ನಾಳೆಯಿಂದ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ಗಳ ಸಂಚಾರದಲ್ಲಿ ವ್ಯತ್ಯಯವಾದರೂ ಅಚ್ಚರಿಯೇನಿಲ್ಲ.
ಪ್ರತಿಭಟನಾನಿರತ ಸಾರಿಗೆ ಸಿಬ್ಬಂದಿ ಜೊತೆಗೆ ಸಾರಿಗೆ ಸಚಿವ ಶ್ರೀರಾಮುಲು ನಡೆಸಿರುವ ಸಂಧಾನ ವಿಫಲ ಆಗಿದೆ. ಈ ಮೂಲಕ ಸಾರಿಗೆ ಸಿಬ್ಬಂದಿ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ ಸುವರ್ಣ ಸೌಧದ ಬಸ್ತವಾಡ ಬಳಿ 30 ಮಂದಿಯಷ್ಟು ಸಾರಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬೇಡಿಕೆ ಈಡೇರದೇ ಇದ್ರೆ ನಾಳೆಯಿಂದ ಎಲ್ಲರೂ ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ಒಂದು ತಿಂಗಳಲ್ಲಿ ಬೇಡಿಕೆ ಈಡೇರಿಸ್ತೇವೆ ಎಂದು ಸಾರಿಗೆ ಸಚಿವರು ಹೇಳ್ತಾರೆ, ಆದ್ರೆ ನಾವು ಎರಡು ವರ್ಷದಿಂದ ಸಾಯುತ್ತಿದ್ದೇವೆ. ನಾಳೆಯಿಂದ ಅಧಿಕ ಸಂಖ್ಯೆಯಲ್ಲಿ ಸಾರಿಗೆ ಸಿಬ್ಬಂದು ಹೋರಾಟದಲ್ಲಿ ಪಾಲ್ಗೊಳ್ತಾರೆ
ಎಂದು ಕೆಎಸ್ಆರ್ಟಿಸಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೇಳಿದ್ದಾರೆ.
ವಜಾಗೊಂಡ ನೌಕರರನ್ನು ಮರು ನೇಮಕಾತಿ ಮಾಡ್ಬೇಕು. ಇಲ್ಲದಿದ್ರೆ ನಮ್ಮ ಕುಟುಂಬ ಬೀದಿ ಪಾಲಾಗುತ್ತದೆ
ಎಂದು ಚಂದ್ರಶೇಖರ್ ಹೇಳಿದ್ದಾರೆ.
ಇತ್ತ ಸಂಧಾನ ವಿಫಲವಾಗಿ ಸಚಿವ ರಾಮುಲು ಅವರು ವಾಪಸ್ ಹೋಗ್ತಿದ್ದಂತೆ ಸಾರಿಗೆ ಸಿಬ್ಬಂದಿ ಪ್ರತಿಭಟನೆ ಕೂತಿದ್ದ ಸ್ಥಳದಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸರು ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ್ದಾರೆ. ರಾತ್ರಿ ಹೊತ್ತು ಪುಟ್ಟ ಪುಟ್ಟ ಮಕ್ಕಳೊಂದಿಗೆ ಕುಟುಂಬ ಸಮೇತ ಸಿಬ್ಬಂದಿ ಪ್ರತಿಭಟನೆ ಮಾಡುತ್ತಿದ್ದಾರೆ.
ಒಂದು ಕಡೆ ವಿದ್ಯುತ್ ಅಲಂಕಾರದಿಂದ ಅಧಿವೇಶನ ನಡೆಯುತ್ತಿರುವ ಸುವರ್ಣಸೌಧ ಕಂಗೊಳಿಸುತ್ತಿದ್ದರೆ ಇತ್ತ ಸಾರಿಗೆ ನೌಕರರ ಪ್ರತಿಭಟನಾ ಸ್ಥಳದಲ್ಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಪ್ರತಿಭಟನೆ ಕೈಬಿಡುವಂತೆ ಒತ್ತಡ ಹೇರಲಾಗಿದೆ.
ADVERTISEMENT
ADVERTISEMENT