ಬ್ರಹ್ಮಶ್ರೀ ನಾರಾಯಣ ಗುರುಗಳ ಪಾಠವನ್ನು ಕನ್ನಡ ಭಾಷಾ ಪಠ್ಯದಿಂದ ಕೈಬಿಟ್ಟು, ಸಮಾಜ ವಿಜ್ಞಾನಿ ವಿಭಾಗಕ್ಕೆ ವರ್ಗಾವಣೆ ಮಾಡಲು ಶಿಕ್ಷಣ ಸಚಿವ ಬಿಸಿ ನಾಗೇಶ್ ಸೂಚಿಸಿದ್ದಾರೆ.
ಈ ಹಿಂದೆ ನಾರಾಯಣ ಗುರುಗಳ ಪಠ್ಯ ಕನ್ನಡ ಹಾಗೂ ಸಮಾಜ ವಿಜ್ಞಾನ ವಿಭಾಗದಲ್ಲಿ ಇದ್ದವು. ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣ ಸಮಿತಿ ಸಮಾಜ ವಿಜ್ಞಾನ ವಿಭಾಗದಲ್ಲಿ ಇದ್ದ ನಾರಾಯಣ ಗುರುಗಳ ಪಾಠ ಕೈಬಿಟ್ಟಿತ್ತು. ಈ ಬಗ್ಗೆ ಈಗಾಗಲೇ ಹಲವು ಜನ ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ ಸ್ವತಃ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನೀಲ್ ಕುಮಾರ್ ಅವರೇ ಆಕ್ಷೇಪ ವ್ಯಕ್ತಪಡಿಸಿ, ಕನ್ನಡ ವಿಭಾಗದಿಂದ ಸಮಾಜ ವಿಜ್ಞಾನ ವಿಭಾಗಕ್ಕೆ ನಾರಾಯಣ ಗುರುಗಳ ಪಾಠ ವರ್ಗಾವಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು.
ಈ ಬೆನ್ನಲ್ಲೇ, ಶಿಕ್ಷಣ ಸಚಿವರಾದ ಬಿಸಿ ನಾಗೇಶ್ ಅವರು ಆದೇಶ ಹೊರಡಿಸಿದ್ದಾರೆ. ಕನ್ನಡ ವಿಭಾಗದಲ್ಲಿದ್ದ ನಾರಾಯಣ ಗುರುಗಳ ಪಾಠ ಕೈಬಿಟ್ಟು. ಈ ಹಿಂದೆ ಸಾಮಾಜ ವಿಜ್ಞಾನ ವಿಭಾಗದಲ್ಲಿದ್ದ ಪಾಠವನ್ನು ಮುಂದುವರೆಸಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.
ರೋಹಿತ್ ಚಕ್ರತೀರ್ಥ ನೇತೃತ್ವ ಪಠ್ಯ ಪರಿಷ್ಕರಣಾ ಸಮಿತಿ ರಚಿಸಿದ ಪಠ್ಯ ಸಾರ್ವಜನಿವಾಗಿ ಬಿಡುಗಡೆಯಾದ ನಂತರ ಸಾಕಷ್ಟು ವಿವಾದಗಳು ಹೊರಬಂದಿದ್ದವು. ಈ ಸಮಿತಿಯನ್ನು ತಕ್ಷಣವೇ ರದ್ದು ಮಾಡಿ ಈ ಸಮಿತಿ ರಚಿಸಿದ್ದ ಪಠ್ಯಪುಸ್ತಕ ವಾಪಾಸ್ ಪಡೆಯಬೇಕೆಂದು ಹಲವು ಸಂಘಟನೆಗಳು ಹೋರಾಟ ನಡೆಸಿದ್ದವು.
ಹೋರಾಟಕ್ಕೆ ಮಣಿದಿದ್ದ ರಾಜ್ಯ ಸರ್ಕಾರ ಪಠ್ಯಪುಸ್ತಕದಲ್ಲಿದ್ದ ಹಲವು ತಪ್ಪುಗಳ ಟಿಪ್ಪಣಿ ಮಾಡಿ ಪ್ರತ್ಯೇಕವಾಗಿ ಮುದ್ರಿಸಿ ಹಂಚಲು ಸೂಚನೆ ನೀಡಿತ್ತು. ಈಗಾಗಲೇ ಈ ಸೂಚನೆ ನೀಡಿ ಒಂದು ತಿಂಗಳು ಕಳೆಯುತ್ತಾ ಬಂದಿದೆ. ಪ್ರತ್ಯೇಕ ಟಿಪ್ಪಣಿಯನ್ನೂ ಬಹುತೇಕ ಮುದ್ರಿಸಲಾಗಿದೆ. ಇದೀಗ, ಈ ಹಿಂದೆ ಇದ್ದ ಸಮಾಜ ವಿಜ್ಞಾನ ವಿಭಾಗದ ನಾರಾಯಣ ಗುರುಗಳ ಪಠ್ಯವನ್ನು ಮತ್ತೊಂದು ಪ್ರತ್ಯೇಕ ಟಿಪ್ಪಣಿಯಲ್ಲಿ ಮುದ್ರಿಸಿ ಹಂಚಲಾಗುತ್ತದೆಯೇ..? ಎನ್ನುವ ಬಗ್ಗೆ ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಬೇಕಿದೆ.