BREAKING: ಹಿಜಾಬ್​ ವಿವಾದ – ಸುಪ್ರೀಂಕೋರ್ಟ್​ನಿಂದ ಭಿನ್ನ ತೀರ್ಪು -ತ್ರಿ ಸದಸ್ಯ ಪೀಠಕ್ಕೆ ಪ್ರಕರಣ ವರ್ಗ

Hijab Row case

ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್​ ಧರಿಸಿ ಹೋಗಬಹುದೇ ಎಂಬ ಬಗ್ಗೆ ನ್ಯಾಯಮೂರ್ತಿ ಹೇಮಂತ್​ ಗುಪ್ತಾ ಮತ್ತು ನ್ಯಾಯಮೂರ್ತಿ ಸುಧಾನ್ಶು ಧುಲಿಯಾ ಅವರಿದ್ದ ಸುಪ್ರಿಂಕೋರ್ಟ್​ ಪೀಠ ಭಿನ್ನ ತೀರ್ಪು ನೀಡಿದೆ.

ಇಬ್ಬರೂ ನ್ಯಾಯಮೂರ್ತಿಗಳು ಪ್ರತ್ಯೇಕ ತೀರ್ಪು ನೀಡಿದ್ದಾರೆ.

ಮೇಲ್ಮನವಿ ವಜಾ:

ನ್ಯಾಯಮೂರ್ತಿ ಹೇಮಂತ್​ ಗುಪ್ತಾ ಅವರು ತಮ್ಮ ತೀರ್ಪಿನಲ್ಲಿ ಕರ್ನಾಟಕ ಹೈಕೋರ್ಟ್​ ನೀಡಿದ್ದ ತೀರ್ಪನ್ನು ಎತ್ತಿಹಿಡಿದು ಹೈಕೋರ್ಟ್​ ತೀರ್ಪಿನ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ್ದಾರೆ. ಹಿಜಾಬ್​ ಧರಿಸುವುದು ಇಸ್ಲಾಂನ ಅವಿಭಾಜ್ಯ ಆಚರಣೆ ಅಲ್ಲ ಎಂದು ಗುಪ್ತಾ ಅವರು ತೀರ್ಪಿನಲ್ಲಿ ಹೇಳಿದ್ದಾರೆ.

ಹಿಜಾಬ್​ ನಿಷೇಧ ಸರಿಯಲ್ಲ:

ನ್ಯಾಯಮೂರ್ತಿ ಸುಧಾನ್ಶು ಧುಲಿಯಾ ಅವರು ತಮ್ಮ ತೀರ್ಪಿನಲ್ಲಿ ಕರ್ನಾಟಕ ಹೈಕೋರ್ಟ್​ ಹೇರಿದ್ದ ಹಿಜಾಬ್​ ನಿಷೇಧವನ್ನು ವಜಾಗೊಳಿಸಿದ್ದಾರೆ. ಈ ಮೂಲಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್​ ಧರಿಸಿ ಹೋಗಬಹುದು ಎಂದು ತೀರ್ಪು ನೀಡಿದ್ದಾರೆ.

ಹಿಜಾಬ್​ ಧರಿಸಿ ಹೋಗುವುದು ಅರ್ಜಿದಾರರ ಆಯ್ಕೆಗೆ ಬಿಟ್ಟಿದ್ದು. ಹೆಣ್ಣು ಮಕ್ಕಳ ಶಿಕ್ಷಣ ಎಲ್ಲಕ್ಕಿಂತಲೂ ಮುಖ್ಯ ಎಂದು ಸುಧಾನ್ಶು ಧುಲಿಯಾ ಅವರು ತೀರ್ಪಿನಲ್ಲಿ ಹೇಳಿದ್ದಾರೆ.

ತ್ರಿಸದಸ್ಯ ಪೀಠಕ್ಕೆ ವರ್ಗ:

ಇಬ್ಬರೂ ನ್ಯಾಯಮೂರ್ತಿಗಳು ಭಿನ್ನ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಪ್ರಕರಣ ಈಗ ಸುಪ್ರೀಂಕೋರ್ಟ್​ನ ತ್ರಿಸದಸ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾ ಆಗಲಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಈಗ ಸುಪ್ರೀಂಕೋರ್ಟ್​​ ಮುಖ್ಯ ನ್ಯಾಯಮೂರ್ತಿಗಳ ಪೀಠದ ಮುಂದೆ ಇಡಲಾಗುತ್ತದೆ. ಸಿಜೆಐ ಅವರು ಹಿಜಾಬ್​ ಪ್ರಕರಣದ ವಿಚಾರಣೆ ಸಂಬಂಧ ಮೂವರು ನ್ಯಾಯಮೂರ್ತಿಗಳ ಪೀಠ ರಚಿಸಬೇಕು ಎಂದು ತೀರ್ಪಿನಲ್ಲಿ ಕೋರಲಾಗಿದೆ.