ಪ್ರವಾದಿ ಬಗ್ಗೆ ನೀಡಿದ್ದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಉತ್ತರ ಪ್ರದೇಶದ ಹಲವು ನಗರಗಳಲ್ಲಿ ಶುಕ್ರವಾರ ಪ್ರತಿಭಟನೆಗಳು ನಡೆದಿವೆ. ಈ ವೇಳೆ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಸಾರ್ವಜನಿಕ ಆಸ್ತಿಗೆ ಹಾನಿಯುಂಟು ಮಾಡಿ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ. ಈ ಹಿಂಸಾಚಾರದಲ್ಲಿ ಭಾಗಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು 227 ಜನರನ್ನು ಬಂಧಿಸಿದ್ದಾರೆ.
ಪ್ರಯಾಗ್ರಾಜ್ನಲ್ಲಿ 68 ಜನ, ಹತ್ರಾಸ್ನಲ್ಲಿ 50 ಜನ, ಮಂದಿಯನ್ನು ಸಹರಾನ್ಪುರದಲ್ಲಿ 48, ಅಂಬೇಡ್ಕರ್ನಗರದಲ್ಲಿ 28, ಮೊರಾದಾಬಾದ್ನಲ್ಲಿ 25 ಮತ್ತು ಫಿರೋಜಾಬಾದ್ನಲ್ಲಿ 8 ಜನರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಶನಿವಾರ ತಿಳಿಸಿದ್ದಾರೆ.
ರಾಜ್ಯದ ಶಾಂತಿ ಹಾಳು ಮಾಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದಾರೆ.
ಕಳೆದ ಮೇ 27ರಂದು ಖಾಸಗಿ ಸುದ್ದಿ ವಾಹಿನಿಯಲ್ಲಿ ಜ್ಞಾನವಾಪಿ ಮಸೀದಿ ಕುರಿತಾದ ಚರ್ಚೆಯಲ್ಲಿ ಅಮಾನತಾಗಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮಹಮ್ಮದ್ರ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.