ರೈಲು ಶಬ್ಧದ ವ್ಯತ್ಯಾಸ ಗಮನಿಸಿ ಚೈನ್ ಎಳೆದು ಅಪಘಾತ ತಡೆದಿದ್ದರು ಸರ್ ಎಂ ವಿಶ್ವೇಶ್ವರಯ್ಯ

ಅದು ಭಾರತದಲ್ಲಿ ಬ್ರಿಟೀಷ್ ಆಡಳಿತ ಇದ್ದ ಸಮಯ..

ರೈಲೊಂದು ಚಲಿಸುತ್ತಿತ್ತು.. ಅದರಲ್ಲಿ ಬಹುತೇಕ ಪ್ರಯಾಣಿಕರು ಬ್ರಿಟೀಷರೇ ಆಗಿದ್ದರು. ಅವರ ಜೊತೆ ಒಬ್ಬ ಭಾರತೀಯರು ಮಾತ್ರ ರೈಲಲ್ಲಿ ಸಂಚರಿಸುತ್ತಿದ್ದರು.

ಕಂದು ಚರ್ಮ, ಸಣ್ಣ ದೇಹಾಕೃತಿಯ ಆ ವ್ಯಕ್ತಿ ಶ್ವೇತವರ್ಣದ ಬಟ್ಟೆಗಳನ್ನು ಧರಿಸಿದ್ದರು.

ಅವರನ್ನು ನೋಡಿದ ಬ್ರಿಟೀಷರು, ಯಾರೋ ಬುದ್ದಿಯಿಲ್ಲದವನು.. ಅನಕ್ಷರಸ್ಥ ಇದ್ದಂತೆ ಕಾಣುತ್ತಾನೆ ಎಂದು ಅವರವರಲ್ಲೇ ಕೇವಲವಾಗಿ ಮಾತನಾಡುತ್ತಿದ್ದರು. ಆದರೆ, ಆ ಭಾರತೀಯ ವ್ಯಕ್ತಿ ಮಾತ್ರ ಅದಕ್ಕೆ ತಲೆಕೆಡಿಸಿಕೊಳ್ಳದೇ ಸುಮ್ಮನೆ ಕುಳಿತಿದ್ದರು.

ಆದರೆ, ದಿಢೀರ್ ಎಂದು ಎದ್ದು ನಿಂತ ಆ ವ್ಯಕ್ತಿ, ಬೋಗಿಯಲ್ಲಿದ್ದ ಚೈನನ್ನುಎಳೆದುಬಿಟ್ಟರು. ವೇಗವಾಗಿ ಚಲಿಸುತ್ತಿದ್ದ ರೈಲು ಕೆಲ ಹೊತ್ತಿಗೆ ನಿಂತು ಹೋಯಿತು. ಎಲ್ಲರೂ ಒಂದು ಕ್ಷಣ ಆಶ್ಚರ್ಯಚಕಿತರಾಗಿ, ಆ ವ್ಯಕ್ತಿ ಯಾಕ್ಹಿಂಗೆ ಮಾಡಿದ.. ಬುದ್ದಿ ಇಲ್ವಾ ಆತನಿಗೆ ಎಂದು ಮಾತನಾಡಿಕೊಳ್ಳುತ್ತಿದ್ದರು.

ಆಗ ಅಲ್ಲಿಗೆ ಬಂದ ಗಾರ್ಡ್, ಯಾರು ಚೈನನ್ನು ಎಳೆದಿದ್ದು ಎಂದು ಕೇಳಿದರು.. ಬೇರೆಯವರು ಬೆರಳು ತೋರಿಸುವ ಮುನ್ನವೇ ಆ ಭಾರತೀಯ ವ್ಯಕ್ತಿ, ನಾನೇ ಚೈನ್ ಎಳೆದಿದ್ದು ಎಂದು ಹೇಳಿದರು.

ತಮ್ಮ ಮಾತನ್ನು ಮುಂದುವರೆಸಿದ ಅವರು,
ಇಲ್ಲಿಂದ ಕೆಲವೇ ದೂರದಲ್ಲಿ ಹಳಿ ಹಾನಿಗೊಂಡಿದೆ ಎಂದು ನನಗನ್ನಿಸುತ್ತಿದೆ. ಅದಕ್ಕೆ ಚೈನ್ ಎಳೆದೆ ಎಂದು ವಿವರಣೆ ನೀಡಿದರು.

ನಿಮಗೆ ಹೇಗೆ ಗೊತ್ತು ಎಂದು ಗಾರ್ಡ್ ಮತ್ತೆ ಪ್ರಶ್ನಿಸಿದರು.

ಆಗ, ರೈಲಿನ ಸಾಮಾನ್ಯ ವೇಗದಲ್ಲಿ ಆದ ಬದಲಾವಣೆ.. ಅದರ ಜೊತೆಗೆ ಶಬ್ಧದಲ್ಲಿ ಆದ ಬದಲಾವಣೆಗಳನ್ನು ಗಮನಿಸಿದ ನನಗೆ ಹಾಗೇ ಅನ್ನಿಸಿತು ಎಂದು ಆ ಭಾರತೀಯ ವ್ಯಕ್ತಿ ಹೇಳಿದರು.

ಇದಾದ ನಂತರ ಅನುಮಾನದ ನಡುವೆಯೇ ಆ ಗಾರ್ಡ್, ಹಳಿಯನ್ನು ಪರೀಕ್ಷಿಸಲು ಹೊರಟರು. ಸ್ವಲ್ಪ ದೂರದಲ್ಲಿ ರೈಲ್ವೇ ಹಳಿ ಹಾಳಾಗಿದ್ದು ಕಂಡುಬಂತು.. ಹಳಿಯ ನಟ್ಟು ಬೋಲ್ಟ್ ಬೇರ್ಪಟ್ಟಿದ್ದವು. ಎಲ್ಲರು ಒಂದು ಕ್ಷಣ ಶಾಕ್ ಆದರು. ಇದೇ ಹಳಿಯ ಮೇಲೆ ರೈಲು ಚಲಿಸಿದಲ್ಲಿ ಅಪಘಾತವಾಗುತ್ತಿತ್ತು.

ಅಂದ ಹಾಗೇ, ಈ ಘಟನೆಯಲ್ಲಿ ಚೈನ್ ಎಳೆದ ವ್ಯಕ್ತಿ, ದೇಶ ಕಂಡ ಸರ್ವಶ್ರೇಷ್ಠ ಎಂಜಿನಿಯರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ.