ಒಡಿಶಾ ರೈಲು ದುರಂತದಲ್ಲಿ 275 ಮಂದಿ ಸಾವನ್ನಪ್ಪಿದ್ದು, 1100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘೋರ ದುರಂತಕ್ಕೆ ತಾಂತ್ರಿಕ ಲೋಪ ಕಾರಣನಾ? ಅಥವಾ ಮಾನವ ತಪ್ಪು ಕಾರಣನಾ? ಎಂಬ ಪ್ರಶ್ನೆಗಳು ಕಾಡುತ್ತಿವೆ. ಈ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಆಡಿಯೋ ಒಂದು ಸಂಚಲನ ಮೂಡಿಸಿದೆ.
ಇಬ್ಬರು ರೈಲ್ವೇ ಅಧಿಕಾರಿಗಳು ನಡೆಸಿದ ಸಂಭಾಷಣೆ ಅದರಲ್ಲಿದೆ..
ಸೌತ್ ಈಸ್ಟರ್ನ್ ರೈಲ್ವೇಯ ಟ್ರಾಫಿಕ್ ಸಿಎಸ್ಓ ಅಶೋಕ್ ಅಗರ್ವಾಲ್ ಧ್ವನಿಯಲ್ಲಿ ಘೋರ ದುರಂತಕ್ಕೆ ಸಂಬಂಧಿಸಿದ ಸ್ಫೋಟಕ ವಿಚಾರಗಳು ಆಡಿಯೋ ಮೂಲಕ ಹೊರಬಿದ್ದಿವೆ.
ಈ ಆಡಿಯೋದಲ್ಲಿ, ದುರಂತಕ್ಕೆ ಸಂಬಂಧಿಸಿದ ಸಲ್ಲಿಕೆಯಾದ ಪ್ರಾಥಮಿಕ ತನಿಖಾ ವರದಿ ಬಗ್ಗೆ ಅನುಮಾನ ವ್ಯಕ್ತಪಡಿಸಿ ಇಬ್ಬರು ಅಧಿಕಾರಿಗಳು ಮಾತನಾಡಿಕೊಳ್ಳುತ್ತಾರೆ. ನಡೆದಿರುವ ದುರಂತಕ್ಕೂ ಸಲ್ಲಿಕೆಯಾದ ವರದಿಗೂ ವ್ಯತ್ಯಾಸಗಳಿರುವ ಬಗ್ಗೆ ಓರ್ವ ಅಧಿಕಾರಿ ಶಂಕೆ ವ್ಯಕ್ತಪಡಿಸುತ್ತಾರೆ. ಅಶೋಕ್ ಅಗರ್ವಾಲ್ ಕೂಡ ವರದಿಯಲ್ಲಿ ಸ್ಪಷ್ಟತೆ ಇಲ್ಲ ಎನ್ನುತ್ತಾರೆ.
ಅಷ್ಟಕ್ಕೂ ಆಡಿಯೋದಲ್ಲಿ ಏನಿದೆ?
ಸಿಗ್ನಲ್ ಮೇನ್ ಲೇನ್ಗೆ ತ್ರೂ ಮಾಡಿದ್ದಾರೆ. ಆದರೆ, ಪಾಯಿಂಟ್ ಫೇಸಿಂಗ್ ಮಾತ್ರ ಲೂಪ್ ಲೇನ್ನಲ್ಲಿ ಇರಿಸಿದ್ದಾರೆ. ಇದೇ ದುರಂತಕ್ಕೆ ಕಾರಣ ಎಂದು ಇಬ್ಬರು ಅಧಿಕಾರಿಗಳು ಮಾತನಾಡಿಕೊಳ್ಳುತ್ತಾರೆ. ಯಾರಾದರೂ ಬೇಕೆಂದೇ ಹೀಗೆ ಮಾಡಿದಲ್ಲಿ ದುರಂತ ನಡೆಯುವ ಸಂಭವ ಇದೆ.. ದುರಂತ ಸಮಯದಲ್ಲಿ ಯಾರೋ ಬೇಕೆಂದೇ ಗೊಂದಲ ಸೃಷ್ಟಿಸಿದ್ದಾರೆ ಎಂಬರ್ಥದಲ್ಲಿ ಇಬ್ಬರ ನಡುವೆ ಸಂಭಾಷಣೆ ನಡೆಯುತ್ತೆ.
ಆ ಸಂಭಾಷಣೆ
– ಕಾಲರ್ – ದುರಂತಕ್ಕೆ ಕಾರಣ ಏನೆಂದು ಡಿಸೈಡ್ ಮಾಡಿದ್ರಿ?
– ಅಶೋಕ್ ಅಗರ್ವಾಲ್ – ಪಾಯಿಂಟ್ ಲೂಪ್ಲೈನ್ಗೆ ಸೆಟ್ ಆಗಿದೆ. ಆದ್ರೆ, ಸಿಗ್ನಲ್ ಮೇನ್ ಲೈನ್ಗೆ ಹೋಗಿದೆ.
– ಕಾಲರ್ – ಇದು ಹೇಗೆ ಸಾಧ್ಯ?
– ಅಶೋಕ್ ಅಗರ್ವಾಲ್ – ಏನೋ ಗೊಂದಲ ಆಗಿದೆ..
– ಕಾಲರ್ – ಆದರೆ, ಅವರು ಆ ಸಮಯದಲ್ಲಿ ಕೆಲಸದಲ್ಲಿ ಇದ್ರಾ?
– ಅಶೋಕ್ ಅಗರ್ವಾಲ್ – ಹೌದು, ಕೆಲಸ ನಡೆಯುತ್ತಿತ್ತು. ಸ್ವಲ್ಪ ಗೊಂದಲವೂ ಉಂಟಾಯ್ತು. ಮೇನ್ ಲೇನ್ಗೆ ಸಿಗ್ನಲ್ ಕೊಟ್ಟಿದ್ದಾರೆ. ಆದರೆ, ಫೇಸಿಂಗ್ ಪಾಯಿಂಟ್ ಲೂಪ್ಲೈನ್ಗೆ ಇದೆ.
– ಕಾಲರ್ – ಅದಕ್ಕೆ ಕೋರಮಂಡಲ್ ಎಕ್ಸ್ಪ್ರೆಸ್ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ.
– ಅಶೋಕ್ ಅಗರ್ವಾಲ್ – ಹೌದು ಸಾರ್.. ಅದು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಆಮೇಲೆ ಎಲ್ಲಾ ಕೋಚ್ಗಳು, ಲೋಕೋಗಳು ಚೆಲ್ಲಾಚೆದುರಾಗಿ ಬಿದ್ದವು. ಮತ್ತೊಂದು ಟ್ರ್ಯಾಕ್ ಮೇಲೆ ಬಿದ್ದ ಕೋಚ್ಗಳನ್ನು ಹೌರಾ ಎಕ್ಸ್ಪ್ರೆಸ್ ಡಿಕ್ಕಿ ಹೊಡೆಯಿತು.
ಹೀಗೆ ಸಾಗುತ್ತದೆ ಅಧಿಕಾರಿಗಳ ಸಂಭಾಷಣೆ
ರೈಲ್ವೇ ಇಲಾಖೆಯ ಪ್ರಾಥಮಿಕ ತನಿಖಾ ವರದಿಯಲ್ಲಿ ಏನಿದೆ
ರೈಲು ಅಪಘಾತಕ್ಕೆ ಸಿಗ್ನಲಿಂಗ್ ಮತ್ತು ಎಲೆಕ್ಟ್ರಾನಿಕ್ ಇಂಟರ್ಲಾಕ್ ಸಿಸ್ಟಮ್ ದೋಷ ಕಾರಣ.. ಲೋಕೋ ಪೈಲಟ್ ತಪ್ಪು ಇರುವಂತೆ ಕಾಣುತ್ತಿಲ್ಲ
ಇದೇ ಅಂತಿಮ ಎಂಬ ತೀರ್ಮಾನಕ್ಕೆ ರೈಲ್ವೇ ಇಲಾಖೆ ಬಂದಿಲ್ಲ. ತನಿಖೆ ನಡೆದಿದೆ. ಇಬ್ಬರು ಅಧಿಕಾರಿಗಳ ಸಂಭಾಷಣೆಗೆ ಪೂರಕ ಎಂಬಂತೆ, ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ವ್ಯವಸ್ಥೆ ಸರಿಯಾಗಿದ್ದರೂ, ಯಾರೋ ಟ್ಯಾಂಪರ್ ಮಾಡಿರಬಹುದು.. ಯಾರೋ ಕೋರಮಂಡಲ್ ಅನ್ನು ಲೂಪ್ಲೈನ್ಗೆ ಬರುವಂತೆ ಸಿಗ್ನಲ್ ಬದಲಿಸಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ವಿಧ್ವಂಸಕ ಕೃತ್ಯದ ಆಯಾಮದಲ್ಲೂ ರೈಲ್ವೇ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಸ್ಟೇಷನ್ ಮ್ಯಾನೇಜರ್ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಬಹನಾಗ್ ಸ್ಟೇಷನ್ ಮಾಸ್ಟರ್ ರೂಂ, ಸಿಗ್ನಲಿಂಗ್ ರೂಂ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದಾರೆ. ಸಿಬಿಐ ತನಿಖೆಗೆ ರೈಲ್ವೇ ಮಂಡಳಿ ಶಿಫಾರಸು ಮಾಡಿದೆ.