ಬಿಜೆಪಿಯೂ ಬಯಸುತ್ತಿದೆ, ಡಿಕೆಶಿಯೇ ಮುಖ್ಯಮಂತ್ರಿ ಆಗಲಿ ಎಂದು..! ಕಾರಣಗಳೇ ಇವು..!

ಅಕ್ಷಯ್​ ಕುಮಾರ್​ ಯು, ಸಂಪಾದಕರು, ಪ್ರತಿಕ್ಷಣ

ಕರ್ನಾಟಕದಲ್ಲಿ ಕಾಂಗ್ರೆಸ್​​ಗೆ ಪ್ರಚಂಡ ಮತ್ತು ಭಾರೀ ಬಹುಮತ ಬಂದ ಬಳಿಕ ಯಾರು ಮುಖ್ಯಮಂತ್ರಿ ಆಗಬೇಕು ಎನ್ನುವ ಚರ್ಚೆಗಳ ನಡುವೆ ಮೋದಿ ಅಲೆಯನ್ನು ನಂಬಿ ಹೀನಾಯವಾಗಿ ಸುಣ್ಣವಾಗಿ ಮುಖ ಕಳೆದುಕೊಂಡಿರುವ ಬಿಜೆಪಿ ಈಗ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್​ ಅವರ ಪಕ್ಷಪಾತಿಯಾಗಿದೆ.

ಅಂದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬದಲು ಡಿಕೆಶಿವಕುಮಾರ್​ ಅವರೇ ಮೊದಲಿಗೆ ಮುಖ್ಯಮಂತ್ರಿ ಆಗಲಿ, ಸಿದ್ದರಾಮಯ್ಯ ಅವರು ಡಿಕೆಶಿಗೆ ಮುಖ್ಯಮಂತ್ರಿ ಗಾದಿಯನ್ನು ಬಿಟ್ಟುಕೊಡಲಿ ಎಂಬ ವಕಾಲತ್ತಿಗೆ ತನ್ನ ಧ್ವನಿಯನ್ನೂ ಕೂಡಿಸಿದೆ.

ಡಿಕೆಶಿ ಮುಖ್ಯಮಂತ್ರಿ ಆಗಬೇಕೆಂಬ ಅಲ್ಲಲ್ಲಿ ಎದ್ದಿರುವ ಕೂಗಿಗೆ ಬಿಜೆಪಿಯೂ ದನಿಗೂಡಿಸಿರುವುದು ಎಲ್ಲರಿಗೂ ಅಚ್ಚರಿಯುನ್ನುಂಟು ಮಾಡಿದೆ. ಬಿಜೆಪಿ ಕಾರ್ಯಕರ್ತರು, ನಾಯಕರು ಡಿಕೆಶಿಯೇ ಮುಖ್ಯಮಂತ್ರಿ ಆದರೆ ಒಳ್ಳೆದಿತ್ತು ಎಂಬ ಮನಸ್ಥಿತಿಯಲ್ಲೇ ಇದ್ದಾರೆ.

ಗುಜರಾತ್​ನಲ್ಲಿ ಸೋನಿಯಾ ಗಾಂಧಿ ಅವರ ಆಪ್ತ ಅಹ್ಮದ್​ ಪಟೇಲ್​ ಅವರನ್ನು ರಾಜ್ಯಸಭಾ ಚುನಾವಣೆಯಲ್ಲಿ ಮರು ಆಯ್ಕೆ ಮಾಡುವ ಸಲುವಾಗಿ ಗುಜರಾತ್​ ಕಾಂಗ್ರೆಸ್​ ಶಾಸಕರನ್ನು ಕರ್ನಾಟಕದ ರೆಸಾರ್ಟ್​​ನಲ್ಲಿ ಭದ್ರವಾಗಿಸಿಕೊಂಡ ದಿನದಿಂದ ಶುರುವಾದ ಆದಾಯ ತೆರಿಗೆ ಇಲಾಖೆ ದಾಳಿ ಆ ಬಳಿಕದ ಜಾರಿ ನಿರ್ದೇಶನಾಲಯದ ದಾಳಿ ಮತ್ತು ಆ ಬಳಿಕದ ಡಿಕೆಶಿ ಬಂಧನ ಮತ್ತು ಸಿಬಿಐ ದಾಳಿಯ ಹಿನ್ನೆಲೆ ಕಾಂಗ್ರೆಸ್​ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿರುವ ಡಿಕೆಶಿ ಅವರನ್ನು ಹಣಿಯ ಬೇಕೆಂಬ ಉದ್ದೇಶದಿಂದಲೇ ಕೂಡಿತ್ತು.

ಡಿಕೆಶಿಗೆ ಇಷ್ಟೆಲ್ಲ ಕಷ್ಟ-ಕೋಟಲೆಗಳನ್ನು ಕೊಟ್ಟ ಬಿಜೆಪಿ ಈಗ ಅವರ ಬಗ್ಗೆ ಮರುಕ, ಅನುಕಂಪ, ಕರುಣೆ ತೋರಿಸುತ್ತಿರುವುದು ಯಾಕೆ..?

ಅದಕ್ಕೆ  ಕಾರಣಗಳಿವೆ:

1) ಡಿಕೆಶಿವಕುಮಾರ್​ ಅವರು ಆರಂಭದಲ್ಲೇ ಮುಖ್ಯಮಂತ್ರಿ ಆದರೆ ಅವರನ್ನು ಆದಾಯ ತೆರಿಗೆ ಇಲಾಖೆ ಅಥವಾ ಈಡಿ ಅಥವಾ ಸಿಬಿಐ ಪ್ರಕರಣದಲ್ಲಿ ಸಿಲುಕಿಸಿ ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವುದು ಬಿಜೆಪಿಗೆ ಕಷ್ಟಕರ ಕೆಲಸವೇನಲ್ಲ. ಚಿಟಿಕೆ ಹೊಡೆದಷ್ಟು ವೇಗದಲ್ಲಿ ಆ ಕೆಲಸವನ್ನು ಬಿಜೆಪಿ ಮಾಡಿಯೇ ತೀರುತ್ತೆ.ಅಕ್ರಮ ಸಂಪತ್ತು ಗಳಿಕೆ ಸಂಬಂಧ ಡಿಕೆಶಿ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರೆ ಆಗ ಬಿಜೆಪಿ ಪರವೇ ಜನ ಬೆಂಬಲ ವ್ಯಕ್ತವಾಗಲಿದೆ.

2) ಮುಖ್ಯಮಂತ್ರಿ ಸ್ಥಾನದಲ್ಲಿರುವ ಒಬ್ಬ ವ್ತಕ್ತಿ ಭ್ರಷ್ಟಾಚಾರ ಅಥವಾ ಅಕ್ರಮದ ಆರೋಪದಿಂದ ಕೆಳಗಿಳಿದರೆ ಆಗ ಕರ್ನಾಟಕದಲ್ಲಿ ಕಾಂಗ್ರೆಸ್​​ ಸರ್ಕಾರ ಬಾಳಿಕೆ ಕಡಿಮೆ. ಕಾಂಗ್ರೆಸ್​ ಸರ್ಕಾರ ಸುಲಭದಲ್ಲಿ ಪತನವಾಗಬಹುದು.

3) ಬಿಜೆಪಿ ಭ್ರಷ್ಟಾಚಾರವನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್​ನ ಮುಖ್ಯಮಂತ್ರಿಯೊಬ್ಬರು ಭ್ರಷ್ಟಾಚಾರದ ಕಾರಣದಿಂದಲೇ ಅಧಿಕಾರ ಕಳೆದುಕೊಂಡರು ಎಂಬ ಕಾಂಗ್ರೆಸ್​​ಗೆ ಮತ್ತಿಕೊಳ್ಳುವ ಕಳಂಕ ಬಿಜೆಪಿಗೆ ದೊಡ್ಡ ಚುನಾವಣಾ ಲಾಭವಾಗಿ ಕಾಂಗ್ರೆಸ್​​ ಮೇಲಿನ ಜನವಿಶ್ವಾಸವನ್ನು ದೊಡ್ಡ ಪ್ರಮಾಣದಲ್ಲಿ ಕುಗ್ಗಿಸಬಹುದು. ಭವಿಷ್ಯದಲ್ಲಿ ಅದೇ ಬಿಜೆಪಿಗೆ ಚುನಾವಣಾ ಅಸ್ತ್ರವಾಗಲಿದೆ.

4) ಆರಂಭದಲ್ಲೇ ಡಿಕೆಶಿ ಮುಖ್ಯಮಂತ್ರಿ ಆದರೆ ಸಿದ್ದರಾಮಯ್ಯ ಬಳಗದ ಕೋಪತಾಪ ಅಧಿಕಗೊಂಡು ಕಾಂಗ್ರೆಸ್​ ಸರ್ಕಾರ ಪತನವಾಗುವ ಸನ್ನಿವೇಶ ಏರ್ಪಡಲಿದೆ.

5) ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ಕರ್ನಾಟಕದಲ್ಲಿ ಕಾಂಗ್ರೆಸ್​ನ್ನು ಕಟ್ಟಿಹಾಕಲೇಬೇಕಾದ ಅನಿವಾರ್ಯತೆಯಲ್ಲಿ ಬಿಜೆಪಿ ಇರುವುದರಿಂದ ಬಿಜೆಪಿಗೆ ಡಿಕೆಶಿಯೇ ಮುಖ್ಯಮಂತ್ರಿ ಆದರೆ ಲಾಭ.

6) ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿಯಾಗಿ ಗ್ಯಾರಂಟಿ ಯೋಜನೆಗಳ ಕರಾರುವಕ್ಕು ಜಾರಿಯಾದರೆ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ಹೊಡೆತ ಬೀಳಲಿದೆ.

8) ಲೋಕಸಭಾ ಚುನಾವಣೆಯವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾದರೆ ಆಗ ಕಾಂಗ್ರೆಸ್​​ನಿಂದ ಅಹಿಂದ ಮತಗಳನ್ನು ದೂರವಾಗಿಸುವ ಬಿಜೆಪಿಗೆ ದೊಡ್ಡ ಹಿನ್ನಡೆ ಆಗಲಿದೆ.

9) ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದರೆ ಕಾಂಗ್ರೆಸ್​ ಸುಭದ್ರ ಸರ್ಕಾರ ನೀಡಬಹುದು ಎಂಬ ಆತಂಕ ಬಿಜೆಪಿಗೆ ಕಾಡುತ್ತಿದೆ.

ಈ ಎಲ್ಲ ಕಾರಣದಿಂದಲೇ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್​​ ಅವರೇ ಮುಖ್ಯಮಂತ್ರಿ ಆಗಲಿ ಎಂಬ ನಿರೀಕ್ಷೆ, ಬಯಕೆಯಲ್ಲಿದೆ ಬಿಜೆಪಿ.