BIG EXCLUSIVE: ಕೋಲಾರದಿಂದಲೂ ಸಿದ್ದರಾಮಯ್ಯ ಸ್ಪರ್ಧೆ

ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೋಲಾರದಿಂದಲೂ ಸ್ಪರ್ಧೆ ಮಾಡಲಿದ್ದಾರೆ.

ಮೂಲಗಳ ಮಾಹಿತಿ ಪ್ರಕಾರ ಈ ಬಾರಿಯೂ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ.

ಕೋಲಾರದಿಂದ ಸ್ಪರ್ಧೆ ಮಾಡುವ ಬಗ್ಗೆ ಮರು ಯೋಚನೆ ಮಾಡುವಂತೆ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸಲಹೆ ನೀಡಿದ್ದು ಕರ್ನಾಟಕ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು.

ಕೋಲಾರದಿಂದಲೂ ಸ್ಪರ್ಧೆ:

ಸಿದ್ದರಾಮಯ್ಯನವರು ಕೋಲಾರ ವಿಧಾನಸಭಾ ಚುನಾವಣಾ ಕಣದಿಂದ ಹಿಂದೆ ಸರಿಯುವ ಸಾಧ್ಯತೆ ಇಲ್ಲ.

ಮೂಲಗಳ ಪ್ರಕಾರ ಕೋಲಾರದಿಂದ ಕಣಕ್ಕಿಳಿಯುವ ವಿಷಯದಲ್ಲಿ ಮಾಜಿ ಮುಖ್ಯಮಂತ್ರಿ ದೃಢವಾಗಿದ್ದಾರೆ.

ಸಮೀಕ್ಷೆಗಳಲ್ಲೂ ಸಿದ್ದರಾಮಯ್ಯಗೆ ಮುನ್ನಡೆ:

ಸಿದ್ದರಾಮಯ್ಯ ಅವರ ತಂಡ ನಡೆಸಿರುವ ಚುನಾವಣಾ ಸಮೀಕ್ಷೆ, ಕಾಂಗ್ರೆಸ್​ ನಡೆಸಿರುವ ಚುನಾವಣಾ ಸಮೀಕ್ಷೆ ಮತ್ತು ಜೆಡಿಎಸ್​ ನಡೆಸಿರುವ ಚುನಾವಣಾ ಸಮೀಕ್ಷೆಗಳಲ್ಲೂ ಸಿದ್ದರಾಮಯ್ಯ ಅವರಿಗೆ ಮುನ್ನಡೆ ಇದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕೋಲಾರದಿಂದಲೇ ಅಖಾಡಕ್ಕಿಳಿಯುವುದು ನಿಶ್ಚಿತ.

ಕೋಲಾರದಿಂದ ಸ್ಪರ್ಧೆಗೆ ಸಲಹೆ ಕೊಟ್ಟಿದ್ದೇ ಕಾಂಗ್ರೆಸ್​ ಚುನಾವಣಾ ತಜ್ಞ:

ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ಒಳ್ಳೆಯದು ಎಂಬ ಸಲಹೆ ಕೊಟ್ಟಿದ್ದು ಕಾಂಗ್ರೆಸ್​ ಚುನಾವಣಾ ರಣತಂತ್ರಗಳನ್ನು ನೋಡಿಕೊಳ್ಳುತ್ತಿರುವ ಸುನಿಲ್​ ಕನಗೋಲು.

ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಪಕ್ಷಕ್ಕೆ ಸಹಕಾರಿಯಾಗಲಿದೆ ಮತ್ತು ಕೋಲಾರಕ್ಕೆ ಸಿದ್ದರಾಮಯ್ಯ ನಿರಂತರವಾಗಿ ಭೇಟಿ ನೀಡಬೇಕು ಎಂಬ ಸಲಹೆಯನ್ನೂ ನೀಡಿದ್ದರು.

ಕೋಲಾರ ಕಣದಿಂದ ಹಿಂದೆ ಸರಿಯಲ್ಲ ಸಿದ್ದರಾಮಯ್ಯ: ಕಾರಣಗಳು

ಒಂದು ವೇಳೆ ಸಿದ್ದರಾಮಯ್ಯ ಅವರು ಕೋಲಾರ ಕಣದಿಂದ ಹಿಂದೆ ಸರಿದರೆ ಅದು ವೈಯಕ್ತಿಕವಾಗಿ ಸಿದ್ದರಾಮಯ್ಯನವರಿಗೆ ಮತ್ತು ಪಕ್ಷಕ್ಕೆ ಚುನಾವಣಾ ಹಿನ್ನಡೆ ಉಂಟು ಮಾಡುವುದು ಖಚಿತ.

ಸೋಲಿನ ಭೀತಿಯಲ್ಲಿ ಕೋಲಾರದಿಂದ ಹಿಂದೆ ಸರಿದರು ಎಂಬ ಟೀಕೆಯನ್ನು ಬಿಜೆಪಿ ಮತ್ತು ಜೆಡಿಎಸ್​ ಕಡೆಯಿಂದ ಚುನಾವಣೆ ಮುಗಿಯುವವರೆಗೂ ಎದುರಿಸಬೇಕಾಗುತ್ತದೆ.

ಕಾಂಗ್ರೆಸ್​ ಗೆದ್ದರೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಬಹುದು ಎಂಬ ನಿರೀಕ್ಷೆಗಳಿರುವಾಗ ಪಕ್ಷದ ನಾಯಕನೇ ಸೋಲಿನ ಭೀತಿಯಲ್ಲಿ ಚುನಾವಣೆಗೆ ನಿಲ್ಲುವುದಾಗಿ ಘೋಷಿಸಿರುವ ಕ್ಷೇತ್ರದಿಂದ ಹಿಂದೆ ಸರಿದರೆ 224 ಕ್ಷೇತ್ರಗಳಲ್ಲೂ ಪಕ್ಷದ ಪರ ಜನಾಭಿಪ್ರಾಯಕ್ಕೆ ಹೊಡೆತ ಬೀಳುವುದು ನಿಶ್ಚಿತ.

ಕೋಲಾರದಲ್ಲಿ ಅಹಿಂದ ಮತಗಳ ಕ್ರೋಢೀಕರಣದಿಂದ ಸಿದ್ದರಾಮಯ್ಯನವರು ಗೆಲ್ಲಲಿದ್ದಾರೆ ಎಂದು ಸಿದ್ದರಾಮಯ್ಯನವರ ಕಡೆಯವರ ವಾದ. ಒಂದು ವೇಳೆ ಕ್ಷೇತ್ರದಿಂದ ಹಿಂದೆ ಸರಿದರೆ ಈಗ ಅಹಿಂದ ಮತ ಕ್ರೋಢೀಕರಣದ ಬಗ್ಗೆ ಕಾಂಗ್ರೆಸ್​ ಪಕ್ಷವೇ ತಾನಾಗಿಯೇ ಅನುಮಾನ ಹುಟ್ಟಿಸಿದಂತಾಗುತ್ತದೆ.

ಕೋಲಾರದಿಂದಲೂ ಸ್ಪರ್ಧೆ ಲೆಕ್ಕಾಚಾರ:

ಕೋಲಾರದಿಂದಲೂ ಸ್ಪರ್ಧೆಗೆ ಸಿದ್ದರಾಮಯ್ಯ ದೃಢ ನಿಶ್ವಯ ಮಾಡಿದ್ದಾರೆ. ಸೋಲಿನ ಭೀತಿಯಿಂದ ನಾನು ಹಿಂದೆ ಸರಿದಿಲ್ಲ, ಈ ಬಾರಿ ಕೋಲಾರದಲ್ಲಿ ಗೆಲ್ಲುವುದು ನಾನೇ ಎಂಬ ಸಂದೇಶ ಕೊಡುವುದು ಮೂಲಕ ಹೈಕಮಾಂಡ್​ ಸಲಹೆಯ ಕಾರಣದಿಂದ ವರ್ಚಸ್ಸಿಗೆ ಆಗಿರುವ ಘಾಸಿಯನ್ನು ಸರಿಪಡಿಸಿಕೊಳ್ಳುವುದು ಸಿದ್ದರಾಮಯ್ಯನವರಿಗೆ ಅನಿವಾರ್ಯ.

ಕೋಲಾರದಲ್ಲಿ ಸೋಲೋ ಗೆಲುವೋ ಎನ್ನುವುದಕ್ಕಿಂತಲೂ ಹೆಚ್ಚಾಗಿ ಸಿದ್ದರಾಮಯ್ಯನವರೇ ತಾವೇ ಘೋಷಿಸಿಕೊಂಡ ಕ್ಷೇತ್ರದಲ್ಲಿ ಸ್ಪರ್ಧಿಸ್ತಾರೋ..? ಇಲ್ಲವೋ ಎನ್ನುವುದು ಮುಖ್ಯ.

ಕೋಲಾರದಿಂದಲೂ ಸ್ಪರ್ಧೆ ಮಾಡುವ ಮೂಲಕ ತಮ್ಮ ಕಾರಣದಿಂದ ಅಹಿಂದ ಮತಗಳು ಕಾಂಗ್ರೆಸ್​ನತ್ತ ವಾಲಿವೆ ಎಂಬ ಸಂದೇಶವನ್ನೂ ಉಳಿದ 223 ಕ್ಷೇತ್ರಗಳಿಗೆ ರವಾನಿಸುವುದು ಸಿದ್ದರಾಮಯ್ಯನವರಿಗೂ ಅನಿವಾರ್ಯ, ಕಾಂಗ್ರೆಸ್ಸಿಗೂ ಅನಿವಾರ್ಯ.

ಎರಡು ಕ್ಷೇತ್ರ ಲೆಕ್ಕಾಚಾರ:

ಕೋಲಾರದಿಂದಲೂ ಸ್ಪರ್ಧೆ ಮಾಡಲಿರುವ ಸಿದ್ದರಾಮಯ್ಯನವರು ವರುಣಾದಲ್ಲೂ ಸ್ಪರ್ಧೆ ಮಾಡಲಿದ್ದಾರೆ.

ವರುಣಾದಲ್ಲಿ ತಾವೇ ಸ್ಪರ್ಧೆ ಮಾಡಿದ್ದಾರೆ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯ ಏನಾಗಬಹುದು ಎನ್ನುವುದು ಸಿದ್ದರಾಮಯ್ಯನವರ ಆತಂಕ.

ಕೋಲಾರದಲ್ಲಿ ಸ್ಪರ್ಧೆ ಮಾಡುವುದು ಬೇಡ ಎಂಬ ಹೈಕಮಾಂಡ್​​ ಸಲಹೆ ತಮಗೆ ಮುಜುಗರ ತಂದೊಡಿದ್ದು ಮತ್ತು ಪುತ್ರನ ರಾಜಕೀಯ ಭವಿಷ್ಯ ಏನಾಗಬಹುದು ಎಂಬ ಆತಂಕ 

ಮೂಲಗಳ ಪ್ರಕಾರ ತಂದೆಗೆ ಕ್ಷೇತ್ರ ಬಿಟ್ಟುಕೊಟ್ಟರೆ ಯತೀಂದ್ರ ಅವರಿಗೆ ರಾಜಕೀಯ ಭವಿಷ್ಯದ ಖಾತ್ರಿಯನ್ನು ಸಿದ್ದರಾಮಯ್ಯನವರಿಗೆ ಹೈಕಮಾಂಡ್​ ಕೊಟ್ಟಿದೆಯಂತೆ.

ಒಂದು ವೇಳೆ ಕೋಲಾರ ಮತ್ತು ವರುಣಾ ಎರಡೂ ಕ್ಷೇತ್ರ ಗೆದ್ದರೆ ಆಗ ವರುಣಾವನ್ನು ಪುತ್ರ ಯತೀಂದ್ರಗೆ ಬಿಟ್ಟುಕೊಡಬಹುದಲ್ಲ ಎಂಬ ಬಗ್ಗೆಯೂ ಚರ್ಚೆಯಾಗಿದೆ.

LEAVE A REPLY

Please enter your comment!
Please enter your name here