ಮಹಿಳೆಯರು ಚಿಕ್ಕ ಚಿಕ್ಕ ವ್ಯಾಪಾರ ಮಾಡುತ್ತಾ ಸ್ವಾವಲಂಬಿಯಾಗಲು ಕೇಂದ್ರ ಸರ್ಕಾರ ಉದ್ಯೋಗಿನಿ ಯೋಜನೆ ಮೂಲಕ 3 ಲಕ್ಷ ರೂಪಾಯಿವರೆಗೂ ಸಾಲ ನೀಡುತ್ತದೆ. ಈ ಸಾಲದ ಹಣವನ್ನು ಬಳಸಿ ಮಹಿಳೆಯರು 88 ರೀತಿಯ ವ್ಯಾಪಾರ ಮಾಡಬಹುದು.
ಅಂದ ಹಾಗೇ, ಏನಿದು ಉದ್ಯೋಗಿನಿ ಯೋಜನೆ? ಈ ಯೋಜನೆಯಡಿ ಹೇಗೆ ಸಾಲ ಪಡೆಯಬಹುದು? ಇದಕ್ಕಿರುವ ನಿಯಮ, ನಿಬಂಧನೆಗಳು ಏನು? ಅರ್ಜಿ ಹೇಗೆ ಸಲ್ಲಿಸಬೇಕು? ಎನ್ನುವುದನ್ನು ನೋಡೋಣ.
ಏನಿದು ಉದ್ಯೋಗಿನಿ ಯೋಜನೆ?
ಕೇಂದ್ರ ಸರ್ಕಾರದ ಆತ್ಮನಿರ್ಭರ ಕಾರ್ಯಕ್ರಮದ ಗುರಿಗಳಲ್ಲಿ ಮಹಿಳೆಯ ಆರ್ಥಿಕ ಸ್ವಾವಲಂಬನೆ ಕೂಡ ಒಂದು. ಮಹಿಳೆಯರು ಉದ್ಯಮಿಗಳಾಗಿ, ವ್ಯಾಪಾರಿಗಳಾಗಿ ಬೆಳೆಯಲು ಅವಕಾಶ ನೀಡುವ ಯೋಜನೆಯೇ ಉದ್ಯೋಗಿನಿ.
ಈ ಯೋಜನೆಯನ್ನು ಮೊದಲಿಗೆ ನಮ್ಮ ರಾಜ್ಯದಲ್ಲಿಯೇ ಅನುಷ್ಠಾನ ಮಾಡಲಾಗಿತ್ತು. ನಂತರ ಕೇಂದ್ರ ಸರ್ಕಾರ ಇದನ್ನು ದೇಶಾದ್ಯಂತ ವಿಸ್ತರಿಸಿತು.
ಪ್ರಮುಖವಾಗಿ ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.
ಈವರೆಗೂ ಈ ಯೋಜನೆಯ ಲಾಭ ಪಡೆದ 48ಸಾವಿರ ಮಹಿಳೆಯರು ಉದ್ಯಮಿಗಳಾಗಿ, ವ್ಯಾಪಾರಿಗಳಾಗಿ ಬದಲಾಗಿದ್ದಾರೆ.
ಸಾಲದ ಮಿತಿ ಮೂರು ಲಕ್ಷ ರೂಪಾಯಿವರೆಗೂ ಅಷ್ಟೇನಾ?
ಅಲ್ಲ, ವಿಕಲಚೇತನ ಮಹಿಳೆಯರಿಗೆ, ವಿಧವೆಯವರಿಗೆ ಸಾಲ ಮಿತಿ ಇಲ್ಲ. ಅವರು ಮಾಡಲಿರುವ ವ್ಯಾಪಾರ, ಅವರ ಅರ್ಹತೆಯನ್ನು ಆಧರಿಸಿ ಹೆಚ್ಚು ಸಾಲ ನೀಡುತ್ತಾರೆ.
ಬಡ್ಡಿ ಎಷ್ಟು?
ವಿಕಲಚೇತನ ಮಹಿಳೆಯರಿಗೆ, ವಿಧವೆಯವರಿಗೆ, ದಲಿತ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ. ಉಳಿದ ವರ್ಗದ ಮಹಿಳೆಯರಿಗೆ ಶೇಕಡಾ 10ರಿಂದ 12ರಷ್ಟು ಬಡ್ಡಿ ಮೇಲೆ ಸಾಲ ನೀಡುತ್ತಾರೆ. ಬಡ್ಡಿಯ ಪ್ರಮಾಣ ಆ ಮಹಿಳೆ ಸಾಲ ಪಡೆಯುವ ಬ್ಯಾಂಕ್ ನಿಬಂಧನೆಗಳನ್ನು ಆಧರಿಸಿರುತ್ತದೆ.
ಸಾಲದಲ್ಲಿ ಸಬ್ಸಿಡಿ ಎಷ್ಟು?
ಕುಟುಂಬದ ವಾರ್ಷಿಕ ಆದಾಯವನ್ನು ಅನುಸರಿಸಿ ಶೇಕಡಾ 30ರವರೆಗೂ ಸಬ್ಸಿಡಿ ನೀಡಲಾಗುತ್ತದೆ.
ಸಾಲ ಪಡೆಯಲು ಯಾರು ಅರ್ಹರು?
18 ವರ್ಷದಿಂದ 55 ವರ್ಷದೊಳಗಿನ ಮಹಿಳೆಯರೆಲ್ಲರೂ ಉದ್ಯೋಗಿನಿ ಯೋಜನೆಗೆ ಅರ್ಹರು.
ಈ ಯೋಜನೆಯಡಿ ಅರ್ಜಿ ಸಲ್ಲಿಸಲುವವರ ಕ್ರೆಡಿಟ್ ಸ್ಕೋರ್, ಸಿವಿಲ್ ಸ್ಕೋರ್ ಉತ್ತಮವಾಗಿರಬೇಕು.
ಈ ಹಿಂದೆ ಯಾವುದಾದರೂ ಕಾರಣಕ್ಕೆ ಸಾಲ ಪಡೆದು ಸರಿಯಾಗಿ ಮರುಪಾವತಿ ಮಾಡದಿದ್ದಲ್ಲಿ ಸಾಲ ಸೌಲಭ್ಯ ಸಿಗಲ್ಲ.
ಏನೆಲ್ಲಾ ದಾಖಲೆ ನೀಡಬೇಕು?
* 2 ಪಾಸ್‌ಪೋರ್ಟ್ ಸೈಜ್ ಫೋಟೋಗಳ ಜೊತೆ ಅಗತ್ಯ ದಾಖಲೆಗಳು
* ಅರ್ಜಿ ಸಲ್ಲಿಸುವ ಮಹಿಳೆಯ ಆಧಾರ್ ಕಾರ್ಡ್, ಜನನ ದೃಢೀಕರಣ ಪತ್ರ
* ಬಡತನದ ರೇಖೆಗಿಂತ ಕೆಳಗಿದ್ದಲ್ಲಿ ಬಿಪಿಎಲ್, ಅಂತ್ಯೋದಯ ಕಾರ್ಡ್ ಪ್ರತಿ
* ಆದಾಯ ದೃಢೀಕರಣ ಪತ್ರ
* ವಾಸಸ್ಥಳ ದೃಢೀಕರಣ ಪತ್ರ
* ಜಾತಿ ದೃಢೀಕರಣ ಪತ್ರ
* ಬ್ಯಾಂಕ್ ಖಾತೆ ಪಾಸ್‌ಬುಕ್ ಪ್ರತಿ
ಯಾರನ್ನು ಸಂಪರ್ಕಿಸಬೇಕು?
ಉದ್ಯೋಗಿನಿ ಯೋಜನೆಯಡಿ ಸಾಲ ಪಡೆಯಲು ಮಹಿಳೆಯರು ತಮ್ಮ ಸಮೀಪದ ಬ್ಯಾಂಕ್ ಅನ್ನು ಸಂಪರ್ಕಿಸಬಹುದು.
ಬಜಾಜ್ ಫೈನಾನ್ಸ್‌ನಂತಹ ಖಾಸಗಿ ಹಣಕಾಸು ಸಂಸ್ಥೆಗಳು ಕೂಡ ಈ ಸಾಲ ಸೌಲಭ್ಯವನ್ನು ನೀಡುತ್ತವೆ.
ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಸಂಪರ್ಕಿಸಬಹುದು
ಉದ್ಯೋಗಿನಿ, ಡಿ-17, ಬೇಸ್‌ಮೆಂಟ್, ಸಾಕೇತ್, ನವದೆಹಲಿ-110017
ಫೋನ್ ನಂಬರ್ – 011-45781125
ಇಮೇಲ್ – mail.udyogini.org
ADVERTISEMENT
ADVERTISEMENT