ಸಿದ್ದು-ಡಿಕೆ ಸಿಎಂ ಕದನ: ಅಂದು ಖರ್ಗೆ ಮಾಡಿದ ಆ ತಪ್ಪು ಇಂದಿನ ಸ್ಥಿತಿಗೆ ಕಾರಣನಾ?

ಮುಖ್ಯಮಂತ್ರಿ ಹುದ್ದೆ ವಿಚಾರದಲ್ಲಿ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ನಡುವೆ ಪೈಪೋಟಿ ಇರುತ್ತದೆ ಎಂಬುದು ಕಾಂಗ್ರೆಸ್ ಹೈಕಮಾಂಡ್​ಗೆ ಗೊತ್ತಿಲ್ಲದ ವಿಚಾರವೇನಲ್ಲ.ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ನೇಮಿಸಿದ ಮೊದಲ ದಿನದಿಂದಲೇ ಭವಿಷ್ಯದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬ ಅಂಶದ ಮೇಲೆ ಪಕ್ಷದಲ್ಲಷ್ಟೇ ಅಲ್ಲ, ರಾಜ್ಯ ರಾಜಕೀಯದ ಎಲ್ಲಾ ಪಡಸಾಲೆಗಳಲ್ಲಿ ಚರ್ಚೆಗಳು ನಡೆದಿದ್ದವು.

ಚುನಾವಣೆಗೆ ಮುನ್ನವೇ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಒಂದು ಒಪ್ಪಂದವನ್ನು ಕುದುರಿಸಿದ್ದರೇ ಇಂದು ದೆಹಲಿಯಲ್ಲಿ ಪಂಚಾಯಿತಿಗಳ ಮೇಲೆ ಪಂಚಾಯಿತಿಗಳನ್ನು ನಡೆಸುವ ಅಗತ್ಯವೇ ಬೀಳುತ್ತಿರಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕೂಡ ಈ ವಿಚಾರದಲ್ಲಿ ಉದಾಸೀನದಿಂದ ವರ್ತಿಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

ಈ ಚುನಾವಣೆಯಲ್ಲಿ ಗೆದ್ದೇ ತೀರುವ ಭರವಸೆಯನ್ನು ಕಾಂಗ್ರೆಸ್ ಪಕ್ಷ ಹೊಂದಿತ್ತು. ಆದರೆ,ಈ ಮಟ್ಟದ ಘನ ವಿಜಯವನ್ನು ಊಹೆ ಮಾಡಿರಲಿಲ್ಲ. ಒಂದೊಮ್ಮೆ ಸರಳ ಬಹುಮತ ಬಂದಿದ್ದಲ್ಲಿ ಸಿದ್ದರಾಮಯ್ಯ- ಡಿಕೆ ಶಿವಕುಮಾರ್ ಪೈಕಿ ಯಾರಾದರೊಬ್ಬರು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದರೇನೋ?

ಆದರೆ, ಜೆಡಿಎಸ್​ ಪಕ್ಷವನ್ನು ಕಿಂಗ್ ಮೇಕರ್ ಮಾಡುವ ಹಂಗ್ ಅಸೆಂಬ್ಲಿ ಸೃಷ್ಟಿಯಾಗದ ರೀತಿ ಮತ್ತು ಬಿಜೆಪಿಗೆ ಆಪರೇಷನ್ ಕಮಲ ಮಾಡಲು ಅವಕಾಶವೇ ಇಲ್ಲದ ರೀತಿ ಕಾಂಗ್ರೆಸ್ ಸಾಧಿಸಿದ ಜಯಕ್ಕೆ ತಾವೇ ಕಾರಣ ಎಂಬ ಭಾವ ಇಬ್ಬರಲ್ಲಿಯೂ ಸ್ಫುಟವಾಗಿ ಕಾಣುತ್ತಿದೆ.

ಮುಂದಿನ ಐದು ವರ್ಷದಲ್ಲಿ ಪರಿಸ್ಥಿತಿಗಳು ಏನೆಲ್ಲಾ ಬದಲಾಗುತ್ತವೆಯೋ ಯಾರಿಗೂ ತಿಳಿಯದು.. ಹೀಗಾಗಿ ಮುಂದಿನ ಐದು ವರ್ಷದವರೆಗೂ ಸುರಕ್ಷಿತವಾಗಿ ಅಧಿಕಾರದಲ್ಲಿರಬಹುದಾದ ಅವಕಾಶವನ್ನು ಮುಖ್ಯಮಂತ್ರಿ ರೇಸ್​ನಲ್ಲಿರುವ ನಾಯಕರಷ್ಟೇ ಅಲ್ಲ, ಶಾಸಕರು ಕೂಡ ಸಿದ್ದರಿಲ್ಲ. ಉಪ ಮುಖ್ಯಮಂತ್ರಿ, ಸಚಿವ ಸ್ಥಾನಕ್ಕಾಗಿ ತಮ್ಮ ತಮ್ಮ ಮಿತಿಯಲ್ಲಿ ಶಾಸಕರು ದಾಳಗಳನ್ನು ಉರುಳಿಸುತ್ತಿದ್ದಾರೆ.

ಅಧಿಕಾರ ಹಂಚಿಕೆಗೂ ಒಪ್ಪದ ನಾಯಕರು

ರಾಜಸ್ಥಾನ ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ ಮತ್ತು ಮಾಜಿ ಡಿಸಿಎಂ ಸಚಿನ್ ಪೈಲಟ್ ನಡುವಿನ ರಾಜಕೀಯ ಕದನದ ಜೊತೆ ಕರ್ನಾಟಕ ಕಾಂಗ್ರೆಸ್ ರಾಜಕೀಯಗಳನ್ನು ಹೋಲಿಕೆ ಮಾಡಲಾಗುತ್ತಿದೆ.

ಈಗ ಸಿದ್ದರಾಮಯ್ಯಗೆ ಮುಖ್ಯಮಂತ್ರಿಯಾಗುವ ಅವಕಾಶ ನೀಡಿದಲ್ಲಿ ತನ್ನ ಪರಿಸ್ಥಿತಿ ಸಚಿನ್ ಪೈಲಟ್​ನಂತೆ ಆಗಬಹುದು ಎಂಬ ಭಯ ಡಿಕೆ ಶಿವಕುಮಾರ್ ಅವರನ್ನು ಕಾಡುತ್ತಿದೆ. ಈ ಕಾರಣಕ್ಕಾಗಿಯೇ ತಮಗೆ ಪೂರ್ಣ ಪ್ರಮಾಣದಲ್ಲಿ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ತಮಗೆ ಮೊದಲು ಮುಖ್ಯಮಂತ್ರಿಯಾಗುವ ಅವಕಾಶ ನೀಡಬೇಕು. ಇಲ್ಲವಾದಲ್ಲಿ ತಮಗೆ ಯಾವ ಹುದ್ದೆಯೂ ಬೇಡ ಎಂದು ಡಿಕೆ ಶಿವಕುಮಾರ್ ನೇರವಾಗಿ ಹೈಕಮಾಂಡ್ ನಾಯಕರ ಮುಂದೆ ಕಡ್ಡಿ ಮುರಿದಂತೆ ಹೇಳಿಕೆ ನೀಡಿದ್ದಾರೆ.

ಆದರೆ, ಡಿಕೆ ಶಿವಕುಮಾರ್ ವಾದಕ್ಕೆ ಸಿದ್ದರಾಮಯ್ಯ ಮಣೆ ಹಾಕುತ್ತಿಲ್ಲ. ತಾವೇ ಮುಖ್ಯಮಂತ್ರಿ ಆಗಬೇಕೆಂದು ಸಿದ್ದರಾಮಯ್ಯ ಕೂಡ ಪಟ್ಟು ಹಿಡಿದಿದ್ದಾರೆ. ಅಧಿಕಾರ ಹಂಚಿಕೆ ಸೂತ್ರಕ್ಕೆ ತಾನು ಸಿದ್ಧ. ಆದರೆ, ಮೊದಲು ತಮಗೇ ಅಧಿಕಾರ ನೀಡಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದು ಕುಳಿತಿದ್ದಾರೆ.