ನಾಳೆ ಮಧ್ಯಾಹ್ನ 12.30ಕ್ಕೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಮತ್ತು 28 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಐತಿಹಾಸಿಕ ಎಂದು ಕಾಂಗ್ರೆಸ್ಸೇ ಹೇಳಿರುವ ಪ್ರಮಾಣವಚನಕ್ಕೆ ಕಾಂಗ್ರೆಸ್ ಕೆಲವು ನಾಯಕರಿಗೆ ಆಹ್ವಾನವನ್ನೇ ಕೊಟ್ಟಿಲ್ಲ.
ರಾಷ್ಟ್ರೀಯ ರಾಜಕೀಯ ಸಂದೇಶ ಬೀರಬಹುದಾದ ಈ ಕಾರ್ಯಕ್ರಮಕ್ಕೆ ಆಹ್ವಾನ ಪಡೆಯದ ನಾಯಕರು:
ಪಿಣರಾಯ್ ವಿಜಯನ್ – ಕೇರಳ ಮುಖ್ಯಮಂತ್ರಿ
ನವೀನ್ ಪಟ್ನಾಯಕ್ – ಒಡಿಶಾ ಮುಖ್ಯಮಂತ್ರಿ, ಬಿಜು ಜನತಾ ದಳ ನಾಯಕ
ಮಾಯಾವತಿ – ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ, ಬಹುಜನ ಸಮಾಜ ಪಕ್ಷದ ನಾಯಕಿ
ಅರವಿಂದ್ ಕೇಜ್ರಿವಾಲ್ – ದೆಹಲಿ ಸಿಎಂ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ
ಕೆ ಚಂದ್ರಶೇಖರ್ ರಾವ್ – ತೆಲಂಗಾಣ ಸಿಎಂ, ಬಿಆರ್ಎಸ್ ಮುಖ್ಯಸ್ಥ
ಜಗನ್ಮೋಹನ್ ರೆಡ್ಡಿ – ಆಂಧ್ರ ಮುಖ್ಯಮಂತ್ರಿ ಮತ್ತು ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ
ವಿಶೇಷ ಎಂದರೆ 2018ರಲ್ಲಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ರಚನೆಯಾದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ, ಮಾಯಾವತಿ ಭಾಗವಹಿಸಿದ್ದರು. ಮಾಯಾವತಿ ಮತ್ತು ಸೋನಿಯಾ ಗಾಂಧಿ ಕೈ ಕೈ ಹಿಡಿದು ಮೇಲಕ್ಕೆತ್ತಿದ್ದರು.
ಮಮತಾ ಬ್ಯಾನರ್ಜಿ ಬರುತ್ತಿಲ್ಲ:
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಆಹ್ವಾನ ನೀಡಲಾಗಿದೆಯಾದರೂ ಅವರು ಸಿದ್ದರಾಮಯ್ಯ ಅವರ ಪ್ರಮಾಣವಚನಕ್ಕೆ ಬರುತ್ತಿಲ್ಲ ಅಥವಾ ತಮ್ಮ ಪ್ರತಿನಿಧಿಗಳಾಗಿ ಯಾರನ್ನೂ ಕಳುಹಿಸಿಕೊಡುತ್ತಿಲ್ಲ.
ಒಂದು ವೇಳೆ ತಾವೇ ಖುದ್ದಾಗಿ ಸಮಾರಂಭಕ್ಕೆ ಹಾಜರಾದರೆ ಅಥವಾ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ರಾಷ್ಟ್ರೀಯ ಮಹತ್ವ ಕೊಟ್ಟಂತ್ತಾಗುತ್ತದೆ ಎನ್ನುವುದು ಮಮತಾ ಅವರ ಆಲೋಚನೆ. ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಟಿಎಂಸಿಗೆ ಎಡಪಕ್ಷಗಳು ಮತ್ತು ಕಾಂಗ್ರೆಸ್ ಮೈತ್ರಿ ಟಕ್ಕರ್ ಕೊಡುತ್ತಿದೆ.
ಉತ್ತರಪ್ರದೇಶದಲ್ಲಿ ಬಹುಜನಸಮಾಜ ಪಕ್ಷದ ಬದ್ಧ ಎದುರಾಳಿ ಆಗಿರುವ ಸಮಾಜವಾದಿ ಪಕ್ಷದ ಜೊತೆಗೆ ಈ ಹಿಂದೆ ಕಾಂಗ್ರೆಸ್ ಚುನಾವಣಾ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮತ್ತು ಮಾಯಾವತಿ ಅವರು ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಕಾರಣರಾದರು ಎಂಬ ಕಾರಣಕ್ಕೆ ಅವರಿಗೂ ಕಾಂಗ್ರೆಸ್ ಆಹ್ವಾನ ನೀಡಿಲ್ಲ.
ದೆಹಲಿ ವಿಧಾನಸಭಾ ಚುನಾವಣೆ, ದೆಹಲಿ ಪಾಲಿಕೆ ಚುನಾವಣೆ ಮತ್ತು ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಪ್ರಮುಖ ಎದುರಾಳಿ ಆಪ್. ಪಂಜಾಬ್ನಲ್ಲಿ ಆಪ್ ವಿರುದ್ಧವೇ ಕಾಂಗ್ರೆಸ್ ಹೀನಾಯವಾಗಿ ಸೋತಿದ್ದರೆ, ಇತ್ತ ಗುಜರಾತ್ನಲ್ಲಿ ಕಾಂಗ್ರೆಸ್ನ ಹೀನಾಯ ಸೋಲು ಮತ್ತು ಬಿಜೆಪಿ ಗೆಲುವಿನಲ್ಲಿ ಆಪ್ ಕೊಡುಗೆ ದೊಡ್ಡದು. ಈ ಹಿನ್ನೆಲೆಯಲ್ಲಿ ಆಪ್ಗೂ ಆಹ್ವಾನ ನೀಡಲಾಗಿಲ್ಲ.
ತೆಲಂಗಾಣದಲ್ಲಿ ಟಿಆರ್ಎಸ್ ಮತ್ತು ಆಂಧ್ರದಲ್ಲಿ ವೈಆರ್ಎಸ್ ವಿರುದ್ಧ ಕಾಂಗ್ರೆಸ್ ಹೋರಾಡುತ್ತಿದೆ. ಒಡಿಶಾದಲ್ಲಿ ಕಾಂಗ್ರೆಸ್ಗೆ ಬಿಜೆಡಿ ನೇರ ಎದುರಾಳಿಯಾಗಿದ್ದು, ಹಲವು ಸಂದರ್ಭಗಳಲ್ಲಿ ಬಿಜೆಪಿ ಪರ ಬಿಜೆಡಿ ನಿಲುವು ತಳೆದಿತ್ತು.
ಕೇರಳದಲ್ಲೂ ಕಾಂಗ್ರೆಸ್ ಮತ್ತು ಎಡಪಕ್ಷಗಳ ಜೊತೆಗೆಯೇ ನೇರ ಸಂಘರ್ಷ. ಆದರೆ ಸಿಪಿಐ ಮತ್ತು ಸಿಪಿಐಎಂನ ರಾಷ್ಟ್ರೀಯ ನಾಯಕರಿಗೆ ಕಾಂಗ್ರೆಸ್ ಸರ್ಕಾರದ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.
ADVERTISEMENT
ADVERTISEMENT