮಾಡಲಾಯಿತು. ತಾವು ಜಿಲ್ಲಾಧಿಕಾರಿ ಹುದ್ದೆಯಿಂದ ನಿರ್ಗಮಿಸುವ ಹೊತ್ತಲ್ಲಿ ಸಾ ರಾ ಮಹೇಶ್​ ವಿರುದ್ಧ ಭೂ ಅಕ್ರಮದ ಆರೋಪ ಮಾಡಿ ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು ರೋಹಿಣಿ ಸಿಂಧೂರಿ.

ಇತ್ತ, ಸಾ ರಾ ಮಹೇಶ್​ ವಿರುದ್ಧ ರೋಹಿಣಿ ಸಿಂಧೂರಿ ಮಾಡಿದ್ದ ಆರೋಪಗಳ ಬಗ್ಗೆ ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತರು ಮೈಸೂರು ವಿಭಾಗ ಇವರು ನೇಮಿಸಿದ್ದ ತಂಡ ತನಿಖೆ ನಡೆಸಿ ಸಾ ರಾ ಮಹೇಶ್​ ರಾಜಕಾಲುವೆ ಒತ್ತುವರಿ ಮಾಡಿಕೊಂಡಿಲ್ಲ ಎಂದು ವರದಿ ಸಲ್ಲಿಸಿ ಆರೋಪ ಮುಕ್ತಗೊಳಿಸಿತು. ಈ ವರದಿ ಬಂದಿದ್ದು ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ಎತ್ತಂಗಡಿ ಆದ 15 ದಿನದೊಳಗೆ.

ಈಗ ಇದೇ ರೋಹಿಣಿ ಸಿಂಧೂರಿ ತಾವು ಮೈಸೂರು ಜಿಲ್ಲಾಧಿಕಾರಿ ಆಗಿದ್ದಾಗ ಯಾರ ವಿರುದ್ಧ ಆರೋಪ ಮಾಡಿದ್ದರೋ ಅವರ ಜೊತೆಗೆ ಸಂಧಾನಕ್ಕೆ ಯತ್ನಿಸಿದ್ದರು.

ಡಿ ರೂಪಾ ತಮ್ಮ ವಿರುದ್ಧ ಮಾಡಿದ್ದ ಹೇಳಿಕೆಗಳ ಸಂಬಂಧ ಮಾಧ್ಯಮಗಳಿಗೆ ನಿರಂತರವಾಗಿ ಪ್ರತಿಕ್ರಿಯೆ ಕೊಡುತ್ತಿರುವ ರೋಹಿಣಿ ಸಿಂಧೂರಿ ತಾವು ಸಂಧಾನಕ್ಕೆ ಯತ್ನಿಸಿದ್ದರ ಬಗ್ಗೆ ಸಾ ರಾ ಮಹೇಶ್​ ನೀಡಿರುವ ಹೇಳಿಕೆಗಳಿಗೆ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ.

ಅಂದಹಾಗೆ ರೋಹಿಣಿ ಸಿಂಧೂರಿ ವಿರುದ್ಧ ಆರೋಪಗಳು ಕೇಳಿಬರುತ್ತಿರುವುದು ಇದೇ ಮೊದಲಲ್ಲ. 

ರೋಹಿಣಿ ಸಿಂಧೂರಿ ವಿರುದ್ಧ ತನಿಖೆ ಕೈಗೊಂಡಿದ್ದ ಹಿರಿಯ ಐಎಎಸ್​ ಅಧಿಕಾರಿ ಡಾ ರವಿಶಂಕರ್​ ಅವರ ತಂಡಕ್ಕೆ ಕಳೆದ ವರ್ಷದ ಆಗಸ್ಟ್​ನಲ್ಲಿ ಮಾಜಿ ಸಚಿವ ಸಾ ರಾ ಮಹೇಶ್​ ಅವರು 1,200 ಪುಟಗಳ ದಾಖಲೆ ಸಲ್ಲಿಕೆ ಮಾಡಿದ್ದರು.

ಇದೇ ಫೆಬ್ರವರಿ 18ರಂದು ಮೈಸೂರಿನಲ್ಲಿ ಮಾಧ್ಯಮಗಳಿಗೆ ಪತ್ರಿಕ್ರಿಯೆ ನೀಡಿದ್ದ ಸಾ ರಾ ಮಹೇಶ್​ ಅವರು ರೋಹಿಣಿ ಸಿಂಧೂರಿ ವಿರುದ್ಧ ತಾವು ಮಾಡಿದ್ದ ಆರು ಆರೋಪಗಳಲ್ಲಿ ನಾಲ್ಕು ಆರೋಪಗಳು ಸಾಬೀತಾಗಿವೆ ಎಂದು ಹೇಳಿದ್ದರು.

ರೋಹಿಣಿ ಸಿಂಧೂರಿ ವಿರುದ್ಧ ಸಾ ರಾ ಮಹೇಶ್​ ಮಾಡಿದ್ದ ಆರೋಪಗಳು:

1. ತಿರುಮಲದಲ್ಲಿ ಕರ್ನಾಟಕ ಸರ್ಕಾರದ ಕಟ್ಟಡ ನಿರ್ಮಾಣದ ಕಾಮಗಾರಿ ಹಂಚಿಕೆಯಲ್ಲಿ ಅಕ್ರಮ:

ರೋಹಿಣಿ ಸಿಂಧೂರಿ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿದ್ದಾಗ ಆಂಧ್ರಪ್ರದೇಶದ ತಿರುಮಲದಲ್ಲಿ ವಸತಿ ಗೃಹ, ಕಲ್ಯಾಣ ಮಂಟಪ, ಮೂಲಸೌಕರ್ಯ ಕಲ್ಪಿಸುವುದು ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದರು. 

ಅದರ ಆಧಾರದ ಮೇಲೆ 2020ರ ಜೂನ್ 30ರಂದು ಸರ್ಕಾರ ಆದೇಶ ಮಾಡಿದೆ. 200 ಕೋಟಿ ರೂ. ಕಾಮಗಾರಿಯ ನಿರ್ಮಾಣ, ನಿರ್ವಹಣೆಯನ್ನು ಟಿಟಿಡಿಗೆ ವಹಿಸಿದೆ. 

ಆರ್ಕಿಟೆಕ್ಚರ್, ಲ್ಯಾಂಡ್ ಸ್ಕೇಪಿಂಗ್ ಮತ್ತು ಇಂಟೀರಿಯರ್ ವಿನ್ಯಾಸದ ಕೆಲಸವನ್ನು ಮೆ.ಗಾಯತ್ರಿ ಆಂಡ್ ನಮಿತ್ ಆರ್ಕಿಟೆಕ್ಟ್ಸ್ ಅವರಿಗೆ ನೀಡಲಾಗಿದೆ. 

ಇದಕ್ಕಾಗಿ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ 1999ರಡಿ ವಿನಾಯಿತಿ ಕೂಡ ನೀಡಲಾಗಿದೆ. 

ನಮ್ಮ ಸರ್ಕಾರದಲ್ಲಿ ಆರ್ಕಿಟೆಕ್ಟ್, ವಿನ್ಯಾಸಗಾರರೇ ಇಲ್ಲವೇ? ಭೂಮಿ ನಮ್ಮದು, ಹಣ ನಮ್ಮದು, ಆದರೆ ಕಾಮಗಾರಿ ಆ ರಾಜ್ಯದ ಸಂಸ್ಥೆಗೆ ಯಾಕೆ..? ನಮ್ಮ ಲೋಕೋಪಯೋಗಿ ಇಲಾಖೆ ಕೆಲಸ ಮಾಡುತ್ತಿರಲಿಲ್ವ..? ನಮ್ಮಲ್ಲಿ ಆರ್ಕಿಟೆಕ್ಟ್‌ಗಳು ಇರಲಿಲ್ವಾ..? ಈ ವಿಚಾರವನ್ನು ಕೆಲವರು ಗಿಫ್ಟ್ ಅಂತ ಹೇಳುತ್ತಿದ್ದಾರೆ. ಇದಕ್ಕೆ ಸರ್ಕಾರ ಉತ್ತರ ಕೊಡಬೇಕು

ಎಂದು ಸಾ ರಾ ಮಹೇಶ್​ ಅವರು ಆರೋಪ ಮಾಡಿದ್ದರು.

2. ಬಟ್ಟೆ ಬ್ಯಾಗ್​ ಖರೀದಿಯಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಅಕ್ರಮ ಆರೋಪ – 6.5 ಕೋಟಿ ರೂಪಾಯಿ ಲೂಟಿ

ಮೈಸೂರು ಜಿಲ್ಲೆಯ ಗ್ರಾಮ ಪಂಚಾಯ್​ಗಳಿಗೆ  2 ಲಕ್ಷ, ನಗರಸಭೆಗೆ 1.5 ಲಕ್ಷ, ಒಟ್ಟಾರೆ 14 ಲಕ್ಷ ಬ್ಯಾಗ್ ಖರೀದಿ ಮಾಡಲಾಗಿದೆ. ಇದು ಸ್ಥಳೀಯ ಜನಪ್ರತಿನಿಧಿಗಳು ಸಭೆ ಕರೆದು ಕ್ರಿಯಾ ಯೋಜನೆ ಮಾಡಿ ಅಲ್ಲೇ ತೀರ್ಮಾನ ಮಾಡುವ ಯೋಜನೆಯಾಗಿತ್ತು. 

ನಗರ ಪಾಲಿಕೆ ಕ್ರಿಯಾ ಯೋಜನೆ ಅಂತಿಮಗೊಳಿಸಿ ಜಿಲ್ಲಾಧಿಕಾರಿಗಳಿಗೆ ಕಳಿಸುತ್ತದೆ. ಆದರೆ ರೋಹಿಣಿ ಸಿಂಧೂರಿ ಮಾರ್ಚ್‌ 4ರಲ್ಲಿ ಸಭೆ ಕರೆದು ಜಿಲ್ಲೆ ಮತ್ತು ನಗರದ ಪ್ಲಾಸ್ಟಿಕ್ ರಹಿತ ಬ್ಯಾಗ್ ಕೊಡುತ್ತೇವೆ ಎಂದಿದ್ದರು.

ಇಂತಹ 10 ಹಾಗೂ 5 ಕೆಜಿ ಬ್ಯಾಗ್ ಎರಡಕ್ಕೂ ₹ 52 ನೀಡಿ ಖರೀದಿಸಿದ್ದಾರೆ. 

ಇಂತಹ ಒಂದು ಬ್ಯಾಗ್​ಗೆ ಜಿಎಸ್‌ಟಿ ಸೇರಿ 9 ರೂಪಾಯಿ ಆಗುತ್ತದೆ. ಆದರೆ 52 ರೂ.ಗೆ ಖರೀದಿ ಮಾಡಲಾಗಿದೆ. ವಾಸ್ತವ ಬೆಲೆ ಜಿಎಸ್‌ಟಿ ಸೇರಿ 12 ರೂಪಾಯಿ ಹೆಚ್ಚು ನೀಡಿ ಖರೀದಿಸಿದರೆ 8 ರೂ.ಗೆ ಸಿಗಲಿದೆ. 

ಒಟ್ಟು 6.18 ಕೋಟಿ ರೂಪಾಯಿ ನೀಡಿ ಬ್ಯಾಗ್ ಖರೀದಿ ಮಾಡಲಾಗಿದೆ. ಎಲ್ಲರ ಅಧಿಕಾರ ಮೊಟಕುಗೊಳಿಸಿ ಖರೀದಿ ಮಾಡಲಾಗಿದೆ 

ಎಂದು ಸಾ ರಾ ಮಹೇಶ್​ ಅವರು ಆರೋಪಿಸಿದ್ದರು.

ಆರೋಪ 3: ಕೋವಿಡ್​ನಿಂದ ಸತ್ತವರ ಮಾಹಿತಿ ಮುಚ್ಚಿಟ್ಟ ಆರೋಪ:

ಮೈಸೂರು ಜಿಲ್ಲಾಧಿಕಾರಿ ಆಗಿದ್ದ ವೇಳೆ ಕೋವಿಡ್​ನಿಂದ ಮೃತಪಟ್ಟವರ ಬಗ್ಗೆ ಸುಳ್ಳು ಲೆಕ್ಕವನ್ನು ಕೊಟ್ಟಿದ್ದರು. 

2021ರ ಮೇನಲ್ಲಿ ಮೈಸೂರು ಜಿಲ್ಲೆಯಲ್ಲಿ ಕೋವಿಡ್​ ಸೋಂಕಿಗೆ ಬಲಿ ಆದವರು 1,908 ಮಂದಿ. ಆದರೆ ಮೈಸೂರು ಜಿಲ್ಲಾಧಿಕಾರಿ ಆಗಿದ್ದ ರೋಹಿಣಿ ಸಿಂಧೂರಿ ತೋರಿಸಿದ್ದ ಲೆಕ್ಕ ಕೇವಲ 238.

ಕೋವಿಡ್​ ಸೋಂಕಿಗೆ ಬಲಿ ಆಗಿದ್ದಾರೆ ಎಂದು ಆಸ್ಪತ್ರೆಗಳು ನೀಡಿದ ದಾಖಲೆ, ಮರಣಪ್ರಮಾಣಪತ್ರ, ಸ್ಮಶಾನದಲ್ಲಿ ನಮೂದಾಗಿದ್ದ ಅಂಕಿಅಂಶವನ್ನೂ ಸಾ ರಾ ಮಹೇಶ್​ ವಿಧಾನಸಭೆಯಲ್ಲಿ ಉಲ್ಲೇಖ ಮಾಡಿದ್ದರು.

ಕೋವಿಡ್​ ಸೋಂಕಿಗೆ ಬಲಿ ಆದವರ ಲೆಕ್ಕವನ್ನು ಮುಚ್ಚಿಟ್ಟಿದ್ದರಿಂದ ಕೋವಿಡ್​ ಸೋಂಕಿಗೆ ಮೃತಪಟ್ಟವರಿಗೆ ಸರ್ಕಾರ  ಘೋಷಿಸಿದ್ದ 1 ಲಕ್ಷ ರೂಪಾಯಿ ಪರಿಹಾರಕ್ಕೆ ತೊಂದರೆ ಆಯಿತು 

ಎಂದು ಸೆಪ್ಟೆಂಬರ್​ 21, 2021ರಂದು ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡನೆ ವೇಳೆ ದಾಖಲೆ ಸಮೇತ ಆರೋಪಿಸಿದ್ದರು.

ಆರೋಪ 4:

ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಮೈಸೂರಿನ ಪಾರಂಪರಿಕ ಕಟ್ಟಡವಾಗಿರುವ ಸರ್ಕಾರಿ ವಸತಿ ಗೃಹದಲ್ಲಿ ಕಾನೂನುಬಾಹಿರವಾಗಿ 40 ಲಕ್ಷ ರೂಪಾಯಿ ವೆಚ್ಚದಲ್ಲಿ ಈಜುಕೊಳ್ಳ ನಿರ್ಮಿಸಿಕೊಂಡ ಆರೋಪ.

ಸೆಪ್ಟೆಂಬರ್​ 21, 2021ರಂದು ವಿಧಾನಸಭೆಯಲ್ಲೂ ಈ ಬಗ್ಗೆ ಸಾರಾ ಮಹೇಶ್​ ದಾಖಲೆಗಳನ್ನಿಟ್ಟು ಆರೋಪ ಮಾಡಿದ್ದರು.

ಕಾನೂನು ಉಲ್ಲಂಘಿಸಿ ಈಜುಕೊಳ ನಿರ್ಮಿಸಿಕೊಂಡಿದ್ದಾರೆ. ಈ ಈಜುಕೊಳ ಮತ್ತು ನಿರ್ಮಾಣಕ್ಕೆ 40 ಲಕ್ಷ ರೂಪಾಯಿ ಖರ್ಚಾಗಿದೆ. ರಾಜಭವನದಲ್ಲೂ ಈಜುಕೊಳ ಇಲ್ಲ, ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲೂ ಈಜುಕೊಳ ಇಲ್ಲ.

ಪ್ರತಿ ತಿಂಗಳು ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಆಗುತ್ತಿರುವ ವಿದ್ಯುತ್​ ವೆಚ್ಚ 75 ಸಾವಿರ ರೂಪಾಯಿ. 

ನಿಯಮ ಉಲ್ಲಂಘಿಸಿ ಮೈಸೂರು ಜಿಲ್ಲಾಧಿಕಾರಿಗಳಾಗಿದ್ದ ರೋಹಿಣಿ ಸಿಂಧೂರಿ 15 ಲಕ್ಷ ರೂಪಾಯಿ ಖರ್ಚು ಮಾಡಿ ಕಚೇರಿ ನವೀಕರಣ ಮಾಡಿಕೊಂಡರು.

ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಿದ್ದ ಸರ್ಕಾರ:

ಸಾ ರಾ ಮಹೇಶ್​ ಮಾಡಿದ್ದ ನಾಲ್ಕು ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಕಳೆದ ವರ್ಷದ ಮೇ​ ತಿಂಗಳಲ್ಲಿ ರಾಜ್ಯ ಸರ್ಕಾರ ಆದೇಶಿಸಿತ್ತು. 1. ಕೋವಿಡ್​ನಿಂದ ಮೃತಪಟ್ಟವರ ಅಂಕಿಅಂಶವನ್ನು ಮುಚ್ಚಿಟ್ಟಿದ್ದು. 2. ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದಲ್ಲಿ ನಿಯಮ ಉಲ್ಲಂಘಿಸಿ ಈಜುಕೊಳ ಮತ್ತು ಜಿಮ್​ ನಿರ್ಮಿಸಿದ್ದು. 3. ಪಾರಂಪರಿಕ ಕಟ್ಟಡಕ್ಕೆ ಹಾನಿ ಆರೋಪ. 4. ಬಟ್ಟೆ ಬ್ಯಾಗ್​ ಖರೀದಿಯಲ್ಲಿ ಹಗರಣ.

ಈ ತನಿಖಾ ವರದಿಯನ್ನು 30 ದಿನದೊಳಗೆ ಸಲ್ಲಿಸುವಂತೆ ತನಿಖಾ ತಂಡಕ್ಕೆ ರಾಜ್ಯ ಸರ್ಕಾರ ಸೂಚಿಸಿತ್ತು.

4 ಆರೋಪಗಳು ಸಾಬೀತು, ಕ್ರಮ ಯಾಕಿಲ್ಲ..?

ರೋಹಿಣಿ ಸಿಂಧೂರಿ ಅವರ ವಿರುದ್ಧ ತಾವು ಮಾಡಿದ್ದ ಆರು ಆರೋಪಗಳಲ್ಲಿ ನಾಲ್ಕು ಆರೋಪಗಳು ಸಾಬೀತಾಗಿವೆ ಎಂದು ಫೆಬ್ರವರಿ 18ರಂದು ಸಾ ರಾ ಮಹೇಶ್​ ಅವರು ಹೇಳಿದ್ದಾರೆ. 

1 ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸರ್ಕಾರವೇ ತನಿಖಾ ತಂಡಕ್ಕೆ ಸೂಚಿಸಿದ ಮೇಲೆ ವರದಿ ಸಲ್ಲಿಕೆ ಆದ ಬಳಿಕ ರೋಹಿಣಿ ಸಿಂಧೂರಿ ಆರೋಪ ಮುಕ್ತರಾದರೇ ಅಥವಾ ಅವರ ವಿರುದ್ಧ ಆರೋಪ ಸಾಬೀತಾಗಿದೆಯೇ ಎಂಬುದನ್ನು ಸರ್ಕಾರ ಹೇಳಿಲ್ಲ.

ಒಂದು ವೇಳೆ ಆರೋಪ ಸಾಬೀತಾಗಿದ್ದರೆ ರೋಹಿಣಿ ಸಿಂಧೂರಿ ಅವರ ವಿರುದ್ಧ ಇದುವರೆಗೆ ಯಾಕೆ ಇಲಾಖಾ ಕ್ರಮಗಳನ್ನು ಕೈಗೊಂಡಿಲ್ಲ.

ಮುಖ್ಯಮಂತ್ರಿ ಮೂಲಕವೇ ಸಂಧಾನ..?

ಸಾ ರಾ ಮಹೇಶ್​ ಅವರು ಹೇಳಿದ ಪ್ರಕಾರ ರೋಹಿಣಿ ಸಿಂಧೂರಿ ಅವರು ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ, ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಅವರ ಮೂಲಕ ಸಂಧಾನಕ್ಕೆ ಯತ್ನಿಸಿದ್ದಾರೆ. ಐಎಎಸ್​ ಅಧಿಕಾರಿ ಮಣಿವಣ್ಣನ್​ ಮೂಲಕವೂ ಸಂಧಾನಕ್ಕೆ ಯತ್ನಿಸಿದ್ದಾರೆ.

ಸಾ ರಾ ಮಹೇಶ್​ ಅವರು ನೀಡಿರುವ ಈ ಹೇಳಿಕೆಯಲ್ಲಿ ಗಂಭೀರತೆ ಇದೆ. 

ಕಾರಣ ಆರೋಪಕ್ಕೆ ಒಳಗಾಗಿರುವ ಐಎಎಸ್​ ಅಧಿಕಾರಿಯೊಬ್ಬರು ಕಾರ್ಯಾಂಗದ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿಗಳ ಮೂಲಕ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಮೂಲಕ ತಮ್ಮ ವಿರುದ್ಧ ಆರೋಪ ಮಾಡಿರುವ ಶಾಸಕರೊಂದಿಗೆ ಸಂಧಾನಕ್ಕೆ ಯತ್ನಿಸುತ್ತಾರೆ ಎನ್ನುವುದಾದರೆ ಈ ಅಧಿಕಾರಿಯ ವಿರುದ್ಧ ಸರ್ಕಾರ ಕ್ರಮಕೈಗೊಳ್ಳುವಷ್ಟು ಸದೃಢವಾಗಿದೆಯೇ ಎಂಬ ಪ್ರಶ್ನೆ ಮೂಡುತ್ತದೆ.

ಆರೋಪಿತ ಸ್ಥಾನದಲ್ಲಿರುವ ಐಎಎಸ್​ ಅಧಿಕಾರಿ ರೋಹಿಣಿ ತಮ್ಮ ಮೂಲಕ ಸಂಧಾನಕ್ಕೆ ಯತ್ನಿಸಿದರೇ ಇಲ್ಲವೇ ಎನ್ನುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕಾನೂನು ಅರಿತಿರುವ ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸುವುದು ಅವರ ಹೊಣೆಗಾರಿಕೆ ಮತ್ತು ಜವಾಬ್ದಾರಿ.

ರೋಹಿಣಿ ಸಿಂಧೂರಿ ವಿರುದ್ಧ ಮಾನನಷ್ಟ ಮೊಕದ್ದಮೆ:

ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದ ರೋಹಿಣಿ ಸಿಂಧೂರಿ ವಿರುದ್ಧ 2021ರ ಸೆಪ್ಟೆಂಬರ್​ನಲ್ಲೇ ಶಾಸಕ ಸಾ ರಾ ಮಹೇಶ್​ ಅವರು ಮೈಸೂರಿನ ನ್ಯಾಯಾಲಯದಲ್ಲಿ 1 ಕೋಟಿ ರೂಪಾಯಿ ಮಾನಹಾನಿ ಪರಿಹಾರ ನೀಡುವಂತೆ ಆಗ್ರಹಿಸಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಆಂಧ್ರ ಲಾಬಿಯಿಂದ ಮೈಸೂರು ಜಿಲ್ಲಾಧಿಕಾರಿಯಾದರೇ ಸಿಂಧೂರಿ..?

2020ರ ಸೆಪ್ಟೆಂಬರ್​ನಲ್ಲಿ ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆಗೊಂಡಿದ್ದ ಬಿ ಶರತ್​ ಅವರನ್ನು ಕೇವಲ 29 ದಿನಗಳಲ್ಲಿ ಸರ್ಕಾರ ದಿಢೀರ್​ ಆಗಿ ವರ್ಗಾವಣೆ ಮಾಡಿತ್ತು. ಆ ಜಾಗಕ್ಕೆ ರೋಹಿಣಿ ಸಿಂಧೂರಿ ಅವರನ್ನು ತಂದು ಕೂರಿಸಿತ್ತು. 

ಯಾವುದೇ ಆರೋಪಗಳಿಲ್ಲದ, ಯಾವುದೇ ಕರ್ತವ್ಯ ಲೋಪ ಇಲ್ಲದ ಕನ್ನಡಿಗ ಬಿ ಶರತ್​ ಅವರನ್ನು ಏಕಾಏಕಿ ವರ್ಗಾವಣೆ ಮಾಡಿ ರೋಹಿಣಿ ಸಿಂಧೂರಿ ಅವರನ್ನು ಮೈಸೂರಿಗೆ ಜಿಲ್ಲಾಧಿಕಾರಿಯನ್ನಾಗಿ ಮಾಡುವುದರ ಹಿಂದೆ ಆಂಧ್ರ ಮೂಲದ ಲಾಬಿ ಕೆಲಸ ಮಾಡಿತ್ತು. ಆಂಧ್ರ ಸಿಎಂ ಜಗನ್​ ಅವರ ಒತ್ತಡಕ್ಕೆ ಮಣಿದು ಯಡಿಯೂರಪ್ಪ ಅವರನ್ನು ರೋಹಿಣಿ ಅವರನ್ನು ಮೈಸೂರಿನ ಜಿಲ್ಲಾಧಿಕಾರಿಯನ್ನಾಗಿ ಮಾಡಿದ್ದಾರೆ

ಎಂಬ ಆರೋಪವನ್ನು ಸಾರಾ ಮಹೇಶ್​ ಮಾಡಿದ್ದರು.

ಈ ಹಿಂದೆ ಹಾಸನ ಜಿಲ್ಲಾಧಿಕಾರಿಯಾಗಿದ್ದ ತಮ್ಮನ್ನು ವರ್ಗಾವಣೆ ಮಾಡಿದ್ದಾಗ ರೋಹಿಣಿ ಸಿಂಧೂರಿ ಅವರು ಆಡಳಿತಾತ್ಮಕ ನ್ಯಾಯಮಂಡಳಿ ಮೂಲಕ ತಡೆ ತಂದಿದ್ದರು.

ರೋಹಿಣಿ ಸಿಂಧೂರಿ ವಿರುದ್ಧ ಪುರುಷ ಐಎಎಸ್​ ಅಧಿಕಾರಿಗಳ ಅಸಭ್ಯ ಫೋಟೋ ಕಳುಹಿಸಿದ ಆರೋಪ:

ರೋಹಿಣಿ ಸಿಂಧೂರಿ ವಿರುದ್ಧ ಸರಣಿ ಆರೋಪಗಳನ್ನು ಮಾಡಿ ಐಪಿಎಸ್​ ಡಿ ರೂಪಾ ಅವರು ಫೇಸ್​ಬುಕ್​ನಲ್ಲಿ ಬರೆದಿದ್ದರು. ಅದರಲ್ಲಿ ಮೂವರು ಪುರುಷ ಐಎಎಸ್​ ಅಧಿಕಾರಿಗಳಿಗೆ ತಮ್ಮ ಖಾಸಗಿ ಪೋಟೋಗಳನ್ನು ರೋಹಿಣಿ ಅವರು ಕಳುಹಿಸಿದ್ದಾರೆ ಎಂದು ರೂಪಾ ಅವರು ಆರೋಪಿಸಿ ಆ ಫೋಟೋಗಳನ್ನು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದರು.

ರೋಹಿಣಿ ವಿರುದ್ಧದ ತನಿಖೆಗೆ ಸರ್ಕಾರದಿಂದಲೇ ಅನುಮತಿ ಇಲ್ಲ:

ರೋಹಿಣಿ ಸಿಂಧೂರಿ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿ, ಲೋಕಾಯುಕ್ತ ತನಿಖೆಗೆ ಸರ್ಕಾರದ ಅನುಮತಿ ಕೇಳಿದ್ದರೂ ಸರ್ಕಾರ ಅನುಮತಿ ನಿರಾಕರಿಸಿದೆ, ಆ ಬಗ್ಗೆ ತಮ್ಮ ಬಳಿ ದಾಖಲೆ ಇದೆ ಎಂದು ಡಿ ರೂಪಾ ಆರೋಪಿಸಿರುವುದು ರಾಜ್ಯ ಬಿಜೆಪಿ ಸರ್ಕಾರದ ಕಾರ್ಯವೈಖರಿ ಹೇಗಿದೆ ಎನ್ನುವುದನ್ನು ದೃಢೀಕರಿಸುತ್ತೆ.

LEAVE A REPLY

Please enter your comment!
Please enter your name here