ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಪ್ರಾದೇಶಿಕ ನ್ಯಾಯ-ಸಾಮಾಜಿಕ ನ್ಯಾಯ

ಜಾತಿವಾರು ಮತ್ತು ಪ್ರಾದೇಶಿಕ ಪ್ರಾತಿನಿಧ್ಯದ ಜತೆಗೆ ಸಾಮಾಜಿಕ ನ್ಯಾಯದ ಮಾನದಂಡದಲ್ಲಿ ಹಿರಿಯ ಹಾಗೂ ಕಿರಿಯ ಶಾಸಕರುಗಳನ್ನು ಸಚಿವ ಸಂಪುಟಕ್ಕೆ ಆಯ್ಕೆ ಮಾಡಿಕೊಳ್ಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮತೋಲನ ಮೆರೆದಿದ್ದಾರೆ.

ಲಿಂಗಾಯತ ಸಮುದಾಯಕ್ಕೆ ಏಳು ಸಚಿವ ಸ್ಥಾನ

 ಲಿಂಗಾಯತ ಸಮುದಾಯಕ್ಕೆ ಒಟ್ಟು ಏಳು ಸಚಿವ ಸ್ಥಾನ ನೀಡಲಾಗಿದ್ದು ಈ ಸಮುದಾಯದ ಬಹುತೇಕ ಎಲ್ಲಾ ಪ್ರಮುಖ ಒಳಪಂಗಡಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.

ಬಣಜಿಗರಲ್ಲಿ ಈಶ್ವರ್ ಖಂಡ್ರೆ, ಪಂಚಮಸಾಲಿಗಳಲ್ಲಿ ಲಕ್ಷ್ಮೀ ಹೆಬ್ಬಾಳ್‌ಕರ್ ಮತ್ತು ಶಿವಾನಂದ ಪಾಟೀಲ್, ಕುರು ಒಕ್ಕಲಿಗರಲ್ಲಿ ಎಂ.ಬಿ.ಪಾಟೀಲ್, ಸಾದ ಲಿಂಗಾಯತರಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್, ಆದಿ ಬಣಜಿಗರಲ್ಲಿ ಶರಣ ಪ್ರಕಾಶ ಪಾಟೀಲ್ ರೆಡ್ಡಿಲಿಂಗಾಯತರಲ್ಲಿ ದರ್ಶನಾಪುರ ಮತ್ತು ವೈಷ್ಣವ ರೆಡ್ಡಿಯ ಪ್ರತಿನಿಧಿಯಾಗಿ ಹೆಚ್.ಕೆ.ಪಾಟೀಲ್ ಅವರಿಗೆ ಪ್ರಾತಿನಿಧ್ಯ ದೊರೆತಿದೆ.

ಒಕ್ಕಲಿಗ ಸಮುದಾಯದ ಐವರಿಗೆ ಮಂತ್ರಿಗಿರಿ

ಒಕ್ಕಲಿಗರಲ್ಲಿ ಗಂಗಟಕಾರ್ ಒಕ್ಕಲಿಗರಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಚೆಲುವರಾಯಸ್ವಾಮಿ ಅವರುಗಳು ಇದ್ದಾರೆ. ಪಿರಿಯಾಪಟ್ಟಣ ವೆಂಕಟೇಶ್ ಕುಂಚಟಿಗರು, ದಾಸ ಒಕ್ಕಲಿಗರಲ್ಲಿ ಕೃಷ್ಣ ಬೈರೇಗೌಡ ಸೇರಿ ನಾಲ್ಕು ಮಂದಿಗೆ ಪ್ರಾತಿನಿಧ್ಯ ದೊರೆತಿದೆ.

ದಲಿತ ಸಮುದಾಯಕ್ಕೆ ಬರೋಬ್ಬರಿ 9 ಸಚಿವ ಸ್ಥಾನ

ದಲಿತ ಸಮುದಾಯಕ್ಕೆ ಬರೋಬ್ಬರಿ 9 ಸಚಿವ ಸ್ಥಾನ ಲಭಿಸಿದ್ದು ಕೆಹೆಚ್ ಮುನಿಯಪ್ಪ, ಜಿ.ಪರಮೇಶ್ವರ್, ಹೆಚ್ ಸಿ ಮಹದೇವಪ್ಪ, ಆರ್​ಬಿ ತಿಮ್ಮಾಪುರ ಮತ್ತು ಪ್ರಿಯಾಂಕ್ ಖರ್ಗೆ ಅವರುಗಳು ಪರಿಶಿಷ್ಟ ಜಾತಿ ಖೋಟಾದಲ್ಲಿ ಸಚಿವರಾಗಿದ್ದಾರೆ. ಎಡಗೈ ಮತ್ತು ಬಲಗೈ ಸಮುದಾಯಗಳನ್ನು ಸರಿದೂಗಿಸಲಾಗಿದೆ.

ಪರಿಶಿಷ್ಟ ಪಂಗಡದ ಪ್ರತಿನಿಧಿಗಳಾಗಿ ನಾಗೇಂದ್ರ, ಮಧುಗಿರಿ ರಾಜಣ್ಣ, ಸತೀಶ್ ಜಾರಕಿಹೊಳಿ ಅವರಿಗೆ ಅವಕಾಶ ದೊರೆತಿದೆ.

ವಿಧಾನ ಪರಿಷತ್ ಮುಖ್ಯ ಸಚೇತಕರಾಗಿರುವ ಪ್ರಕಾಶ್ ರಾಥೋಡ್ ಕೂಡ ಬಂಜಾರ ಸಮುದಾಯದವರು.

ಹಿಂದುಳಿದ ಜಾತಿಗಳಿಗೆ ಆದ್ಯತೆ

ಹಿಂದುಳಿದ ಜಾತಿಗಳಲ್ಲಿ ಅತ್ಯಂತ ಸಣ್ಣ ಸಮುದಾಯ ರಜಪೂತರಾದ ಅಜಯ್‌ಸಿಂಗ್, ರಾಜು ಕ್ಷತ್ರಿಯ ಸಮುದಾಯದ ಬೋಸರಾಜು, ಅತ್ಯಂತ ಸಣ್ಣ ಹಿಂದುಳಿದ ಸಮುದಾಯಗಳಲ್ಲಿ ಒಂದಾದ ಬೆಸ್ತ ಸಮುದಾಯದ ಮಾಂಕಾಳ ವೈದ್ಯ, ಮರಾಠ ಸಮಾಜದಿಂದ ಸಂತೋಷ್ ಲಾಡ್ ಇದ್ದಾರೆ.

ಕುರುಬ ಸಮುದಾಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಬೈರತಿ ಸುರೇಶ್ ಅವರಿಗೆ ಮಾತ್ರ ಸಂಪುಟದೊಳಗೆ ಪ್ರವೇಶ ದೊರೆತಿದೆ. ಬಿಲ್ಲವ ಸಮುದಾಯದಿಂದ ಮಧು ಬಂಗಾರಪ್ಪ ಇದ್ದಾರೆ.

ಮುಸ್ಲಿಂ ಸಮುದಾಯದಿಂದ ಜಮೀರ್ ಅಹಮದ್ ಖಾನ್, ರಹೀಂ ಖಾನ್ ಇಬ್ಬರು ಸಚಿವರಾಗಿದ್ದರೆ, ಯು.ಟಿ.ಖಾದರ್ ಸ್ಪೀಕರ್ ಆಗಿದ್ದಾರೆ.

ಕ್ರೈಸ್ತ ಸಮುದಾಯದಿಂದ ಕೆ.ಜೆ.ಜಾರ್ಜ್ ಅವರಿಗೆ ಸಚಿವ ಸ್ಥಾನ ಒಲಿದಿದೆ. ಜೈನ ಸಮುದಾಯದಿಂದ ಡಿ.ಸುಧಾಕರ್ ಹಾಗೂ ಬ್ರಾಹ್ಮಣ ಸಮುದಾಯದ ಪ್ರತಿನಿಧಿಯಾಗಿ ದಿನೇಶ್ ಗುಂಡೂರಾವ್ ಅವರಿಗೆ ಸಚಿವ ಸ್ಥಾನ ದೊರಕಿದೆ. ಹೀಗೆ ಜಾತಿ, ಉಪ ಜಾತಿಗಳನ್ನೂ ವೈಜ್ಞಾನಿಕವಾಗಿ ಪರಿಗಣಿಸಲಾಗಿದೆ.

ಪ್ರಾದೇಶಿಕ ನ್ಯಾಯ ಸಮತೋಲನ

ಸಚಿವರ ಆಯ್ಕೆಯಲ್ಲಿ ಸಾಮಾಜಿಕ ನ್ಯಾಯವನ್ನು ಪಾಲಿಸುವಾಗ ಪ್ರಾದೇಶಿಕ ನ್ಯಾಯ ಸಮತೋಲನ ತಪ್ಪದಂತೆಯೂ ಎಚ್ಚರ ವಹಿಸಿರುವುದು ಸಿದ್ದರಾಮಯ್ಯ ಅವರ ಆಯ್ಕೆ ಸಮತೂಕದಲ್ಲಿದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ.

ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೂ ಪ್ರಾತಿನಿಧ್ಯ ದೊರೆತಿದೆ. ಮಲೆನಾಡು, ಕರಾವಳಿ ಕರ್ನಾಟಕ ಮತ್ತು ಮೈಸೂರು ಕರ್ನಾಟಕ ಹಾಗೂ ಮಧ್ಯ ಕರ್ನಾಟಕಕ್ಕೆ ಸಿಕ್ಕಿರುವ ಪ್ರಾತಿನಿಧ್ಯ ಜಾತಿವಾರು ಲೆಕ್ಕಾಚಾರಗಳನ್ನೂ ಸರಿದೂಗಿಸಿದೆ.

ಹಿಂದಿನ ಬಿಜೆಪಿ ಅವಧಿಯಲ್ಲಿ ಬಿಜೆಪಿ ಜಾತಿವಾರು ಪ್ರಾತಿನಿಧ್ಯವನ್ನು ಕಡೆಗಣಿಸಿದ್ದ ಅಸಮಾಧಾನ ಹಲವು ಸಮುದಾಯಗಳಲ್ಲಿ ಹೆಪ್ಪುಗಟ್ಟಿತ್ತು. ಹಾಲಿ ಸಿದ್ದರಾಮಯ್ಯ ಅವರ ಆಯ್ಕೆ ಜಾತಿ ಲೆಕ್ಕಾಚಾರ ಮತ್ತು ಚುನಾಯಿತ ಶಾಸಕರ ಲೆಕ್ಕದಲ್ಲೂ ಸಾಮಾಜಿಕ ನ್ಯಾಯವನ್ನು ಕಾಪಾಡಿಕೊಂಡಿದೆ.